ದೇವಸ್ಥಾನಗಳ ಉಳಿವಿಗಾಗಿ ಸಹಿ ಸಂಗ್ರಹ ಅಭಿಯಾನ
ಮೈಸೂರು

ದೇವಸ್ಥಾನಗಳ ಉಳಿವಿಗಾಗಿ ಸಹಿ ಸಂಗ್ರಹ ಅಭಿಯಾನ

September 15, 2021

ಮೈಸೂರು, ಸೆ.14-ಪರಿಸರ ಸ್ನೇಹಿ ಬಳಗದ ವತಿಯಿಂದ ಮೈಸೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ದಿವಾನ್ ಪೂರ್ಣಯ್ಯ ಛತ್ರದ ಎದುರು ಚಾಮುಂಡೇಶ್ವರಿ ದೇವಸ್ಥಾನವೂ ಸೇರಿದಂತೆ ಮೈಸೂರಿನಲ್ಲಿರುವ ದೇವಸ್ಥಾನಗಳನ್ನು ತೆರವುಗೊಳಿಸದಂತೆ ಸಾರ್ವಜನಿಕರಿಂದ ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು.

ಈ ಅಭಿಯಾನ ಕುರಿತು ಮಾತನಾಡಿದ ನಗರಪಾಲಿಕೆ ಸದಸ್ಯ ಕೆ.ಜಿ.ರಮೇಶ್, ದೇವಸ್ಥಾನಗಳನ್ನು ಒಡೆಯುವ ಕೆಲಸ ನಿಜಕ್ಕೂ ಬೇಸರದ ಸಂಗತಿ. ಯಾರೊಬ್ಬರ ಗಮನಕ್ಕೂ ತರದೆ, ಏಕಾಏಕಿ ರಾತ್ರೋರಾತ್ರಿ ದೇವಸ್ಥಾನಗಳನ್ನು ತೆರವುಗೊಳಿಸುವುದು ಸೂಕ್ತವಲ್ಲ. ಸಾರ್ವಜನಿಕರು ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದು ನಿರ್ಧರಿಸುವುದು ಉತ್ತಮ ಎಂದು ಅಭಿಪ್ರಾಯಪಟ್ಟರು.

ಜೀವನದ ಜಂಜಾಟದ ನಡುವೆ ಜನ ದೇವಾಲಯಗಳಿಗೆ ತೆರಳಿ ಪ್ರಾರ್ಥನೆ, ಧ್ಯಾನದಲ್ಲಿ ತೊಡಗುತ್ತಾರೆ. ಮನಶಾಂತಿಗಾಗಿ ದೇವರ ಮೊರೆ ಹೋಗುತ್ತಾರೆ. ಅಂತಹ ದೇವಾಲಯಗಳನ್ನೇ ಏಕಾಏಕಿ ಧ್ವಂಸಗೊಳಿಸಿದರೆ ಅವರ ಭಾವನೆಗೆ ಆಘಾತ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಸರ್ಕಾರಗಳು ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಇಂತಹ ವಿಚಾರದಲ್ಲಿ ಮುನ್ನಡೆಯಬೇಕು ಎಂದು ಅಭಿಪ್ರಾಯಪಟ್ಟರು.

ಬಿಜೆಪಿ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷ ಡಿ.ಲೋಹಿತ್ ಮಾತನಾಡಿ, ಮೈಸೂರು ವಿಶ್ವವಿಖ್ಯಾತಿ ಹೊಂದಿರುವಂತಹ ಸ್ಥಳ. ಇಲ್ಲಿ ಅನೇಕ ಪ್ರಸಿದ್ಧ ದೇವಸ್ಥಾನಗಳಿವೆ. ಅವುಗಳೊಂದಿಗೆ ಜನ ಶತಶತಮಾನಗಳಿಂದ ಭಕ್ತಿ ಬಾಂಧವ್ಯ ಹೊಂದಿದ್ದು, ಏಕಾಏಕಿ ದೇವಾಲಯ ತೆರವುಗೊಳಿಸುವುದು, ಅವರ ಭಾವನೆಗೆ ಧಕ್ಕೆ ಉಂಟು ಮಾಡುತ್ತದೆ. ಆದ್ದರಿಂದ ಇದರ ಬಗ್ಗೆ ಸರ್ಕಾರ ಎಚ್ಚರಿಕಾ ನಿರ್ಣಯ ಕೈಗೊಳ್ಳುವಂತೆ ಆಗ್ರಹಿಸಿ ಸಹಿ ಸಂಗ್ರಹ ನಡೆಸಲಾಗುತ್ತಿದೆ. ಈ ಸಹಿ ಸಂಗ್ರಹ ಪಟ್ಟಿಯನ್ನು ಜಿಲ್ಲಾಧಿಕಾರಿಗಳು ಮತ್ತು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಮೈಸೂರು ಬ್ರಾಹ್ಮಣ ಮಹಾ ಸಭಾ ಅಧ್ಯಕ್ಷ ಡಿ.ಟಿ.ಪ್ರಕಾಶ್, ಮುಖಂಡರಾದ ನಾಣಿ ಗೌಡ, ಸಮಾಜ ಸೇವಕ ರಾದ ಹರೀಶ್‍ನಾಯ್ಡು, ಕಿಶೋರ್, ಬ್ರಾಹ್ಮಣ ಮಹಾಸಭಾ ಯುವ ಘಟಕದ ನಿರ್ದೇಶಕ ರಾದ ಸುಚೀಂದ್ರ, ಲತಾ ಬಾಲಕೃಷ್ಣ, ಲತಾ ಮೋಹನ್, ಜ್ಯೋತಿ ಇನ್ನಿತರರಿದ್ದರು.

Translate »