ವಿರಾಜಪೇಟೆ ಬಳಿ ದಂಪತಿ ಬಂಧನ; ಇಬ್ಬರ ವಿರುದ್ಧವೂ ರೌಡಿಶೀಟ್ ತೆರೆಯಲು ನಿರ್ಧಾರ
ಮೈಸೂರು

ವಿರಾಜಪೇಟೆ ಬಳಿ ದಂಪತಿ ಬಂಧನ; ಇಬ್ಬರ ವಿರುದ್ಧವೂ ರೌಡಿಶೀಟ್ ತೆರೆಯಲು ನಿರ್ಧಾರ

December 17, 2022

ಮೈಸೂರು, ಡಿ.16(ಎಸ್‍ಬಿಡಿ)- ಮೈಸೂರಿನ ಸಾತಗಳ್ಳಿ ಬಸ್ ನಿಲ್ದಾಣದ ಬಳಿ ಕೆಎಸ್‍ಆರ್‍ಟಿಸಿ ಅಧಿಕಾರಿಗಳಿಗೆ ಮಚ್ಚು ಹಿಡಿದು, ಧಮ್ಕಿ ಹಾಕುವುದರೊಂದಿಗೆ ಪ್ರಾಣಬೆದರಿಕೆ ಹಾಕಿ ತಲೆಮರೆಸಿಕೊಂಡಿದ್ದ ದಂಪತಿಯನ್ನು ಬಂಧಿಸಿದ್ದು, ಇಬ್ಬರ ವಿರುದ್ಧ ತಕ್ಷಣವೇ ರೌಡಿಶೀಟ್ ತೆಗೆಯುವುದಾಗಿ ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ತಿಳಿಸಿದರು.

ತಮ್ಮ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಯಲ್ಲಿ ಈ ವಿಷಯ ತಿಳಿಸಿದ ಅವರು, ಆರೋಪಿಗಳಾದ ಬನ್ನಿಮಂಟಪ ಸಿ ಲೇಔಟ್ ನಿವಾಸಿ ಶಫೀಕ್ ಅಹಮದ್ ಹಾಗೂ ಆತನ ಪತ್ನಿ ಸೈಯದ್ ಮುನ್ನೀಸಾರನ್ನು ಇಂದು ಮುಂಜಾನೆ 3 ಗಂಟೆ ಸಮಯದಲ್ಲಿ ಕೊಡಗಿನ ವಿರಾಜ ಪೇಟೆ ಸಮೀಪದ ಗ್ರಾಮವೊಂದರಲ್ಲಿ ಬಂಧಿಸಲಾಗಿದೆ. ಸಾರ್ವಜನಿಕವಾಗಿ ಮಚ್ಚು ಹಿಡಿದು ಪ್ರಾಣ ಬೆದರಿಕೆ ಹಾಕಿ, ಭಯದ ವಾತಾವರಣ ಸೃಷ್ಟಿಸಿದ ಈ ಇಬ್ಬರ ವಿರುದ್ಧ ಕೂಡಲೇ ರೌಡಿಶೀಟ್ ತೆರೆಯುವಂತೆ ಎಸಿಪಿ ಅವರಿಗೆ ಸೂಚಿಸಿದ್ದೇನೆ ಎಂದರು. ಬಂಧಿತರಿಂದ ಕೆಎಸ್‍ಆರ್‍ಟಿಸಿ ಅಧಿಕಾರಿಗಳನ್ನು ಬೆದರಿ ಸಲು ಝಳಪಿಸಿದ್ದ ಮಚ್ಚು
ಹಾಗೂ ಘಟನೆ ಬಳಿಕ ಪರಾರಿ ಯಾಗಲು ಬಳಸಿದ್ದ ಕಾರನ್ನು ವಶಕ್ಕೆ ಪಡೆಯಲಾಗಿದೆ. ಗಲಾಟೆಯಲ್ಲಿ ಆರೋಪಿ ದಂಪತಿ ಜೊತೆಗಿದ್ದ ಇನ್ನಿಬ್ಬರು ಮಹಿಳೆಯರು, ತಲೆಮರೆಸಿಕೊಳ್ಳಲು ಸಹಕರಿಸಿದವರು ಹಾಗೂ ಅವರಿಗೆ ಆಶ್ರಯ ನೀಡಿದವರ ಬಂಧನಕ್ಕೂ ಶೋಧ ಮುಂದು ವರೆಸಲಾಗಿದೆ ಎಂದರು. ಸಾತಗಳ್ಳಿ ಬಸ್ ನಿಲ್ದಾಣದ ವಾಣಿಜ್ಯ ಸಂಕೀರ್ಣವನ್ನು 2017ರಲ್ಲಿ 12 ವರ್ಷಗಳ ಅವಧಿಗೆ ಶಫೀಕ್‍ಗೆ ವಾರ್ಷಿಕ 48 ಲಕ್ಷ ರೂ. ಬಾಡಿಗೆಗೆ ನೀಡಲಾಗಿತ್ತು. ಆತ ಮತ್ತೊಬ್ಬರಿಗೆ ಸಬ್‍ಲೀಜ್ ಮಾಡಿ, ಬಾಡಿಗೆ ಪಡೆಯುತ್ತಿದ್ದ. ಆದರೆ ತಾನು ಕೆಎಸ್‍ಆರ್‍ಟಿಸಿಗೆ ಪಾವತಿಸಬೇಕಿದ್ದ ಬಾಡಿಗೆ ಯನ್ನು 2 ವರ್ಷದಿಂದ ಪಾವತಿಸದ ಕಾರಣ ಒಂದೂವರೆ ಕೋಟಿ ರೂ.ಗೂ ಹೆಚ್ಚು ಬಾಕಿ ಇತ್ತು. ಈ ಹಿನ್ನೆಲೆಯಲ್ಲಿ ಕೆಎಸ್‍ಆರ್‍ಟಿಸಿ ಅಧಿಕಾರಿಗಳು ನೋಟಿಸ್ ನೀಡಿದ್ದರಿಂದ ಬಾಡಿಗೆದಾರ ನ್ಯಾಯಾಲಯಕ್ಕೆ ಹೋಗಿ ಮಧ್ಯಂತರ ತಡೆ ಆದೇಶ ತಂದಿದ್ದರು. ಬಳಿಕ ಕೆಎಸ್‍ಆರ್‍ಟಿಸಿ ಅಧಿಕಾರಿಗಳು ನ್ಯಾಯಾಲಯದ ಮೊರೆಹೋಗಿದ್ದರಿಂದ ಮಧ್ಯಂತರ ತಡೆಯಾಜ್ಞೆ ರದ್ದಾಯಿತು. ನ್ಯಾಯಾಲಯದ ಆದೇಶದಂತೆ ಡಿ.10ರಂದು ಬೆಳಗ್ಗೆ ಕೆಎಸ್‍ಆರ್‍ಟಿಸಿ ಅಧಿಕಾರಿಗಳು ಬಾಡಿಗೆದಾರರಿಗೆ ನೋಟಿಸ್ ಜಾರಿ ಮಾಡಿ, ವಾಣಿಜ್ಯ ಸಂಕೀರ್ಣವನ್ನು ವಶಕ್ಕೆ ಪಡೆಯಲು ಹೋದಾಗ ಈ ಘಟನೆ ನಡೆದಿದ್ದಾಗಿ ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಹೇಳಿದರು.

ಪೊಲೀಸರು ಇರಲಿಲ್ಲ: ಘಟನೆಯ ವಿಡಿಯೋ ವೀಕ್ಷಿಸಿದವರು ಪೊಲೀಸರ ಸಮಕ್ಷಮದಲ್ಲೇ ಮಚ್ಚು ತೋರಿಸಿ ಬೆದರಿಕೆ ಹಾಕಲಾಗಿದೆ ಎಂದು ತಪ್ಪಾಗಿ ಭಾವಿಸಿದ್ದಾರೆ. ಪೊಲೀಸರು ಹಾಗೂ ಕೆಎಸ್‍ಆರ್‍ಟಿಸಿ ಸಿಬ್ಬಂದಿಯದ್ದು ಒಂದೇ ರೀತಿಯ ಸಮವಸ್ತ್ರ ವಾಗಿರುವುದರಿಂದ ಹಾಗೆ ತಿಳಿದುಕೊಂಡಿದ್ದಾರೆ. ಆದರೆ ಆ ವೇಳೆ ಪೊಲೀಸರು ಅಲ್ಲಿರಲಿಲ್ಲ. ನಮ್ಮ ಒಬ್ಬ ಸಿಬ್ಬಂದಿ ಇದ್ದಿದ್ದರೂ ಮಚ್ಚು ತೋರಿಸಿ ದರ್ಪ ತೋರುವ ಧೈರ್ಯ ಮಾಡುತ್ತಿರಲಿಲ್ಲ. ಘಟನೆ ನಡೆದ ಡಿ.10ರ ಮಧ್ಯಾಹ್ನ ಕೆಎಸ್‍ಆರ್‍ಟಿಸಿ ಡಿಟಿಓ ಮರೀಗೌಡ ಅವರು ಉದಯಗಿರಿ ಪೊಲೀಸ್ ಠಾಣೆಗೆ ದೂರು ನೀಡಿದರು. ಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ ತಿಳಿಸಿದ್ದರಿಂದ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 353, 504, 506, 34ರಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಆ ಸಂದರ್ಭದಲ್ಲಿ ಮಚ್ಚು ತೋರಿಸಿ ಬೆದರಿಕೆ ಹಾಕಿರುವ ಬಗ್ಗೆ ಮಾಹಿತಿ ಇರಲಿಲ್ಲ. ಆದರೆ ಡಿ.12ರಂದು ಘಟನೆಯ ವಿಡಿಯೋ ಲಭ್ಯವಾಗಿದ್ದು, ಅದರಲ್ಲಿ ಶಫೀಕ್ ಪತ್ನಿ ಮಚ್ಚು ಝಳಪಿಸಿ ಪ್ರಾಣಬೆದರಿಕೆ ಹಾಕಿದ್ದು, ಇಬ್ಬರೂ ಅವಾಚ್ಯವಾಗಿ ನಿಂಧಿಸಿದ್ದು ತಿಳಿದಿದ್ದರಿಂದ ತಕ್ಷಣವೇ ಐಪಿಸಿ ಸೆಕ್ಷನ್ 307 ಅನ್ನು ಸೇರ್ಪಡೆಗೊಳಿಸಲಾಯಿತು. ಅಷ್ಟರಲ್ಲಿ ದಂಪತಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದರು. ಆರೋಪಿಗಳ ಬಂಧನಕ್ಕೆ ವಿಶೇಷ ತಂಡವನ್ನು ರಚಿಸಲಾಗಿತ್ತು. ಹಾಸನ, ಚಿಕ್ಕಮಗಳೂರು ಇನ್ನಿತರ ಕಡೆಯಲೆಲ್ಲಾ ಹುಡುಕಾಟ ನಡೆಸಿದ ತಂಡ ವಿರಾಜಪೇಟೆ ಬಳಿಯ ಗ್ರಾಮದಲ್ಲಿದ್ದ ಆರೋಪಿ ದಂಪತಿಯನ್ನು ಬಂಧಿಸಿದೆ ಎಂದು ವಿವರಿಸಿದರು.

ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಪ್ರದೀಪ್ ಗುಂಟಿ ಮಾರ್ಗದರ್ಶನ, ದೇವರಾಜ ವಿಭಾಗದ ಎಸಿಪಿ ಎಂ.ಎನ್.ಶಶಿಧರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿರುವ ಉದಯಗಿರಿ ಠಾಣೆ ಇನ್‍ಸ್ಪೆಕ್ಟರ್ ಪಿ.ಕೆ.ರಾಜು, ಸಬ್‍ಇನ್‍ಸ್ಪೆಕ್ಟರ್‍ಗಳಾದ ಸುನೀಲ್, ರಾಜು, ರೂಪೇಶ್, ಸಿಬ್ಬಂದಿ ಸಿದ್ದೀಕ್ ಅಹಮದ್, ವಿನೋದ್ ರಾಥೋಡ್, ಮಲ್ಲಿಕಾರ್ಜುನ್, ನಾಜಿಯಾ ಭಾನು, ಸಂತೋಷ್, ಸಮೀರ್, ಶಿವರಾಜಪ್ಪ, ಗೋಪಾಲ್, ರವಿಕುಮಾರ್ ಹಾಗೂ ಸಿಡಿಆರ್ ಸೆಲ್‍ನ ಕುಮಾರ್ ಅವರನ್ನೊಳಗೊಂಡ ತಂಡವನ್ನು ಇದೇ ವೇಳೆ ಪ್ರಶಂಸಿಸಿದರು.

Translate »