ಖಾಸಗಿ ಡೆವಲಪರ್‍ಗಳಿಗೆ ಅನುಕೂಲಕಾರಿ ನಿರ್ಧಾರ!
ಮೈಸೂರು

ಖಾಸಗಿ ಡೆವಲಪರ್‍ಗಳಿಗೆ ಅನುಕೂಲಕಾರಿ ನಿರ್ಧಾರ!

December 17, 2022

ಮೈಸೂರು, ಡಿ. 16(ಆರ್‍ಕೆ)-ಸುದೀರ್ಘ 6 ತಿಂಗಳ ನಂತರ ಶುಕ್ರವಾರ ನಡೆದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಸಭೆಯಲ್ಲಿ ಯಾವುದೇ ಮಹತ್ವದ ವಿಷಯಗಳು ಪ್ರಸ್ತಾಪವಾಗದೇ ಕೇವಲ ಖಾಸಗಿ ಡೆವಲಪರ್‍ಗಳಿಗೆ ಅನುಕೂಲವಾಗುವಂತಹ ವಿಷಯ ಗಳನ್ನು ಮಾತ್ರ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗಿದೆ.

ಜಿಲ್ಲಾಧಿಕಾರಿಗಳೂ ಆದ ಮುಡಾ ಅಧ್ಯಕ್ಷ ಕೆ.ವಿ.ರಾಜೇಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಮುಡಾ ಸದಸ್ಯತ್ವ ಹೊಂದಿರುವ ಶಾಸಕರಾದ ಎಸ್.ಎ. ರಾಮದಾಸ್, ತನ್ವೀರ್ ಸೇಠ್, ಎಲ್.ನಾಗೇಂದ್ರ, ಹರ್ಷವರ್ಧನ, ವಿಧಾನಪರಿಷತ್ ಸದಸ್ಯರಾದ ಎ.ಹೆಚ್. ವಿಶ್ವನಾಥ್, ಸಿ.ಎನ್. ಮಂಜೇಗೌಡ, ದಿನೇಶ್ ಗೂಳೀಗೌಡ, ಡಾ.ಡಿ.ತಿಮ್ಮಯ್ಯ, ಮಧು ಮಾದೇಗೌಡ, ಮರಿತಿಬ್ಬೇಗೌಡ, ನಗರಪಾಲಿಕೆಯಿಂದ ಮುಡಾ ಸದಸ್ಯರಾಗಿ ಆಯ್ಕೆಯಾಗಿರುವ ಎಸ್‍ಬಿಎಂ ಮಂಜು, ಮುಡಾ ಆಯುಕ್ತ ಜಿ.ಟಿ. ದಿನೇಶ್ ಕುಮಾರ್ ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು. ಈ ಸಭೆಯಲ್ಲಿ ಒಟ್ಟು 750 ವಿಷಯ ಗಳನ್ನು ಮಂಡಿಸಲಾಗಿತ್ತಾದರೂ, ಅದರಲ್ಲಿ 343 ವಿಷಯಗಳನ್ನು ಮಾತ್ರ ಕೈಗೆತ್ತಿಕೊಳ್ಳಲಾಗಿತ್ತು. ಈ ಪೈಕಿ 200 ವಿಷಯಗಳ ಬಗ್ಗೆ ನಿರ್ಣಯಗಳನ್ನು ಕೈಗೊಳ್ಳಲಾ ಯಿತು. ಮೈಸೂರು ನಗರ ದಲ್ಲಿರುವ 152 ಸಿಎ ನಿವೇಶನ ಗಳ ಹಂಚಿಕೆ ಬಗ್ಗೆ ಆರು ತಿಂಗಳ ಹಿಂದೆ ನಡೆದಿದ್ದ ಉಪಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಈ ಸಭೆಯಲ್ಲಿ ಆ ನಿರ್ಣಯಗಳನ್ನು ಅಂತಿಮಗೊಳಿಸಲಾ ಗುತ್ತದೆ ಎಂದು ಕಳೆದ ಒಂದು ವರ್ಷದ ಹಿಂದೆಯೇ ಪ್ರಾರಂಭಿಕ ಹಣ ಪಾವತಿಸಿ ಅರ್ಜಿ ಸಲ್ಲಿಸಿದ್ದ ಹಲವಾರು ಸಂಘ ಸಂಸ್ಥೆಗಳು ನಿರೀಕ್ಷಿಸಿದ್ದವಾದರೂ ಈ ವಿಷಯ ವನ್ನು ಚರ್ಚೆಗೆ ಕೈಗೆತ್ತಿಕೊಳ್ಳಲಿಲ್ಲ. ಮುಡಾದ ಮಹತ್ವದ ಯೋಜನೆಯಾದ ಬಹುಮಹಡಿ ವಸತಿ ಸಮುಚ್ಛಯ ನಿರ್ಮಿಸಿ ಕೈಗೆಟಕುವ ದರದಲ್ಲಿ ಮನೆಗಳನ್ನು ಹಂಚಿಕೆ ಮಾಡುವ ಬಗ್ಗೆ ಸರ್ಕಾರದ ಅನುಮೋದನೆ ಪಡೆಯುವ ಕುರಿತು ಚರ್ಚೆಯೇ ನಡೆದಿಲ್ಲ. ಕಬಿನಿ ಕುಡಿಯುವ ನೀರು ಯೋಜನೆಗೆ 2ನೇ ಹಂತದಲ್ಲಿ ಅನುದಾನ ನೀಡುವ ಬಗ್ಗೆಯೂ ಪ್ರಸ್ತಾಪವಾಗಿಲ್ಲ. ಬಹು ನಿರೀಕ್ಷಿತ ಪೆರಿಫೆರಲ್ ರಸ್ತೆ ನಿರ್ಮಾಣ ಯೋಜನೆಗೆ ಡಿಪಿಆರ್ ಸಿದ್ಧಪಡಿಸಲು ಹಣ ಮಂಜೂರಾತಿಗೆ ಅನುಮತಿ ಕುರಿತು ಈ ಸಭೆಯಲ್ಲಿ ಪ್ರಸ್ತಾಪವಾಗಿಲ್ಲ. 2023ನೇ ಸಾಲಿನ ಬಜೆಟ್ ತಯಾರಿ ಬಗ್ಗೆಯೂ ಕೂಡ ಸಭೆಯಲ್ಲಿ ಚರ್ಚಿಸಿಲ್ಲ.

ಬೆಳಗ್ಗೆ 11.15ಕ್ಕೆ ಪ್ರಾರಂಭವಾದ ಸಭೆ ಸಂಜೆ 4.30ಕ್ಕೆ ಮುಕ್ತಾಯವಾಯಿತಾದರೂ ಈ ಸಭೆಯು ಖಾಸಗಿ ಬಡಾವಣೆಗಳ ನಕ್ಷೆ ಅನುಮೋದನೆ, ಭೂ ಪರಿವರ್ತನೆ, ನಿವೇಶನ ಬಿಡುಗಡೆಗೆ ಅನುಮತಿ ನೀಡುವ ವಿಷಯಗಳಿಗೆ ಮಾತ್ರ ಸೀಮಿತವಾಗಿತ್ತು. ಆರು ತಿಂಗಳ ನಂತರ ಮುಡಾ ಸಭೆ ನಡೆಯುತ್ತಿದ್ದರಿಂದ ಈ ಕಚೇರಿ ಸುತ್ತಮುತ್ತ ಡೆವಲಪರ್‍ಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು ಹಾಗೂ ಖಾಸಗಿ ಬಡಾವಣೆಗಳಿಗೆ ಸಂಬಂಧಿಸಿದವರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದು ಕಂಡುಬಂತು.

Translate »