ರಾಜ್ಯದಲ್ಲಿ ಮತ್ತೆ 9 ಮಂದಿಯಲ್ಲಿ ಸೋಂಕು ಸೋಂಕಿತರ ಸಂಖ್ಯೆ 427ಕ್ಕೆ ಏರಿಕೆ
ಮೈಸೂರು

ರಾಜ್ಯದಲ್ಲಿ ಮತ್ತೆ 9 ಮಂದಿಯಲ್ಲಿ ಸೋಂಕು ಸೋಂಕಿತರ ಸಂಖ್ಯೆ 427ಕ್ಕೆ ಏರಿಕೆ

April 23, 2020

ಬೆಂಗಳೂರು, ಏ.22-ರಾಜ್ಯದಲ್ಲಿ ಬುಧವಾರ ನಾಲ್ಕು ತಿಂಗಳ ಮಗು ಹಾಗೂ ನಾಲ್ವರು ಮಹಿಳೆಯರೂ ಸೇರಿ 9 ಮಂದಿಗೆ ಕೊರೊನಾ ವೈರಸ್ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 427ಕ್ಕೇರಿದೆ. ಮೈಸೂರು ಜಿಲ್ಲೆಯಲ್ಲಿ ನಂಜನಗೂಡಿನ ಇಬ್ಬರಿಗೆ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 88ಕ್ಕೆ ಏರಿಕೆಯಾಗಿದ್ದರೂ, ಇಂದು ಇಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರಿಂದಾಗಿ ಮೈಸೂರಿನಲ್ಲಿ ಗುಣಮುಖರಾದವರ ಸಂಖ್ಯೆ 33ಕ್ಕೆ ಏರಿದ್ದರೆ, 55 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರು ಮತ್ತು ಮೈಸೂರಿನಲ್ಲಿ ಸೋಂಕು ತಕ್ಕ ಮಟ್ಟಿಗೆ ನಿಯಂತ್ರಣದಲ್ಲಿದೆ. ಆದರೆ, ಕಲಬುರಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇಂದು 4 ತಿಂಗಳ ಮಗು, ಮೂವರು ಮಹಿಳೆಯರೂ ಸೇರಿ ಆ ಜಿಲ್ಲೆಯಲ್ಲಿ ಐವರಿಗೆ ಸೋಂಕು ದೃಢಪಟ್ಟಿದೆ. ಅವರಲ್ಲಿ 53 ವರ್ಷದ ವ್ಯಕ್ತಿ ಯಾವುದೇ ಟ್ರಾವಲ್ ಹಿಸ್ಟರಿ ಇಲ್ಲದೇ ಉಸಿರಾಟದ ತೊಂದರೆಯಿಂದ ಸೋಂಕಿಗೆ ಒಳಗಾಗಿದ್ದಾರೆ.

ಬೆಂಗಳೂರು ನಗರದಲ್ಲಿ ಇಂದು 28 ವರ್ಷದ ಮಹಿಳೆ ಮತ್ತು 54 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದ್ದು, ಇದರಿಂದಾಗಿ ಅಲ್ಲಿ ಸೋಂಕಿತರ ಸಂಖ್ಯೆ 91ಕ್ಕೆ ಏರಿಕೆಯಾಗಿದ್ದು, 48 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೆ, 39 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರಲ್ಲಿ ಈಗಾಗಲೇ ನಾಲ್ವರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಇಂದು ಇಬ್ಬರು ಸೋಂಕಿನಿಂದ ಮುಕ್ತರಾಗಿದ್ದು, ಒಟ್ಟು 131 ಮಂದಿ ಗುಣಮುಖರಾದಂತಾಗಿದೆ. ಇವರಲ್ಲಿ ಒಟ್ಟು 17 ಮಂದಿ ಮೃತಪಟ್ಟಿದ್ದಾರೆ. ಉಡುಪಿ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಕ್ರಮವಾಗಿ ಮೂವರು ಮತ್ತು ಇಬ್ಬರಿಗೆ ಸೋಂಕು ತಗುಲಿದ್ದು, ಅವರೆಲ್ಲರೂ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಚಿತ್ರದುರ್ಗ ಮತ್ತು ಕೊಡಗಿನಲ್ಲಿ ಸೋಂಕಿಗೊಳಗಾಗಿದ್ದ ತಲಾ ಓರ್ವರು ಗುಣಮುಖನಾಗಿದ್ದು, ಈ ನಾಲ್ಕೂ ಜಿಲ್ಲೆಗಳು ಸದ್ಯಕ್ಕೆ ಸೋಂಕುಮುಕ್ತ ಜಿಲ್ಲೆಗಳಾಗಿವೆ.

Translate »