ಮೈಸೂರು, ಮೇ2(ಆರ್‍ಕೆಬಿ)- ರಾಜ್ಯದಲ್ಲಿ 14 ದಿನಗಳ ಕೋವಿಡ್ ಕಫ್ರ್ಯೂನಿಂದಾಗಿ ಕೊರಿಯರ್ ಸೇವೆಗಳ ಮೇಲೂ ಪರಿಣಾಮ ಉಂಟಾಗಿದೆ. ಶೇ.50ರಿಂದ 65ರಷ್ಟು ವಹಿವಾಟು ಕುಸಿತಗೊಂಡಿದೆ ಎಂಬುದು ಕೊರಿಯರ್ ಸೇವೆ ನೀಡುತ್ತಿರುವ ಕಂಪನಿಗಳ ಸ್ಥಳೀಯ ಮುಖ್ಯಸ್ಥರ ಅಳಲು.
ಮೈಸೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಲವು ಕೊರಿ ಯರ್ ಸೇವಾ ಸಂಸ್ಥೆಗಳು ನಷ್ಟದ ನಡುವೆಯೂ ತಮ್ಮ ಸೇವೆ ಯನ್ನು ನಿಲ್ಲಿಸದೆ ಗ್ರಾಹಕರ ಸೇವೆಯಲ್ಲಿ ನಿರತವಾಗಿವೆ.
ಜೊತೆಗೆ ಆನ್‍ಲೈನ್ ಸೇವೆ ಸಲ್ಲಿಸುವ ಫ್ಲಿಪ್‍ಕಾರ್ಟ್, ಅಮೆ ಜಾನ್ ಸೇರಿದಂತೆ ಹಲವು ಆನ್‍ಲೈನ್ ಸೇವಾ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಇವೆಲ್ಲವೂ ಈಗ ಕೋವಿಡ್ ಕಫ್ರ್ಯೂ ನಡು ವೆಯೂ ಸರ್ಕಾರದ ಮಾರ್ಗಸೂಚಿ ಅನುಸರಿಸಿ ತಮ್ಮ ಸೇವೆಯನ್ನು ಎಡೆಬಿಡದೆ ಕೈಗೊಂಡು ಗ್ರಾಹಕರಿಗೆ ಸೇವೆ ನೀಡುತ್ತಿವೆ.
ಕೊರೊನಾ ಕಫ್ರ್ಯೂನಿಂದಾಗಿ ಗ್ರಾಹಕರು ತಮ್ಮ ಬಳಿ ಬರಲಾಗು ತ್ತಿಲ್ಲ. ನಾವೇ ಅವರ ಬಳಿ ಹೋಗಿ ಅವರಿಂದ ಪಾರ್ಸಲ್‍ಗಳನ್ನು ಪಡೆದು ಸೇವೆ ಸಲ್ಲಿಸುತ್ತಿದ್ದೇವೆ. ಆದರೆ ಮೊದಲಿನಂತೆ ವಹಿ ವಾಟು ಇಲ್ಲ. ಹೀಗಾಗಿ ಆರ್ಥಿಕ ಸ್ಥಿತಿಯ ಮೇಲೂ ಪರಿಣಾಮ ಉಂಟಾಗಿದೆ ಎಂದು ತಮ್ಮ ಅಳಲು ತೋಡಿಕೊಳ್ಳುತ್ತಾರೆ.
ಈ ಸಂಬಂಧ ಪ್ರೊಫೆಷನಲ್ ಕೊರಿಯರ್ ಸರ್ವಿಸ್‍ನ ಹಿರಿಯ ವ್ಯವಸ್ಥಾಪಕ (ಕಾರ್ಯಾಚರಣೆ) ಉದಯ್ `ಮೈಸೂರು ಮಿತ್ರ’ ನೊಂದಿಗೆ ಮಾತನಾಡಿ, ಕಫ್ರ್ಯೂ ನಡುವೆಯೂ ಗ್ರಾಹಕರಿಗೆ ಯಾವುದೇ ತೊಂದರೆ ಆಗದಂತೆ ಸೇವೆ ಸಲ್ಲಿಸುತ್ತಿದ್ದೇವೆ. ಕಟ್ಟಡಗಳ ಬಾಡಿಗೆ, ನೌಕರರ ಸಂಬಳ ಸೇರಿದಂತೆ ಇನ್ನಿತರೆ ಖರ್ಚುಗಳನ್ನು ನಿಭಾಯಿಸಲೇಬೇಕಾದ ಸ್ಥಿತಿಯಲ್ಲಿ ನಿರ್ವಹಿಸುತ್ತಿದ್ದೇವೆ ಎನ್ನುತ್ತಾರೆ.
ಪ್ರೊಫೆಷನಲ್ ಕೊರಿಯರ್ ಸರ್ವಿಸ್‍ನ ಮೈಸೂರು ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶ್ ಪ್ರಕಾರ, ದೇಶ, ವಿದೇಶಗಳಿಗೆ ಪಾರ್ಸಲ್ ರವಾನಿಸುವ ನಮ್ಮ ಸಂಸ್ಥೆ, ನಮ್ಮದೇ ವಾಹನಗಳನ್ನು ಹೊಂದಿ ರುವುದರಿಂದ ಸರ್ವಿಸ್ ನೀಡಲು ಯಾವುದೇ ತೊಂದರೆ ಇಲ್ಲ. ಆದರೆ ಗ್ರಾಹಕರು ನಮ್ಮಲ್ಲಿಗೆ ಬರಲಾಗುತ್ತಿಲ್ಲ. ಆದರೂ ನಾವೇ ಕರೆ ಮಾಡಿದ ಗ್ರಾಹಕರ ಬಳಿ ತೆರಳಿ ಅವರಿಂದ ಪಾರ್ಸಲ್ ಇನ್ನಿತÀರೆ ದಾಖಲೆಗಳನ್ನು ಜವಾಬ್ದಾರಿಯಿಂದ ರವಾನಿಸುವ ಕೆಲಸ ಮಾಡುತ್ತಿದ್ದೇವೆ. ಶೇ.65ರಷ್ಟು ವಹಿವಾಟು ಕಡಿತವಾಗಿದ್ದರೂ ಸಂಸ್ಥೆಯ ನೌಕರರು ಸಹ ನಮ್ಮೊಂದಿಗೆ ಕೈಜೋಡಿಸಿ ಸೇವೆಯಲ್ಲಿ ನಿರತರಾಗಿರುವುದು ಗ್ರಾಹಕರಿಗೆ ಸೇವೆ ನೀಡಲು ತೊಂದರೆಯಾಗು ತ್ತಿಲ್ಲ. ಅಲ್ಲದೆ, ಕೋವಿಡ್ ಕಫ್ರ್ಯೂ ಸಂದರ್ಭದಲ್ಲಿ ಹಲವು ವಿಮಾನ ಗಳು ದರ ಏರಿಕೆ ಮಾಡಿವೆ. ಹಾಗಿದ್ದೂ ನಾವು ಗ್ರಾಹಕರಿಗೆ ಹೊರೆಯಾಗದಂತೆ ಯಾವುದೇ ದರ ಏರಿಸದೆ ಎಂದಿನ ದರದಲ್ಲೇ ಪಾರ್ಸಲ್ ಇನ್ನಿತರೆ ರವಾನಿಸುತ್ತಿದ್ದೇವೆ. ಎಂದರು.
ವೈದ್ಯಕೀಯ ವಸ್ತುಗಳು, ಔಷಧಿಗಳೇ ಹೆಚ್ಚು: ಕೊರಿಯರ್ ಸರ್ವಿಸ್ ಗಳಲ್ಲಿ ವೈದ್ಯಕೀಯ ವಸ್ತುಗಳು ಮತ್ತು ಔಷಧಿಗಳೇ ಹೆಚ್ಚು ಬರುತ್ತಿದ್ದು, ಅದನ್ನು ಗ್ರಾಹಕರಿಗೆ ಸೂಕ್ತ ಸಮಯಕ್ಕೆ ತಲುಪಿಸುವ ಕೆಲಸ ಮಾಡುತ್ತಿದ್ದೇವೆ ಎನ್ನುತ್ತಾರೆ ಕಾಳಿದಾಸ ರಸ್ತೆಯ ಅರಾಮೆಕ್ಸ್ ಕೊರಿಯರ್ ಸಂಸ್ಥೆಯ ಮೈಸೂರು ಮುಖ್ಯಸ್ಥ ಎನ್.ಮಂಜುನಾಥ್.
ಗ್ರಾಹಕರು ಔಷಧಿ ಮತ್ತು ಆರೋಗ್ಯ ಸಂಬಂಧಿತ ಸರಕುಗಳನ್ನು ಕಳುಹಿಸುವುದನ್ನು ಹೊರತುಪಡಿಸಿದರೆ, ಪಾರ್ಸಲ್ ಸೇವೆಗಳನ್ನು ಹೆಚ್ಚು ಬಳಸುತ್ತಿಲ್ಲ. ಪ್ರಸ್ತುತ ನಾವು ಲಾಭ-ನಷ್ಟಗಳ ಬಗ್ಗೆ ಯೋಚಿಸದೇ ಗ್ರಾಹಕರಿಗೆ ಸೇವೆ ನೀಡುತ್ತಿದ್ದೇವೆ ಎಂಬುದು ಹಲವು ಕೊರಿಯರ್ ಸಂಸ್ಥೆಗಳ ಮುಖ್ಯಸ್ಥರ ಅಭಿಪ್ರಾಯ.