ರಾಜ್ಯದಲ್ಲಿ ಕೋವಿಡ್ ದುರ್ಬಲ ಪಾಸಿಟಿವಿಟಿ ದರ ಶೇ.4ಕ್ಕಿಂತ ಕಡಿಮೆ
News

ರಾಜ್ಯದಲ್ಲಿ ಕೋವಿಡ್ ದುರ್ಬಲ ಪಾಸಿಟಿವಿಟಿ ದರ ಶೇ.4ಕ್ಕಿಂತ ಕಡಿಮೆ

February 20, 2022

ಬೆಂಗಳೂರು, ಫೆ. 19-ರಾಜ್ಯದಲ್ಲಿ ಕೊರೊನಾ ಮೂರನೇ ಅಲೆಯ ಏರಿಳಿತ ಮುಂದುವರೆದಿದ್ದು, ಕಳೆದ 24 ಗಂಟೆ ಯಲ್ಲಿ 1,137 ಹೊಸ ಪಾಸಿಟಿವ್ ಪ್ರಕರಣಗಳು ವರದಿ ಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 39,35,585ಕ್ಕೆ ಏರಿಕೆಯಾಗಿದೆ. ಇನ್ನು ರಾಜ್ಯದಲ್ಲಿ ಮಹಾಮಾರಿ ಕೊರೊನಾ ದಿಂದ ಇಂದು 20 ಮಂದಿ ಮೃತಪಟ್ಟಿದ್ದು, ಇದರೊಂದಿಗೆ ಸಾವಿನ ಸಂಖ್ಯೆ 39,777ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಬೆಂಗಳೂರಿನಲ್ಲಿ ಇಂದು 646 ಮಂದಿಗೆ ಸೋಂಕು ದೃಢಪಟ್ಟಿದೆ. ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ 17,75,342ಕ್ಕೆ ಏರಿಕೆಯಾಗಿದೆ. ಇಂದು ನಗರದಲ್ಲಿ ಕೊರೊನಾ ದಿಂದ 8 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೇಳಿದೆ. ರಾಜ್ಯದಲ್ಲಿ ಇಂದು 3,870 ಸೋಂಕಿತರು ಗುಣಮುಖರಾಗಿ ಆಸ್ಪತ್ರೆ ಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿ ನಿಂದ ಚೇತರಿಸಿಕೊಂಡವರ ಸಂಖ್ಯೆ 38,82,340ಕ್ಕೆ ಏರಿಕೆಯಾಗಿದೆ. ಇನ್ನು 13,431 ಸಕ್ರಿಯ ಪ್ರಕರಣಗಳಿವೆ.

ಈ ಪೈಕಿ 21 ಜಿಲ್ಲೆಗಳಲ್ಲಿ ರಾಜ್ಯ ಸರಾಸರಿ 1.69 ಶೇಕಡಾಕ್ಕಿಂತ ಕಡಿಮೆ ಪಾಸಿಟಿವಿಟಿ ಪ್ರಮಾಣವಿದ್ದು, ಇದರೊಂದಿಗೆ, ಕೇಂದ್ರ ಆರೋಗ್ಯ ಸಚಿವಾಲಯವು ಕರ್ನಾಟಕವನ್ನು ಶೇಕಡಾ 5 ಕ್ಕಿಂತ ಕಡಿಮೆ ಟಿಪಿಆರ್ ಹೊಂದಿರುವ ರಾಜ್ಯಗಳಲ್ಲಿ ಪಟ್ಟಿ ಮಾಡಿದೆ.

ಕೋವಿಡ್-19 ವಾರ್‍ರೂಮ್ ಮಾಹಿತಿ ನೀಡಿರುವ ಪ್ರಕಾರ, ಕೆಲವು ವಾರಗಳ ಹಿಂದೆ ಈ ಜಿಲ್ಲೆಗಳಲ್ಲಿ ಪಾಸಿಟಿವಿ ಪ್ರಮಾಣ ಶೇ.10-15ರವರೆಗೆ ಇತ್ತು. ತದನಂತರ ದಿನಗಳಲ್ಲಿ ಕ್ರಮೇಣ ಇಳಿಕೆಯಾಗಲು ಆರಂಭವಾಗಿತ್ತು. ಬೆಂಗಳೂರಿನಂತಹ ಇತರೆ ನಗರಗಳಲ್ಲಿ ಜನವರಿ ಎರಡನೇ ವಾರದಲ್ಲಿ ಪಾಸಿಟಿವಿಟಿ ದರ ಶೇ.33ಕ್ಕೆ ತಲುಪಿತ್ತು. ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಕೊಪ್ಪಳವು ಅತ್ಯಂತ ಕನಿಷ್ಠ ಶೇ.0.23 ಪಾಸಿಟಿವಿಟಿ ದರವನ್ನು ಹೊಂದಿದ್ದರೆ, ಬೆಂಗ ಳೂರು ಗ್ರಾಮಾಂತರವು ಅತೀ ಹೆಚ್ಚು 3.09 ಶೇಕಡಾ ಪಾಸಿಟಿವಿಟಿ ದರ ಹೊಂದಿದೆ ಎಂದು ತಿಳಿಸಿದೆ. ಈ ಬೆಳವಣಿಗೆಯು ರಾಜ್ಯದಲ್ಲಿ ಕೊರೋನಾ 3ನೇ ಅಲೆ ಅಂತ್ಯದಲ್ಲಿದೆ ಎಂಬುದನ್ನು ಸೂಚಿಸುತ್ತದೆ. ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಕೊರೊನಾ ಅಬ್ಬರ ಏರಿಕೆಯಾಗುವ ಸಾಧ್ಯತೆಗಳಿದ್ದು, ಈ ಅವಧಿಯಲ್ಲಿ ಜನರು ಹೆಚ್ಚು ಜಾಗರೂಕ ರಾಗಿರಬೇಕು. ರಾಜ್ಯದಲ್ಲಿ ಕೊರೊನಾದ ಮೊದಲ, ಎರಡನೇ ಹಾಗೂ ಮೂರನೇ ಅಲೆ ಇದೇ ತಿಂಗಳುಗಳಲ್ಲಿ ಆರಂಭವಾಗಿತ್ತು. ಈ ಸಮಯಲ್ಲಿ ಜನರು ಮೈಮರೆಯದೆ ಮಾಸ್ಕ್ ಗಳನ್ನು ಧರಿಸಿ, ಕೋವಿಡ್ ಸೂಕ್ತ ನಡವಳಿಕೆಯನ್ನು ಅನುಸರಿಸಬೇಕು ಎಂದು ರಾಜ್ಯದ ಕೋವಿಡ್-19 ಕಾರ್ಯಪಡೆಯ ಲ್ಯಾಬ್ ಮತ್ತು ಪರೀಕ್ಷೆಯ ನೋಡಲ್ ಅಧಿಕಾರಿ ಮತ್ತು ರಾಜ್ಯ ಕ್ಲಿನಿಕಲ್ ತಜ್ಞರ ಸಮಿತಿಯ ಸದಸ್ಯ ಡಾ ಸಿ ಎನ್ ಮಂಜುನಾಥ್ ಅವರು ಹೇಳಿದ್ದಾರೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ತಾಂತ್ರಿಕ ಸಲಹಾ ಸಮಿತಿ (ಟಿಎಸಿ) ಸದಸ್ಯರನ್ನು ಶ್ಲಾಘಿಸಿರುವ ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ ಎಂ ಕೆ ಸುದರ್ಶನ್ ಅವರು, ಕೊರೊನಾ ಮೂರನೇ ಅಲೆ ಸಾಕಷ್ಟು ಹೊಡೆತವನ್ನು ನೀಡಿದೆ. ಇದರಿಂದ ಮುಂದಿನ ದಿನಗಳಲ್ಲಿ ಸೋಂಕು ಹೆಚ್ಚಾದಾಗ ಅದನ್ನು ತಡೆಯಲು ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದು ನಮಗೆ ನಿಖರವಾಗಿ ತಿಳಿದಿದೆ. ಮೂರನೇ ಅಲೆ ವೇಳೆ ಹೋಂ ಐಸೋಲೇಷನ್ ಪ್ರಕರಣಗಳನ್ನು ಸೂಕ್ತವಾಗಿ ನಿರ್ವಹಿಸಲಾಯಿತು. ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆ ಇತ್ತು. ಸಾವಿನ ಸಂಖ್ಯೆ ಸ್ವಲ್ಪ ಮಟ್ಟಿಗೆ ಏರಿಕೆಯಾಗಿದ್ದರೂ, ದೀರ್ಘಕಾಲಿಕ ರೋಗದಿಂದ ಬಳಲುತ್ತಿರುವವರ ಈ ಬಾರಿ ಹೆಚ್ಚು ಸಾವನ್ನಪ್ಪಿದ್ದಾರೆ. ರಾಜ್ಯ ಕೆಲವು ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಶೇ.2-3ರಷ್ಟಿದೆ ಮುಂದಿನ ದಿನಗಳಲ್ಲಿ ಅದೂ ಕೂಡ ಕಡಿಮೆಯಾಗಲಿದೆ ಎಂದು ಹೇಳಿದ್ದಾರೆ.

ಈ ನಡುವೆ ಕೊರೊನಾ ಮೂರನೇ ಅಲೆ ಕುರಿತು ಸೆರೋ ಸರ್ವೇ ನಡೆಸುವ ಕುರಿತು ಶೀಘ್ರದಲ್ಲೇ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಲಿದ್ದು, ಸಭೆಯಲ್ಲಿ ಹೊಸ ರೂಪಾಂತರಿ ವೈರಸ್, ಅದನ್ನು ಎದುರಿಸುವ ಕ್ರಮಗಳು ಹಾಗೂ ಸನ್ನದ್ಧತೆಯ ಬಗ್ಗೆಯೂ ಅಧಿಕಾರಿಗಳು ಚರ್ಚೆ ನಡೆಸಲಿದ್ದಾರೆ. ನಮ್ಮ ತಜ್ಞರು ಹಲವಾರು ದೇಶಗಳ ಗಣಿತದ ಮಾದರಿಗಳು ಮತ್ತು ಇತರೆ ಮಾಹಿತಿಯನ್ನು ನಿಕಟವಾಗಿ ಗಮನಿಸುತ್ತಿದ್ದಾರೆ. ಈ ಬಾರಿ ನಾವು ಸೂತ್ರದ ಮಾದರಿಯನ್ನು ಅನುಸರಿಸಿದ್ದೇವೆ ಮತ್ತು ಇದು ತುಂಬಾ ಸೂಕ್ತಕರ ಮಾದರಿಯಾಗಿದೆ. ನಮ್ಮ ಸಂಶೋಧಕರ ಗಣಿತದ ಮಾದರಿಗಳು ಮತ್ತು ಮುನ್ಸೂಚನೆಗಳನ್ನೂ ಕೂಡ ಗಮನಿಸುತ್ತಿದ್ದಾರೆಂದು ಎಂದು ಡಾ.ಸುದರ್ಶನ್ ತಿಳಿಸಿದ್ದಾರೆ.

Translate »