ಕನ್ನಡ ಚಿತ್ರರಂಗದ ಹಿರಿಯ ನಟ ರಾಜೇಶ್ ಇನ್ನಿಲ್ಲ
News

ಕನ್ನಡ ಚಿತ್ರರಂಗದ ಹಿರಿಯ ನಟ ರಾಜೇಶ್ ಇನ್ನಿಲ್ಲ

February 20, 2022

ಬೆಂಗಳೂರು, ಫೆ. 19- ಕನ್ನಡ ಚಿತ್ರರಂಗದ ಹಿರಿಯ ನಟ ‘ಕಲಾತಪಸ್ವಿ’ ರಾಜೇಶ್ ಅವರು ಶನಿವಾರ ವಿಧಿವಶ ರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟ ರಾಜೇಶ್ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಇಂದು ಚಿಕಿತ್ಸೆ ಫಲಕಾರಿಯಾಗದೆ ಬೆಳಗಿನ 2.30ರ ಸುಮಾರಿಗೆ ಕೊನೆಯುಸಿರೆಳೆ ದಿದ್ದಾರೆ. ರಾಜೇಶ್ ಅವರಿಗೆ 89 ವರ್ಷ ವಯಸ್ಸಾಗಿತ್ತು. ಕಿಡ್ನಿ ವೈಫಲ್ಯ ಹಾಗೂ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ರಾಜೇಶ್ ಅವರಿಗೆ ಬೆಂಗಳೂರಿನ ಕಸ್ತೂರಬಾ ನಗರದಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ನಟ ರಾಜೇಶ್ ಬೆಂಗಳೂರಿನಲ್ಲೇ ಜನಿಸಿದವರು. ಇವರ ಮೂಲ ಹೆಸರು ಮುನಿ ಚೌಡಪ್ಪ. ಚಿಕ್ಕವಯಸ್ಸಿನಲ್ಲೇ ನಟನೆಯಲ್ಲಿ ಆಸಕ್ತಿ ಬೆಳೆಸಿಕೊಂಡ ಮುನಿ ಚೌಡಪ್ಪ ರಂಗಭೂಮಿ ಪ್ರವೇಶಿಸಿದರು. ತಂದೆ-ತಾಯಿಗೆ ಗೊತ್ತಿಲ್ಲದಂತೆ ‘ಸುದರ್ಶನ ನಾಟಕ ಮಂಡಳಿ’ ಸೇರಿದ ಮುನಿ ಚೌಡಪ್ಪ ರಂಗಭೂಮಿಯಲ್ಲಿ ‘ವಿದ್ಯಾಸಾಗರ್’ ಹೆಸರಿನಿಂದ ಗುರುತಿಸಿಕೊಂಡರು. ಬಳಿಕ ತಮ್ಮದೇ ಆದ ‘ಶಕ್ತಿ ನಾಟಕ ಮಂಡಳಿ’ಯನ್ನು ವಿದ್ಯಾಸಾಗರ್ ಕಟ್ಟಿದರು. ‘ನಿರುದ್ಯೋಗಿ ಬಾಳು’, ‘ಬಡವನ ಬಾಳು’, ‘ವಿಷ ಸರ್ಪ’, ‘ನಂದಾ ದೀಪ’, ‘ಚಂದ್ರೋದಯ’, ‘ಕಿತ್ತೂರು ರಾಣಿ ಚೆನ್ನಮ್ಮ’ ಮುಂತಾದ ನಾಟಕಗಳ ಮೂಲಕ ವಿದ್ಯಾಸಾಗರ್ ಗಮನ ಸೆಳೆದರು.

ನಟನಾಗುವ ಇಚ್ಛೆ ಹೊಂದಿದ್ದ ರಾಜೇಶ್ ಅವರು ಪಿಡಬ್ಲ್ಯೂಡಿ ಇಲಾಖೆಯಲ್ಲಿ ಶೀಘ್ರಲಿಪಿ ಮತ್ತು ಬೆರಳಚ್ಚುಗಾರರಾಗಿ ಕೆಲಸ ಆರಂಭಿಸಿದರು. ರಂಗಭೂಮಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ವಿದ್ಯಾಸಾಗರ್ ಅವರನ್ನು ‘ವೀರ ಸಂಕಲ್ಪ’ ಸಿನಿಮಾದ ಮೂಲಕ ಹುಣಸೂರು ಕೃಷ್ಣಮೂರ್ತಿ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು.

ತಮ್ಮ ಕೆಲಸಕ್ಕೆ 15 ದಿನ ರಜೆ ಹಾಕಿ ಮದ್ರಾಸ್‍ಗೆ ತೆರಳಿದ ವಿದ್ಯಾಸಾಗರ್ ‘ವೀರ ಸಂಕಲ್ಪ’ ಶೂಟಿಂಗ್‍ನಲ್ಲಿ ಪಾಲ್ಗೊಂಡಿದ್ದರು. ಅಲ್ಲಿಂದ ವಿದ್ಯಾಸಾಗರ್‍ಗೆ ಅವಕಾಶಗಳು ಹುಡುಕಿಕೊಂಡು ಬರಲಾರಂಭಿಸಿದವು. ‘ಶ್ರೀ ರಾಮಾಂಜನೇಯ ಯುದ್ಧ’, ‘ಗಂಗೆ ಗೌರಿ’ ಚಿತ್ರಗಳಲ್ಲೂ ವಿದ್ಯಾಸಾಗರ್ ಅಭಿನಯಿಸಿದರು. 1968ರಲ್ಲಿ ತೆರೆಕಂಡ ‘ನಮ್ಮ ಊರು’ ಚಿತ್ರದಲ್ಲಿ ತಮ್ಮ ಹೆಸರನ್ನು ವಿದ್ಯಾಸಾಗರ್ ಇಂದ ರಾಜೇಶ್ ಎಂದು ಬದಲಾ ಯಿಸಿಕೊಂಡರು. ನಟ ರಾಜೇಶ್ ಅವರ ವೃತ್ತಿ ಬದುಕಿಗೆ ದೊಡ್ಡ ತಿರುವು ಕೊಟ್ಟ ಚಿತ್ರ ‘ನಮ್ಮ ಊರು’. ಸಿ.ವಿ.ಶಿವಶಂಕರ್ ನಿರ್ದೇಶನದ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಚಿತ್ರದಲ್ಲಿ ನಟ ರಾಜೇಶ್ ಗಾಯಕರಾಗಿಯೂ ಜನಪ್ರಿಯತೆ ಪಡೆದರು.

‘ನಮ್ಮ ಊರು’, ‘ಗಂಗೆ ಗೌರಿ’, ‘ಸತೀ ಸುಕನ್ಯ’, ‘ಬೆಳುವಲದ ಮಡಿಲಲ್ಲಿ’, ‘ಕಪ್ಪು ಬಿಳುಪು’, ‘ಬೃಂದಾವನ’, ‘ಬೋರೆ ಗೌಡ ಬೆಂಗಳೂರಿಗೆ ಬಂದ’, ‘ಮರೆಯದ ದೀಪಾವಳಿ’, ‘ಪ್ರತಿಧ್ವನಿ’, ‘ಕಾವೇರಿ’, ‘ದೇವರ ಗುಡಿ’, ‘ಬದುಕು ಬಂಗಾರವಾಯ್ತು’, ‘ಸೊಸೆ ತಂದ ಸೌಭಾಗ್ಯ’, ‘ಮುಗಿಯದ ಕಥೆ’, ‘ಬಿಡುಗಡೆ’, ‘ದೇವರದುಡ್ಡು’, ‘ಕಲಿಯುಗ’, ‘ಪಿತಾಮಹ’ ಮುಂತಾದ ಚಿತ್ರಗಳಲ್ಲಿ ರಾಜೇಶರು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ವಿವಿಧ ಕ್ಷೇತ್ರಗಳ ಗಣ್ಯರ ಸಂತಾಪ: ಹಿರಿಯ ನಟ ರಾಜೇಶ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಕನ್ನಡ ಚಿತ್ರರಂಗದ ಹಿರಿಯ ನಟ ರಾಜೇಶ್ ಅವರು ಇಂದು ನಮ್ಮನ್ನು ಅಗಲಿದ್ದಾರೆ. ಅವರು ಅತ್ಯಂತ ಪ್ರೌಢಿಮೆಯ ಅಭಿನಯವನ್ನು ಪ್ರದರ್ಶಿಸುತ್ತಿದ್ದ ಕಲಾವಿದರಾಗಿದ್ದರು. ಅವರ ಸಿನಿಮಾಗಳು ಮನದಾಳದಲ್ಲಿದೆ. ಯಾವುದೇ ಪಾತ್ರವನ್ನು ನೀಡಿದರೂ ಸುಲಲಿತ ವಾಗಿ ಅಭಿನಯಿಸುವ ಸಾಮರ್ಥ್ಯ ಅವರಲ್ಲಿತ್ತು. ಕಲಾಸೇವೆಯನ್ನು ಅವರು ಅತ್ಯಂತ ಪ್ರಾಮಾಣಿಕತೆಯಿಂದ ಮಾಡಿದ್ದಾರೆ. ತಾನು ದೊಡ್ಡ ನಟನೆಂಬ ಆಡಂಬರವಿಲ್ಲದೇ ಬದುಕಿದ ಅತ್ಯಂತ ಸರಳಜೀವಿ. ಅವರ ಅಗಲಿಕೆಯಿಂದ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಅಗಲಿಕೆಯ ದು:ಖವನ್ನು ಭರಿಸುವ ಶಕ್ತಿಯನ್ನು ಕುಟುಂಬದವರಿಗೆ ಭಗವಂತ ನೀಡಲಿ ಹಾಗೂ ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ತಿಳಿಸಿದ್ದಾರೆ.

Translate »