ನೈಋತ್ಯ ರೈಲ್ವೆ ಮೈಸೂರು ವಿಭಾಗ ವ್ಯಾಪ್ತಿಯಲ್ಲಿ  18ರಿಂದ 44 ವರ್ಷದೊಳಗಿನ ಸಿಬ್ಬಂದಿಗೆ ಕೋವಿಡ್  ಮೊದಲ ಡೋಸ್ ಲಸಿಕೆ ನೀಡುವ ಪ್ರಕ್ರಿಯೆಗೆ ಚಾಲನೆ
ಮೈಸೂರು

ನೈಋತ್ಯ ರೈಲ್ವೆ ಮೈಸೂರು ವಿಭಾಗ ವ್ಯಾಪ್ತಿಯಲ್ಲಿ 18ರಿಂದ 44 ವರ್ಷದೊಳಗಿನ ಸಿಬ್ಬಂದಿಗೆ ಕೋವಿಡ್ ಮೊದಲ ಡೋಸ್ ಲಸಿಕೆ ನೀಡುವ ಪ್ರಕ್ರಿಯೆಗೆ ಚಾಲನೆ

June 10, 2021

ಮೈಸೂರು, ಜೂ.9(ಪಿಎಂ)- ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ವ್ಯಾಪ್ತಿಯ 18ರಿಂದ 44 ವರ್ಷದೊಳಗಿನ ರೈಲ್ವೆ ಸಿಬ್ಬಂದಿಗೆ ಕೆಲಸದ ಸ್ಥಳದಲ್ಲೇ ಕೋವಿಡ್ ಲಸಿಕೆ ನೀಡುವ ಪ್ರಕ್ರಿಯೆಗೆ ಮಂಗಳವಾರ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಹುಲ್ ಅಗರ್ವಾಲ್ ಚಾಲನೆ ನೀಡಿದರು.
ಮೈಸೂರಿನ ವಿಭಾಗೀಯ ಕಚೇರಿ ಆವರಣದಲ್ಲಿ ಲಸಿಕಾ ಕೌಂಟರ್ ತೆರೆಯಲಾಗಿದ್ದು, ಇಲ್ಲಿ ಇಂದು ಕೋವಿಶೀಲ್ಡ್ ಮೊದಲ ಡೋಸ್ ಲಸಿಕೆ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಅಲ್ಲದೆ, ವಿಭಾಗೀಯ ವ್ಯಾಪ್ತಿಯ ಎಲ್ಲಾ ಜಿಲ್ಲೆಗಳಲ್ಲೂ ಈ ಪ್ರಕ್ರಿಯೆ ಇಂದಿನಿಂದ ಆರಂಭವಾಯಿತು.
ಮೈಸೂರಿನಲ್ಲಿ ಲಸಿಕೆ ಪ್ರಕ್ರಿಯೆಗೆ ಚಾಲನೆ ನೀಡಿದ ರಾಹುಲ್ ಅಗರ್ವಾಲ್ ಮಾತನಾಡಿ, ನೈಋತ್ಯ ರೈಲ್ವೆ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ, ರೈಲ್ವೆ ಸಿಬ್ಬಂದಿಗೆ ಕೆಲಸದ ಸ್ಥಳದಲ್ಲೇ ನೋಂದಾಯಿಸಿ ಲಸಿಕೆ ನೀಡಲಿದ್ದಾರೆ. ಕೋವಿಡ್ ಎರಡನೇ ಅಲೆ ನಡುವೆಯೂ ಸರಕು ಮತ್ತು ಪ್ರಯಾಣಿಕರ ರೈಲುಗಳ ಸೇವೆ ಒದಗಿಸಲಾಗುತ್ತಿದೆ. ಹಾಗಾಗಿ ರೈಲ್ವೆ ಸಿಬ್ಬಂದಿಯನ್ನು ಕೋವಿಡ್‍ನಿಂದ ಕಾಪಾಡಿ ಕೊಳ್ಳುವುದು ಬಹುಮುಖ್ಯ. ಈ ಹಿನ್ನೆಲೆಯಲ್ಲಿ ಲಸಿಕೆ ಮಹತ್ವದ ಪಾತ್ರ ವಹಿಸಲಿದೆ ಎಂದರು. ಮೇ 31ರವರೆಗೆ 45 ವರ್ಷ ಮೇಲ್ಪಟ್ಟ ವಿಭಾಗದ ಶೇ.79ರಷ್ಟು ಸಿಬ್ಬಂದಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ. ಇಂದಿನಿಂದ 18ರಿಂದ 44 ವರ್ಷದೊಳಗಿನ ಸಿಬ್ಬಂದಿಗೆ ಲಸಿಕೆ ನೀಡಲಾಗುವುದು. ಇದರ ಜೊತೆಯಲ್ಲಿ 18ರಿಂದ 44 ವರ್ಷ ವಯಸ್ಸಿನ 1,400ಕ್ಕೂ ಹೆಚ್ಚು ಉದ್ಯೋಗಿಗಳು ಸೇರಿದಂತೆ ಇನ್ನಿತರ ವಯೋಮಾನದ ಒಟ್ಟು 2 ಸಾವಿರ ಉದ್ಯೋಗಿಗಳಿರುವ ಅಶೋಕಪುರಂ ರೈಲ್ವೆ ಕಾರ್ಯಾಗಾರದಲ್ಲಿ ಲಸಿಕೆ ನೀಡುವ ಪ್ರಕ್ರಿಯೆ ಆರಂಭವಾಗಿದೆ ಎಂದರು. ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು, ಕೈ ತೊಳೆಯುವುದು ಕೋವಿಡ್ ತಡೆಗೆ ಪ್ರಮುಖ ಅಸ್ತ್ರಗಳು. ಸಿಬ್ಬಂದಿ ಇದನ್ನು ಮರೆಯಬಾರದು. ಮೊದಲ ಅಲೆಗಿಂತ ಎರಡನೇ ಅಲೆ ಭೀಕರವಾಗಿದ್ದು, ಯಾರೂ ನಿರ್ಲಕ್ಷ್ಯ ಮಾಡದೇ ಮುನ್ನೆಚ್ಚರಿಕೆ ವಹಿಸಬೇಕು. ಲಸಿಕೆ ಬಗ್ಗೆ ಇರುವ ತಪ್ಪು ಮಾಹಿತಿಗೆ ಯಾರೂ ಕಿವಿಗೊಡದೇ ಲಸಿಕೆ ಹಾಕಿಸಿಕೊಳ್ಳ ಬೇಕು ಎಂದು ಸಲಹೆ ನೀಡಿದರು. ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಡಾ.ಮಂಜುನಾಥ್ ಕನಮಡಿ ಸೇರಿದಂತೆ ಇನ್ನಿತರ ರೈಲ್ವೆ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.

Translate »