ನಮ್ಮ ಮೆಟ್ರೋ ಪಿಲ್ಲರ್‌ನಲ್ಲಿ ಬಿರುಕು: ಆತಂಕ ಸೃಷ್ಟಿ
ಮೈಸೂರು

ನಮ್ಮ ಮೆಟ್ರೋ ಪಿಲ್ಲರ್‌ನಲ್ಲಿ ಬಿರುಕು: ಆತಂಕ ಸೃಷ್ಟಿ

December 13, 2018

ಬೆಂಗಳೂರು: ನಮ್ಮ ಮೆಟ್ರೋ ಪಿಲ್ಲರ್‌ವೊಂದರಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಆತಂಕಕ್ಕೆ ಕಾರಣವಾಗಿದೆ.

ಬೈಯಪ್ಪನಹಳ್ಳಿ-ನಾಯಂಡಹಳ್ಳಿ ಮಾರ್ಗದ ಟ್ರಿನಿಟಿ ನಿಲ್ದಾಣದ ಬಳಿಯ 155ನೇ ಪಿಲ್ಲರ್‍ನಲ್ಲಿ ಬಿರುಕು ಬಿಟ್ಟಿದೆ. ಅಲ್ಲದೆ ಪಿಲ್ಲರ್‍ನ ಮೇಲ್ಭಾಗದ ಸ್ಲೈಡರ್ ಸ್ವಲ್ಪ ಮಟ್ಟಿಗೆ ಜರುಗಿದೆ. ಈ ಹಿನ್ನೆಲೆಯಲ್ಲಿ ಒಂದು ಬದಿಯ ಸಂಚಾರವನ್ನು ತಡೆದು ವಾಹನಗಳಿಗೆ ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಇನ್ನು ಪಿಲ್ಲರ್ ಬಳಿ ಜೇನುಗೂಡು ಕಟ್ಟಿತ್ತು. ಹೀಗಾಗಿ ಅದನ್ನು ತೆರವುಗೊಳಿಸುವ ವೇಳೆ ಹಾನಿ ಕಂಡುಬಂದಿದೆ. ಅಲ್ಲಿ ಕಬ್ಬಿಣದ ಸ್ಲೈಡರ್ ಹಾಕಿರುವುದಾಗಿ ಮೆಟ್ರೋ ಅಧಿಕಾರಿಗಳು ಸಮಜಾಯಿಷಿ ನೀಡಿದ್ದಾರೆ. ಪ್ರತಿನಿತ್ಯ ಸಾವಿ ರಾರು ಮಂದಿ ಮೆಟ್ರೋದಲ್ಲಿ ಪ್ರಯಾಣಿಸುತ್ತಿ ದ್ದಾರೆ. ಅಲ್ಲದೆ ಪಿಲ್ಲರ್ ಕೆಳಗಡೆಯೂ ಸಾವಿ ರಾರು ವಾಹನಗಳು ದಿನನಿತ್ಯ ಸಂಚರಿಸು ತ್ತವೆ. ಹೀಗಾಗಿ ಆತಂಕ ಉಂಟಾಗಿದ್ದು, ಯಾವುದೇ ರೀತಿಯ ಹಾನಿಯಾಗ ದಂತೆ ಮುಂಜಾಗೃತಾ ಕ್ರಮ ಕೈಗೊಂಡಿ ರುವುದಾಗಿ ಬಿಎಂಆರ್‍ಸಿಎಲ್ ತಿಳಿಸಿದೆ.

ರಾತ್ರಿ ಕಾರ್ಯಾಚರಣೆ: ಮೆಟ್ರೋ ದುರಸ್ತಿ ಆರಂಭವಾಗಲಿದ್ದು, ಸಂಚಾರಕ್ಕೆ ಅಸ್ತವ್ಯಸ್ತವಾಗದಂತೆ ಮಧ್ಯರಾತ್ರಿಯೇ ಕಾಮಗಾರಿ ನಡೆಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಈಗ ಕಾಮಗಾರಿ ನಡೆಸಿದರೆ ಮೆಟ್ರೋ ಸಂಚಾರಕ್ಕೆ ತೊಂದರೆಯಾಗುತ್ತದೆ. ಹೀಗಾಗಿ ರಾತ್ರಿ ಹನ್ನೊಂದು ಗಂಟೆಗೆ ಮೆಟ್ರೋ ಸಂಪೂರ್ಣ ಸಂಚಾರ ನಿಲ್ಲಲಿದೆ. ಈ ವೇಳೆ ದುರಸ್ತಿ ಕಾರ್ಯ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಬಿಎಂಆರ್‍ಸಿಎಲ್ ಅಧಿಕಾರಿ ಮೂಲಗಳು ತಿಳಿಸಿವೆ.

ನನ್ನ ಗಮನಕ್ಕೆ ಬಂದಿದೆ: ಮೆಟ್ರೋ ಮಾರ್ಗದ ಒಂದು ಕಂಬದಲ್ಲಿ ಬಿರುಕು ಮೂಡಿದ ಬಗ್ಗೆ ನನಗೆ ಮೂರು ದಿನಗಳ ಹಿಂದೆಯೇ ಮಾಹಿತಿ ಬಂದಿದೆ. ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಸಿಎಂ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ತಜ್ಞರ ಜೊತೆಗೆ ಮಾತುಕತೆ ನಡೆಸಿ ತನಿಖೆಗೆ ಆದೇಶ ನೀಡಿರುವೆ. ಬೈಯಪ್ಪನಹಳ್ಳಿ ಮೈಸೂರು ರಸ್ತೆ ಸಂಚಾರ ಸ್ಥಗಿತಕ್ಕೂ ಸೂಚನೆ ನೀಡಿರುವೆ. ಯಾವುದೇ ಕಾರಣಕ್ಕೂ ಅನಾಹುತ ಸಂಭವಿಸದಂತೆ ಎಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದೇನೆ ಎಂದು ತಿಳಿಸಿದರು.

ಈಗಾಗಲೇ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಮೆಟ್ರೋ ವೇಗವನ್ನು ಕಡಿಮೆ ಮಾಡಿ ಸಂಚಾರ ನಡೆಸಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಎಚ್ಚರಿಕೆ ಉದ್ದೇಶದಿಂದ ಮತ್ತೊಮ್ಮೆ ಪರಿಶೀಲನೆ ನಡೆಸುವಂತೆ ತಿಳಿಸಿದ್ದೇನೆ. ಅಲ್ಲದೆ ತಕ್ಷಣವೇ ಸಮಸ್ಯೆಯನ್ನು ಬಗೆಹರಿಸುವಂತೆ ಸೂಚನೆ ನೀಡಿರುವೆ ಎಂದು ಕುಮಾರಸ್ವಾಮಿ ಹೇಳಿದರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರಾಭಿವೃದ್ಧಿ ಖಾತೆ ವಹಿಸಿಕೊಂಡಿರುವ ಜಿ.ಪರಮೇಶ್ವರ್ ಅವರನ್ನು ಪ್ರಶ್ನಿಸಿದಾಗ, ನನಗೆ ಮಾಹಿತಿಯಿಲ್ಲ. ಈ ಬಗ್ಗೆ ತಿಳಿದುಕೊಂಡು ಪ್ರತಿಕ್ರಿಯೆ ನೀಡುತ್ತೇನೆ ಎಂದರು.

ಬಿರುಕು ಮೂಡಿದ್ಯಾಕೆ: ನಮ್ಮ ಮೆಟ್ರೋದಲ್ಲಿ ಕಳಪೆ ಕಾಮಗಾರಿ ನಡೆದಿದೆಯೇ ಎನ್ನುವ ಅನುಮಾನ ಈಗ ಎದ್ದಿದೆ. ಮೆಟ್ರೋ ಮಾರ್ಗದ ಒಂದು ಕಂಬದಲ್ಲಿ ಬಿರುಕು ಮೂಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಜ್ಞರು ವಿವಿಧ ವಿಶ್ಲೇಷಣೆ ನೀಡಿದ್ದು, ಕಳಪೆ ಕಾಮಗಾರಿಯೇ ಇದಕ್ಕೆ ಪ್ರಮುಖ ಕಾರಣ ಎಂದು ತಿಳಿಸಿದ್ದಾರೆ.

ಮೆಟ್ರೋ ಕಾಮಗಾರಿ ಅತ್ಯಂತ ಗುಣಮಟ್ಟದಿಂದ ಕೂಡಿರಲೇಬೇಕು. ಇದರ ಪಿಲ್ಲರ್, ಜಾಯಿಂಟ್ ಭಾಗ, ಟ್ರ್ಯಾಕ್ ಆಯಸ್ಸು ಬರೋಬ್ಬರಿ 60 ವರ್ಷ ಇರಬೇಕು. ಹೀಗಾಗಿ ಉದ್ಘಾಟನೆಯಾದ 7 ವರ್ಷಕ್ಕೇ ಬಿರುಕು ಬಿಡಲು ಸಾಧ್ಯವೇ ಇಲ್ಲ. ಮೆಟ್ರೋ ಪಿಲ್ಲರ್ ಮೇಲಿನ ಲೋಡ್ ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚಾಗಿದೆ. ಮೆಟ್ರೋ ರೈಲಿಗೆ ಹೆಚ್ಚುವರಿ ಕೋಚ್ ಈಗ ಹಾಕಲಾಗಿದೆ. ಲಾಭದ ದೃಷ್ಟಿಯಿಂದ ಭಾರೀ ಪ್ರಮಾಣದಲ್ಲಿ ಮೆಟ್ರೋ ಓಡಾಟದಿಂದ ಪಿಲ್ಲರ್‍ಗಳ ಮೇಲಿನ ಒತ್ತಡ ಹೆಚ್ಚಾಗಿರಬಹುದು. ಇದರಿಂದಾಗಿ ಬಿರುಕು ಬಿಟ್ಟಿರಬಹುದು ಎನ್ನಲಾಗುತ್ತಿದೆ.

ಪ್ರತಿ ವರ್ಷಕ್ಕೆ ಪಿಲ್ಲರ್ ಬೀಮ್, ಟ್ರ್ಯಾಕ್, ಪಿಲ್ಲರ್‍ಗಳ ಗುಣಮಟ್ಟದ ಪರಿಶೀಲನೆ ಮಾಡಬೇಕು. ಆದರೆ ಬಿರುಕು ಬಿಟ್ಟ ಮೇಲೆ ನಮ್ಮ ಮೆಟ್ರೋ ಎಚ್ಚೆತ್ತುಕೊಂಡಿದೆ. ಈವರೆಗೂ ಯಾವುದೇ ಗುಣಮಟ್ಟವನ್ನು ಪರಿಶೀಲನೆ ಮಾಡಿಲ್ಲ. ಕೇವಲ ಟ್ರಿನಿಟಿ ಸರ್ಕಲ್‍ನ 155 ಪಿಲ್ಲರ್ ಬಳಿ ಮಾತ್ರವಲ್ಲ. ಟ್ರಿನಿಟಿ ಪಕ್ಕದ ಪಿಲ್ಲರ್ ಕೂಡ ಶಿಥಿಲಾವಸ್ಥೆಯಲ್ಲಿದ್ದು, ಸಿಮೆಂಟ್ ಕಿತ್ತು ಹೋಗಿದೆ. ಕೆಲವೆಡೆ ತೇಪೆ ಹಚ್ಚಿರುವ ಕಾಮಗಾರಿಯೂ ಕಾಣುತ್ತದೆ. ಅಷ್ಟೇ ಅಲ್ಲದೆ ಮಳೆ ನೀರು ಸರಾಗವಾಗಿ ಹರಿದು ಹೋಗದೇ ಇರುವ ಕಾರಣ ಪಿಲ್ಲರ್ ಕಬ್ಬಿಣದ ಸರಳುಗಳು ತುಕ್ಕು ಹಿಡಿದಿರುವ ಸಾಧ್ಯತೆಯಿದೆ.

Translate »