ಸದ್ಯದಲ್ಲೇ ಇಬ್ಬರು ಶಾಸಕರ ಅಮಾನತು, ಇಬ್ಬರು ಸಚಿವರಿಗೂ ಕೊಕ್
ಮೈಸೂರು

ಸದ್ಯದಲ್ಲೇ ಇಬ್ಬರು ಶಾಸಕರ ಅಮಾನತು, ಇಬ್ಬರು ಸಚಿವರಿಗೂ ಕೊಕ್

December 13, 2018

ಬೆಂಗಳೂರು: ಪಕ್ಷ ದಲ್ಲಿದ್ದುಕೊಂಡೇ ಆಪರೇಷನ್ ಕಮಲ ಚಟುವಟಿಕೆಯಲ್ಲಿ ತೊಡಗಿರುವ ಇಬ್ಬರು ಶಾಸಕರನ್ನು ಅಮಾನತು ಮಾಡಲು ನಿರ್ಧರಿಸಿರುವ ಪ್ರದೇಶ ಕಾಂಗ್ರೆಸ್, ಇದೇ ಆರೋಪದ ಹಿನ್ನೆಲೆಯಲ್ಲಿ ಸಂಪುಟದಲ್ಲಿರುವ ಇಬ್ಬರು ಸಚಿವರನ್ನೂ ಕೈಬಿಡುವ ಮಹತ್ವದ ತೀರ್ಮಾನ ಕೈಗೊಂಡಿದೆ.

ಸರ್ಕಾರ ರಚನೆ ಸಂದರ್ಭದಲ್ಲಿ ಬೆಂಬಲ ನೀಡಿದ ಪಕ್ಷೇತರ ಸದಸ್ಯ ಹಾಗೂ ಅರಣ್ಯ ಸಚಿವ ಆರ್.ಶಂಕರ್ ಮತ್ತು ಸಣ್ಣ ಕೈಗಾರಿಕಾ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಮಂತ್ರಿಮಂಡಲದಿಂದ ಕೈಬಿಡಲು ನಿರ್ಧರಿಸಲಾಗಿದೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮಂತ್ರಿಮಂಡಲ ವನ್ನು ಡಿಸೆಂಬರ್ 22ರಂದು ವಿಸ್ತರಿಸಲು ತೀರ್ಮಾನಿಸಿದ್ದು, ಈ ಸಂದರ್ಭದಲ್ಲಿ ಕಾಂಗ್ರೆಸ್ ಪಾಲಿನ ಖಾಲಿ ಇರುವ ಆರು ಸ್ಥಾನಗಳನ್ನು ಭರ್ತಿ ಮಾಡಲಾಗುತ್ತದೆ. ಇದೇ ಸಂದರ್ಭದಲ್ಲಿ ಈ ಇಬ್ಬರ ರಾಜೀ ನಾಮೆ ಪಡೆದ ನಂತರ ಉಳಿಯುವ ಎರಡು ಸ್ಥಾನಗಳನ್ನು ಹಾಗೇ ಉಳಿಸಿಕೊಳ್ಳಲಿದೆ.

ಐದು ರಾಜ್ಯಗಳ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಪಕ್ಷ ಮೇಲುಗೈ ಸಾಧಿಸಿ ಬಿಜೆಪಿಯ ಪ್ರಬಲ ರಾಜ್ಯಗಳನ್ನೇ ವಶಕ್ಕೆ ತೆಗೆದುಕೊಂಡ ಸಂತಸದಲ್ಲಿರುವ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಸಂಪುಟ ವಿಸ್ತರಣೆಗೆ ಹಸಿರು ನಿಶಾನೆ ನೀಡಿರುವುದಲ್ಲದೆ ಸರ್ಕಾರದ ವಿರುದ್ಧ ಕಾರ್ಯರ್ವಹಿಸುತ್ತಿರುವ ಶಾಸಕರನ್ನು ಶಿಸ್ತು ಕ್ರಮಕ್ಕೆ ಒಳಪಡಿಸಲು ಸೂಚಿಸಿದ್ದಾರೆ.

ಉತ್ತರ ಭಾರತದಲ್ಲಿ ಪಕ್ಷ ಸೋತ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ನಾಯಕರು ಆಪರೇಷನ್ ಕಮಲಕ್ಕೆ ಇನ್ನು ಮುಂದೆ ದುಸ್ಸಾಹಸ ಮಾಡುವುದಿಲ್ಲ. ಅವರು ಮಾಡಲು ಪ್ರಯತ್ನಿಸಿದರೂ ಈ ಸನ್ನಿವೇಶದಲ್ಲಿ ನಮ್ಮವರು ಆ ಪಕ್ಷಕ್ಕೆ ವಲಸೆ ಹೋಗುವುದಿಲ್ಲ ಎಂಬ ವಿಶ್ವಾಸದಲ್ಲಿ ಇಂತಹ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಇಂತಹ ನಿರ್ಧಾರ ಕೈಗೊಳ್ಳುವುದರಿಂದ ಉಳಿದ ಶಾಸಕರಿಗೂ ಎಚ್ಚರಿಕೆಯ ಸಂದೇಶ ರವಾನೆಯಾಗುತ್ತದೆ. ಕಳೆದ ಮೂರು-ನಾಲ್ಕು ತಿಂಗಳಿಂದ ಬಿಜೆಪಿಗೆ ಜಿಗಿದು ಸರ್ಕಾರ ಉರುಳಿಸಲು ಮುಂದಾಗಿರುವ ಇಬ್ಬರು ಶಾಸಕರ ವಿರುದ್ಧ ಕ್ರಮಕ್ಕೆ ಪ್ರದೇಶ ಕಾಂಗ್ರೆಸ್, ಎಐಸಿಸಿಗೆ ಶಿಫಾರಸು ಮಾಡಿದೆ.

ರಾಜ್ಯ ಉಸ್ತುವಾರಿ ಹೊಣೆ ಹೊತ್ತ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಕೂಡ, ಪಕ್ಷ ವಿರೋಧಿ ಚಟುವಟಿಕೆ ನಡೆಸುವವರ ವಿರುದ್ಧ ಕ್ರಮಕ್ಕೆ ಬೆಂಬಲ ನೀಡಿದ್ದಾರೆ. ಇದರ ನಡುವೆಯೇ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ತಮ್ಮ ಇಬ್ಬರು ಸಚಿವರನ್ನು ಕೈಬಿಡುವ ಮಹತ್ವದ ತೀರ್ಮಾನ ಕೈಗೊಂಡಿದೆ.

ಆರರಲ್ಲಿ ಎರಡು ವೀರಶೈವ ಸಮುದಾಯಕ್ಕೂ, ತಲಾ ಒಂದು ಪರಿಶಿಷ್ಟ ಜಾತಿಯ ಎಡಗೈ ಇಲ್ಲವೇ ಲಂಬಾಣಿ, ಕುರುಬ, ರೆಡ್ಡಿ ಒಕ್ಕಲಿಗ ಸಮುದಾಯ ಪ್ರತಿನಿಧಿಸುವವರಿಗೆ ಅವಕಾಶ ನೀಡಲು ಪಕ್ಷ ನಿರ್ಧರಿಸಿದೆ. ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲದ ಅಧಿವೇಶನಕ್ಕೂ ಮುನ್ನವೇ ಸಂಪುಟ ವಿಸ್ತರಿಸಲು ಕಾಂಗ್ರೆಸ್ ತೀರ್ಮಾನಿಸಿತ್ತು, ಪಾಲುದಾರ ಪಕ್ಷ ಜೆಡಿಎಸ್‍ನ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ, ಅಧಿವೇಶನ ನಡೆಯುವ ಸಂದರ್ಭದಲ್ಲಿ ವಿಸ್ತರಿಸಿದರೆ ಅವಕಾಶ ದೊರೆಯದವರು ವಿರೋಧಿ ಚಟುವಟಿಕೆಯಲ್ಲಿ ತೊಡಗಿ, ಸರ್ಕಾರಕ್ಕೆ ಇರಿಸು-ಮುರಿಸು ಉಂಟು ಮಾಡಬಹುದು.

ವಿಧಾನಸಭೆಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ನೀವೇ ಗೆಲುವು ಸಾಧಿಸುತ್ತೀರಿ. ಇದರಿಂದ ನಿಮಗೆ ಮತ್ತಷ್ಟು ಬಲ ಬರುತ್ತದೆ, ನಂತರ ಸಂಪುಟ ವಿಸ್ತರಿಸಿದರೆ ಯಾವ ಗೊಂದಲವೂ ಇರುವುದಿಲ್ಲ ಎಂದು ಸಲಹೆ ಮಾಡಿದ್ದರು.

ಗೌಡರ ಸಲಹೆಗೆ ಸಮ್ಮತಿಸಿದ್ದ ರಾಹುಲ್, ಅವರು ಹೇಳಿದಂತೆ ಮಾಡಿ ಎಂದು ರಾಜ್ಯ ಘಟಕಕ್ಕೆ ಸೂಚಿಸಿದ್ದರು. ಇಷ್ಟಾದರೂ ಲೋಕೋಪಯೋಗಿ ಸಚಿವ ರೇವಣ್ಣನವರ ಭಯ ಕಾಂಗ್ರೆಸ್‍ಗೆ, ಈ ಹಿನ್ನೆಲೆಯಲ್ಲಿ ಡಿಸೆಂಬರ್ 22 ರಂದು ಸಂಪುಟ ವಿಸ್ತರಿಸಲು ಎಲ್ಲಾ ಕಾಲ ಸರಿಯಿದೆಯೇ ಎಂದು ಅವರ ಅನುಮತಿಯನ್ನೂ ಪಡೆದಿದ್ದಾರೆ.

ಇಲ್ಲದಿದ್ದರೆ ಅವರು ಸಮಯ ಸರಿಯಿಲ್ಲ ಎಂದು ತಾವು ತೆಗೆದುಕೊಂಡ ನಿರ್ಧಾರಕ್ಕೆ ಕೊಕ್ಕೆ ಹಾಕುತ್ತಾರೆ ಎಂಬ ಭಯ ಕಾಂಗ್ರೆಸ್‍ಗೆ. ಸಂಪುಟದಲ್ಲಿ ಅವಕಾಶ ದೊರೆಯದ ಪಕ್ಷದ 26 ಪ್ರಭಾವಿಗಳು ಹಾಗೂ ಪಕ್ಷದಿಂದ ಜಿಗಿಯಲು ಈಗಾಗಲೇ ಒಂದು ಹೆಜ್ಜೆ ಹೊರಗಿಟ್ಟಿರುವವರಿಗೆ ಸಂಪುಟ ದರ್ಜೆಯ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ, ಇನ್ನು ಕೆಲವರಿಗೆ ಸಂಸದೀಯ ಕಾರ್ಯದರ್ಶಿ ಹುದ್ದೆಗಳನ್ನು ಅಂದೇ ನೀಡಿ ಆದೇಶ ಹೊರ ಬೀಳಲಿದೆ. ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಜೆಡಿಎಸ್ ತನ್ನ ಪಾಲಿನ ಎರಡು ಸ್ಥಾನಗಳನ್ನು ಮತ್ತೆ ಹಾಗೇ ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಆದರೆ 10 ನಿಗಮಗಳಿಗೆ ಮಾತ್ರ ಪಕ್ಷದ ಶಾಸಕರನ್ನು ನೇಮಕಾತಿ ಮಾಡಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

Translate »