ಮೈಸೂರಲ್ಲಿ ಕ್ರೆಡಲ್ ಅಧಿಕಾರಿ ದಿನೇಶ್‍ಕುಮಾರ್ ನಿಗೂಢ ಸಾವು
ಮೈಸೂರು

ಮೈಸೂರಲ್ಲಿ ಕ್ರೆಡಲ್ ಅಧಿಕಾರಿ ದಿನೇಶ್‍ಕುಮಾರ್ ನಿಗೂಢ ಸಾವು

November 29, 2022

ಮೈಸೂರು, ನ. 28(ಆರ್‍ಕೆ)-ಸೋಲಾರ್ ಎನರ್ಜಿ ಇಲಾಖೆ ಇಂಜಿನಿಯರ್ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಮೈಸೂರಿ ನಲ್ಲಿ ಸಂಭವಿಸಿದೆ. ಮೈಸೂರಿನ ಬೋಗಾದಿ 2ನೇ ಹಂತದ ನಿರ್ಮಿತಿ ಕೇಂದ್ರ ಬಳಿ ನಿವಾಸಿ ಡಿ.ಕೆ. ದಿನೇಶ್ ಕುಮಾರ್(50) ಸಾವನ್ನಪ್ಪಿದವರು. ತೀವ್ರವಾಗಿ ಅಸ್ವಸ್ಥಗೊಂಡಿರುವ ಪತ್ನಿ ಶ್ರೀಮತಿ ಆಶಾ ಮತ್ತು 12 ವರ್ಷದ ಪುತ್ರನನ್ನು ಸುಯೋಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಲತಃ ಶ್ರೀರಂಗಪಟ್ಟಣ ತಾಲೂಕು, ದೊಡ್ಡಪಾಳ್ಯ ಗ್ರಾಮದವರಾದ ದಿನೇಶ್ ಕುಮಾರ್, ಬೆಂಗಳೂರಿನ ಕರ್ನಾಟಕ ನವೀಕರಿಸ ಬಹುದಾದ ಇಂಧನ ಅಭಿವೃದ್ಧಿ ನಿಯಮಿತ (ಏಖಇಆಐ) ದಲ್ಲಿ ಯೋಜನಾ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು. ನಿನ್ನೆ ರಾತ್ರಿ ಜೊತೆಯಲ್ಲೇ ಊಟ ಮಾಡಿ ಮಲಗಿದ್ದೆವು. ಇಂದು ಬೆಳಗ್ಗೆ ಎದ್ದು ನೋಡುವಷ್ಟರಲ್ಲಿ ದಿನೇಶ್‍ಕುಮಾರ್ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಅದನ್ನು ನೋಡಿ ನಾವೂ ಮೂರ್ಛೆ ಹೋದೆವು ಎಂದು ಸುಯೋಗ್ ಆಸ್ಪತ್ರೆಯಲ್ಲಿರುವ ಪತ್ನಿ ಮತ್ತು ಪುತ್ರ ಹೇಳಿಕೆ ನೀಡಿದ್ದಾರೆ ಎಂದು ಸರಸ್ವತಿಪುರಂ ಠಾಣೆ ಪೊಲೀಸ್ ಇನ್ಸ್‍ಪೆಕ್ಟರ್ ಸಿ.ಎಂ. ರವೀಂದ್ರ ತಿಳಿಸಿದ್ದಾರೆ.

ಆದರೆ, ಡಿ.ಕೆ. ದಿನೇಶ್‍ಕುಮಾರ್ ಅವರ ಮೃತದೇಹ ಊದಿಕೊಂಡಿದ್ದು, ಬಾಯಲ್ಲಿ ರಕ್ತಸ್ರಾವವಾಗಿದೆ. ದೇಹದ ಕೆಲ ಭಾಗ ಗಾಯವಾಗಿದೆಯಲ್ಲದೆ, ಅವರು ಮೃತಪಟ್ಟು ಒಂದೂವರೆ ದಿನವಾಗಿದೆ ಎಂದು ವೈದ್ಯರು ಹೇಳುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ನಡುವೆ ಮಂಡ್ಯದ ಅವರ ಸೋದರ ಮಾವ ಹೆಚ್.ಎಂ. ನಾರಾಯಣ ಎಂಬುವರು ಸರಸ್ವತಿಪುರಂ ಠಾಣೆಗೆ ದೂರು ನೀಡಿದ್ದು, ನನ್ನ ಅಕ್ಕನ ಮಗನಾದ ದಿನೇಶ್‍ಕುಮಾರ್ ಸಹಜವಾಗಿ ಸಾವನ್ನಪ್ಪಿಲ್ಲ, ಮೃತದೇಹದ ಮೇಲೆ ಗಾಯಗಳಾಗಿರುವುದರಿಂದ ಹಲ್ಲೆ ಮಾಡಿ ಕೊಲೆಗೈದಿರುವ ಶಂಕೆ ಇದೆ. ಆದ್ದರಿಂದ ಜೊತೆಯಲ್ಲಿದ್ದ ಪತ್ನಿ, ಪುತ್ರ ಹಾಗೂ ಕೆಲಸಗಾರರನ್ನು ತೀವ್ರ ವಿಚಾರಣೆಗೊಳಪಡಿಸಿ ತನಿಖೆ ಮಾಡಬೇಕೆಂದು ದೂರು ಸಲ್ಲಿಸಿದ್ದಾರೆ.

ಇಂದು ಬೆಳಗ್ಗೆ ಕೆಲಸಗಾರರು ದಿನೇಶ್‍ಕುಮಾರ್ ಅವರನ್ನು ಕಾಮಾಕ್ಷಿ ಆಸ್ಪತ್ರೆಗೆ ಕರೆದೊಯ್ದರಾದರೂ, ಪರೀಕ್ಷಿಸಿದ ವೈದ್ಯರು, ಆತ ಮೃತಪಟ್ಟಿರುವುದಾಗಿ ದೃಢಪಡಿಸಿದರು ಎಂದು ತಿಳಿದುಬಂದಿದೆ. ಘಟನೆಯಿಂದಾಗಿ ಅಸ್ವಸ್ಥರಾಗಿ ಪ್ರಜ್ಞಾಹೀನರಾದ ಪತ್ನಿ ಆಶಾ ಮತ್ತು ಪುತ್ರನನ್ನೂ ಅದೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಅವರನ್ನು ಸುಯೋಗ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ. ವಿಷಯ ತಿಳಿಯುತ್ತಿದ್ದಂತೆಯೇ ಇಂದು ಮಧ್ಯಾಹ್ನ ಆಸ್ಪತ್ರೆಗೆ ತೆರಳಿದ ಸರಸ್ವತಿಪುರಂ ಠಾಣೆ ಪೊಲೀಸರು, ದಿನೇಶ್‍ಕುಮಾರ್ ಮೃತದೇಹವನ್ನು ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾಗಾರಕ್ಕೆ ಸ್ಥಳಾಂತರಿಸಿದ್ದಾರೆ. ಭಾರತೀಯ ದಂಡಸಂಹಿತೆ 174ಸಿ ಅಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.

Translate »