ಮೈಸೂರು ಮೆಡಿಕಲ್ ಕಾಲೇಜಲ್ಲಿ ಅಭಿವೃದ್ಧಿ ಪರ್ವ ಆರಂಭ: ಸಿಎಂ
ಮೈಸೂರು

ಮೈಸೂರು ಮೆಡಿಕಲ್ ಕಾಲೇಜಲ್ಲಿ ಅಭಿವೃದ್ಧಿ ಪರ್ವ ಆರಂಭ: ಸಿಎಂ

November 29, 2022

ಮೈಸೂರು, ನ.28(ಎಂಕೆ)- ಶತಮಾನದ ಅಂಚಿನಲ್ಲಿರುವ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ(ಎಂಎಂಸಿಆರ್‍ಐ) ಯಲ್ಲಿ ಅಭಿವೃದ್ಧಿ ಪರ್ವ ಪ್ರಾರಂಭವಾಗಿದ್ದು, ‘ಆರ್ ಅಂಡ್ ಡಿ’(ಸಂಶೋಧನೆ ಮತ್ತು ಅಭಿವೃದ್ಧಿ)ಕೇಂದ್ರ ಸ್ಥಾಪನೆಗೆ ಅನುದಾನ ನೀಡ ಲಾಗುವುದು ಎಂದು ಮುಖ್ಯಮಂತ್ರಿ ಬಸವ ರಾಜ ಬೊಮ್ಮಾಯಿ ಹೇಳಿದರು.

ನಗರದ ಜೆ.ಕೆ.ಮೈದಾನದಲ್ಲಿರುವ ಎಂಎಂ ಸಿಆರ್‍ಐನ ಪ್ಲಾಟಿನಂ ಜ್ಯುಬಿಲಿ ಸಭಾಂಗಣದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂಜಿನಿಯರಿಂಗ್ ಘಟಕ, ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾಡಳಿತದ ಸಂಯುಕ್ತಾಶ್ರಯದಲ್ಲಿ ವಿವಿಧ ಕಾಮಗಾರಿಗಳು ಹಾಗೂ 10 ಬೆಡ್ ಐಸಿಯು ಮತ್ತು ಟೆಲಿ ಐಸಿಯು ಹಬ್ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಆವರಣ ದಲ್ಲಿ ಸುಮಾರು 100 ಕೋಟಿ ರೂ. ವೆಚ್ಚದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿ ಕೊಳ್ಳಲಾಗಿದ್ದು, 2024ಕ್ಕೆ ನೂರು ವರ್ಷ ಪೂರೈ ಸುವ ಸಂಸ್ಥೆಯಲ್ಲಿ ಅಭಿವೃದ್ಧಿಯ ಪರ್ವ ಆರಂಭ ವಾಗಿದೆ ಎಂದರು. ಆರೋಗ್ಯವೇ ಬಹಳ ಮುಖ್ಯ. ಆರೋಗ್ಯವಿಲ್ಲದಿದ್ದರೇ ನಮ್ಮಲ್ಲಿ ಏನಿದ್ದರೂ ಪ್ರಯೋಜನವಿಲ್ಲ. ಆರೋಗ್ಯ ಲಭಿಸಬೇಕಾದರೆ ಚಿಕಿತ್ಸೆ ಎಲ್ಲರನ್ನು ತಲುಪಬೇಕು. ಒಂದಲ್ಲಾ ಒಂದು ರೀತಿಯಲ್ಲಿ ಮನುಷ್ಯನಿಗೆ ಒತ್ತಡವಿರುತ್ತದೆ. ಈ ಒತ್ತಡವನ್ನು ಹೊರಬರಬೇಕಾದರೆ ಸದೃಢವಾದ ಆರೋಗ್ಯ ಮುಖ್ಯವಾಗುತ್ತದೆ. ಕೊರೊನಾ ಸಂದರ್ಭದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದವರಿಗೆ ತುಂಬಾ ಕಷ್ಟಗಳ ಎದುರಾದರೆ, ಆರೋಗ್ಯವಾಗಿದ್ದವರಿಗೆ ಯಾವುದೇ ಸಮಸ್ಯೆಗಳಾ ಗಲಿಲ್ಲ. ಹಿಗಾಗಿ ಆರೋಗ್ಯ ಬಹಳ ಮುಖ್ಯವಾಗಿದೆ ಎಂದು ತಿಳಿಸಿದರು.

ಕಡಿಮೆ ದರದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡಿ: ಇವತ್ತಿನ ಆಧುನಿಕ ಚಿಕಿತ್ಸೆಯಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿದೆ. ಚಿಕಿತ್ಸೆ ಸಾಮಾನ್ಯರಿಗೆ ದೊರಕದಷ್ಟು ದುಬಾರಿಯಾಗಿದೆ. ವೈದ್ಯಕೀಯ ಸಂಶೋಧಕರು, ವಿಜ್ಞಾನಿಗಳು, ಖಾಸಗಿ ಆಸ್ಪತ್ರೆಗಳಿಗೆ ನಾನು ಹೇಳುವುದೆಂದರೆ, ನಿಮ್ಮ ಲಕ್ಷೆ ಬಿಟ್ಟು ಸಾಮಾನ್ಯ ಜನರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡಿ. ದುಡಿಯುವ ವರ್ಗದ ಆರೋಗ್ಯ ಕಾಪಾಡಿದರೆ, ದೇಶದ ಆರೋಗ್ಯ ಕಾಪಾಡಿದಂತೆ. ಆದ್ದರಿಂದ ವೈದ್ಯಕೀಯ ಸೇವೆಗಳು ಕಡಿಮೆ ದರದಲ್ಲಿ ದೊರಕುವಂತಾಗಬೇಕು ಎಂದು ಹೇಳಿದರು.

‘ಆರ್ ಅಂಡ್ ಡಿ’ ಕೇಂದ್ರ ಸ್ಥಾಪನೆ: ವೈದ್ಯರು, ವಿಜ್ಞಾನಿಗಳು ತಮ್ಮದೇ ಆರ್ ಅಂಡ್ ಡಿ(ಸಂಶೋಧನೆ ಮತ್ತು ಅಭಿವೃದ್ಧಿ)ಕೇಂದ್ರಗಳನ್ನು ತೆರೆದು ತಮ್ಮ ತಮ್ಮ ವಿಷಯಗಳಲ್ಲಿಯೇ ಸಂಶೋಧನೆ ನಡೆಸಿದರೆ ಸಾಕಷ್ಟು ಅನುಕೂಲವಾಗುತ್ತದೆ. ವೈದ್ಯಕೀಯ ಕಾಲೇಜುಗಳಲ್ಲಿ ಆರ್ ಅಂಡ್ ಡಿ ಕೇಂದ್ರಗಳನ್ನು ತೆರೆಯುವುದು ಅವಶ್ಯವಾಗಿದೆ. ಪ್ರತಿಷ್ಠಿತ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಆರ್ ಅಂಡ್ ಡಿ ಕೇಂದ್ರ ನಿರ್ಮಾಣಕ್ಕೆ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.

ವೈದ್ಯರ ಕೊರತೆ ಇದೆ: ಪ್ರತಿವರ್ಷ ಲಕ್ಷಾಂತರ ವಿದ್ಯಾರ್ಥಿಗಳು ವೈದ್ಯಕೀಯ ಪದವಿ ಪಡೆದು ಹೊರಬರುತ್ತಿದ್ದರೂ ವೈದ್ಯರ ಕೊರತೆ ಸಾಕಷ್ಟಿದೆ. ಪದವಿ ಪಡೆದ ನಂತರ ಎಲ್ಲಿಗೆ ಹೋಗುತ್ತಾರೆ ಎಂಬುದೇ ತಿಳಿಯುತ್ತಿಲ್ಲ. ಪದವಿ ಪ್ರದಾನ ಸಂದರ್ಭದಲ್ಲಿ ಪದವೀಧರರು ಮಾಡುವ ಪ್ರಮಾಣದಲ್ಲಿ ಎರಡ್ಮೂರು ವರ್ಷ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತೇವೆ ಎಂಬುದನ್ನು ಸೇರಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಆರೋಗ್ಯ ಕರ್ನಾಟಕ ನಿರ್ಮಾಣ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ಮೈಸೂರಿನ ಆರೋಗ್ಯ ಕ್ಷೇತ್ರಕ್ಕೆ ಇದೊಂದು ಐತಿಹಾಸಿಕ ಕ್ಷಣವಾಗಿದ್ದು, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯಿಂದ ಸ್ಥಾಪಿತವಾದ ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಆವರಣದಲ್ಲಿ 100 ಕೋಟಿ ರೂ.ಗೂ ಹೆಚ್ಚು ಮೊತ್ತದ ಕಟ್ಟಡಗಳನ್ನು ನಿರ್ಮಿಸಲಾಗಿದೆ. ರಾಜ್ಯದಲ್ಲಿ 41 ‘10 ಬೆಡ್ ಐಸಿಯು’ ಹಾಗೂ ‘ಟೆಲಿ ಐಸಿಯು ಘಟಕ’ಗಳನ್ನು ತೆರೆಯಲಾಗಿದೆ. ನಗರ ಪ್ರದೇಶದಲ್ಲಿರುವ ಬಡವರಿಗಾಗಿ ರಾಜ್ಯದಾದ್ಯಂತ ಸದ್ಯದಲ್ಲಿಯೇ ‘ನಮ್ಮ ಕ್ಲಿನಿಕ್’ಗಳು ಆರಂಭಗೊಳ್ಳಲಿವೆ. ಮೈಸೂರಿಗೆ 6 ನಮ್ಮ ಕ್ಲಿನಿಕ್‍ಗಳನ್ನು ನೀಡಲಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಸಕ ಎಲ್.ನಾಗೇಂದ್ರ ಉದ್ಘಾಟನೆಗೊಂಡ ನೂತನ ಕಟ್ಟಡಗಳ ಮಾಹಿತಿ ತಿಳಿಸಿದರೆ, ಇ-ಗವರ್ನಮೆಂಟ್ಸ್ ಫೌಂಡೇಶನ್‍ನ ಶ್ರೀಕಾಂತ್ ನಾದಮುನಿ 10 ಬೆಡ್ ಐಸಿಯು ಹಾಗೂ ಟಿಲಿ ಐಸಿಯು ಹಬ್‍ಗಳ ಕಾರ್ಯಚಟಿವಟಿಕೆ ಕುರಿತು ಮಾಹಿತಿ ನೀಡಿದರು. ನೀರಾವರಿ ಸಚಿವ ಗೋವಿಂದ ಕಾರಜೋಳ, ಶಾಸಕ ಎಸ್.ಎ.ರಾಮದಾಸ್, ನಿಗಮ ಮಂಡಳಿಗಳ ಅಧ್ಯಕ್ಷರಾದ ಎಸ್.ಮಹದೇವಯ್ಯ, ಎಂ.ಶಿವಕುಮಾರ್, ಮಿರ್ಲೆ ಶ್ರೀನಿವಾಸ್‍ಗೌಡ, ಜಿ.ನಿಜಗುಣರಾಜು, ವೈದ್ಯಕೀಯ ಶಿಕ್ಷಣ ಇಲಾಖೆ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ, ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕಿ ಡಾ.ಕೆ.ಆರ್.ದಾಕ್ಷಾಯಿಣಿ, ಕರುಣಾ ಟ್ರಸ್ಟ್ ಅಧ್ಯಕ್ಷ ಡಾ.ಹೆಚ್.ಸುದರ್ಶನ್ ಮತ್ತಿತರರು ಉಪಸ್ಥಿತರಿದ್ದರು.

Translate »