ಮೈಲ್ಯಾಕ್ ಉತ್ತೇಜನಕ್ಕೆ ಸರ್ಕಾರ ಬದ್ಧ
ಮೈಸೂರು

ಮೈಲ್ಯಾಕ್ ಉತ್ತೇಜನಕ್ಕೆ ಸರ್ಕಾರ ಬದ್ಧ

November 29, 2022

ಮೈಸೂರು, ನ.28(ಎಸ್‍ಬಿಡಿ)- ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ(ಮೈಲ್ಯಾಕ್) ಉತ್ತೇಜನಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿ ದರು. ಮೈಸೂರಿನ ಕಲಾಮಂದಿರದಲ್ಲಿ ಸೋಮ ವಾರ ಆಯೋಜಿಸಲಾಗಿದ್ದ ಮೈಲ್ಯಾಕ್ ಅಮೃತ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಕಾರ್ಯಕ್ರಮದ ಮೂಲಕ ಮೈಸೂರು ರಾಜ ಸಂಸ್ಥಾನದ ಅಭಿವೃದ್ಧಿ ಕಾರ್ಯ ಗಳು ಹಾಗೂ ದಶಕಗಳ ಹಿಂದಿನ ಜನಜೀವನ ಸಂಬಂಧ ನೆನಪಿನ ಪುಟ ತಿರುವಿದಂತಾಗಿದೆ. ಮೈಸೂರು ಸ್ಯಾಂಡಲ್ ಸೋಪ್ ಅಂಡ್ ಡಿಟರ್ಜೆಂಟ್ ಸಂಸ್ಥೆಯಂತೆ ಪ್ರತಿಷ್ಠಿತ ಮೈಲ್ಯಾಕ್ ಸಂಸ್ಥೆಯ ಎಲ್ಲಾ ರೀತಿಯ ಅಭಿವೃದ್ಧಿ ಕಾರ್ಯಗಳಿಗೂ ಸರ್ಕಾರ ನೆರವು ನೀಡಲಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 75 ವರ್ಷಗಳ ಹಿಂದೆ ಮೈಲ್ಯಾಕ್ ಸ್ಥಾಪಿಸುವ ವೇಳೆ ಅವರಲ್ಲಿದ್ದ ದೂರದೃಷ್ಟಿತ್ವ ಯಾವ ಮಟ್ಟಕ್ಕಿತ್ತು ಎನ್ನುವುದನ್ನು ಗಮನಿಸಬೇಕು. ಅಂದಿನ ಕಾಲಕ್ಕೆ ತಕ್ಕಂತೆ ಅಗತ್ಯ ವಸ್ತುಗಳ ಉತ್ಪಾದನೆ ಆರಂಭಿಸಿದರು. ನಂತರದಲ್ಲಿ ಆ ಕಾರ್ಖಾನೆ ರಾಜ್ಯ ಮಾತ್ರ ವಲ್ಲದೆ ದೇಶಕ್ಕೆ ಅಗತ್ಯವಾದ ಬಣ್ಣ ಹಾಗೂ ಅಳಿಸ ಲಾಗದ ಶಾಹಿಯನ್ನು ಪೂರೈಸುವ ಮಟ್ಟಕ್ಕೆ ಬೆಳೆದು ಪ್ರಸಿದ್ಧಿ ಪಡೆದಿರುವುದು ಹೆಮ್ಮೆಯ ಸಂಗತಿ ಎಂದು ಬಣ್ಣಿಸಿದರು. ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಕರ್ನಾಟಕ ವನ್ನು ಟೆಕ್ನಾಲಜಿ ಹಬ್, ಐಟಿ-ಬಿಟಿ ಕೇಂದ್ರ ಎಂದೆಲ್ಲಾ ಬಣ್ಣಿಸುತ್ತಾರೆ. ಇದಕ್ಕೆಲ್ಲಾ ಕಾರಣ ಮೈಸೂರು ರಾಜ ಸಂಸ್ಥಾನ. ಜ್ಞಾನ, ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡು ಪ್ರಗತಿಪರ ಗುರಿಯೊಂದಿಗೆ ಕಾರ್ಖಾನೆ ಗಳನ್ನು ಪ್ರಾರಂಭಿಸಿದ್ದು ತಂತ್ರಜ್ಞಾನ ಅಭಿವೃದ್ಧಿಗೆ ನಾಂದಿ ಆಯಿತು. ಮಹಾರಾಜರು ಮುಂದಿನ ತಲೆಮಾರುಗಳಿಗೆ ಅನುಕೂಲವಾಗುವಂತೆ ದೂರದೃಷ್ಟಿತ್ವದಿಂದ ಕೆಲಸ ಮಾಡಿದರು. ಮೈಸೂರು ಸಂಸ್ಥಾನದ ಇತಿಹಾಸದಲ್ಲಿ ಮಹಾರಾಣಿ ಯರೂ ಅಪಾರ ಕೊಡುಗೆ ನೀಡಿರುವುದನ್ನು ಮರೆಯಬಾರದು. ಹಾಗಾಗಿ ನಾನು ಯಾವುದೇ ಸಮ್ಮೇಳನಗಳಿಗೆ ಹೋದರೂ ಮೈಸೂರು ಒಡೆಯರ್‍ಗಳನ್ನು ಸ್ಮರಿಸುತ್ತೇನೆ. ಅವರನ್ನು ನೆನೆಯದಿರಲು ಸಾಧ್ಯವೇ ಇಲ್ಲ ಎಂದರು. ಕಬ್ಬಿಣ ಮತ್ತು ಉಕ್ಕು, ಸಿಮೆಂಟ್, ಸೋಪ್ ಅಂಡ್ ಡಿಟರ್ಜೆಂಟ್, ಬಣ್ಣ ಮತ್ತು ಅರಗು ಹೀಗೆ ಜನ ಜೀವನಕ್ಕೆ ಅವಶ್ಯಕವಾಗಿದ್ದ ಎಲ್ಲಾ ರೀತಿಯ ವಸ್ತುಗಳ ಉತ್ಪಾದನೆ ಗಾಗಿ ಮಹಾರಾಜರು ಕಾರ್ಖಾನೆಗಳನ್ನು ಆರಂಭಿಸಿದರು. ನಂತರದಲ್ಲಿ ಸರ್ಕಾರದ ನೆರವಿ ನೊಂದಿಗೆ ಖಾಸಗಿ ವಲಯದ ಪೈಪೋಟಿಯನ್ನು ಎದುರಿಸಿ ಬೆಳೆದುಬಂದಿವೆ. ಕೆಲವು ಸಂಸ್ಥೆಗಳಂತೂ ಉತ್ಪನ್ನಗಳ ಗುಣಮಟ್ಟ ಕಾಯ್ದುಕೊಳ್ಳುವ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿವೆ. ಈ ಪರಿಸ್ಥಿತಿ ಯಲ್ಲಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಹೊಸ ತಂತ್ರ ಜ್ಞಾನದೊಂದಿಗೆ ಅಭಿವೃದ್ಧಿಪಡಿಸುವುದು ಅನಿವಾರ್ಯ ಹಾಗೂ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಮೈಲ್ಯಾಕ್‍ಗೆ ಆಧುನಿಕ ಸ್ಫರ್ಶ ನೀಡುವುದು, ಉತ್ಪನ್ನ ಸಾಮಥ್ರ್ಯ ವೃದ್ಧಿ ಸೇರಿದಂತೆ ಸರ್ವತೋಮುಖ ಅಭಿವೃದ್ಧಿಗೆ ನೆರವು ನೀಡಲು ಸರ್ಕಾರ ಬದ್ಧವಾಗಿದೆ.

ಕೆಆರ್‍ಎಸ್ ಸಂರಕ್ಷಣೆ: ಕೆಆರ್‍ಎಸ್ ಅಣೆಕಟ್ಟೆ ಗೇಟ್‍ಗಳ ದುರಸ್ತಿ ಮಾಡಿಸುವ ಸೌಭಾಗ್ಯ ನನಗೆ ಸಿಕ್ಕಿತು. ಗೇಟ್‍ಗಳು ಸಮರ್ಪಕವಾಗಿ ಮುಚ್ಚದೆ ಸುಮಾರು 300 ಕ್ಯೂಸೆಕ್ ನೀರು ಸೋರಿಕೆಯಾಗುತ್ತಿತ್ತು. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಯಿತು. ಸದ್ಯ 16 ಗೇಟ್‍ಗಳನ್ನು ಬದಲಿಸಲಾಗಿದ್ದು ಅದರಿಂದ ಒಂದು ಹನಿ ಸೋರಿಕೆಯಾಗುತ್ತಿಲ್ಲ. ಎಲ್ಲಾ ಗೇಟ್‍ಗಳನ್ನು ಸರಿಪಡಿಸಿದ ಬಳಿಕ ಇನ್ನೂ 50 ವರ್ಷ ಯಾವ ಸಮಸ್ಯೆಯೂ ಆಗುವುದಿಲ್ಲ ಎಂದರು. ಈ ವೇಳೆ ಮೈಲ್ಯಾಕ್ ಸಂಬಂಧ ಸಮಗ್ರ ಮಾಹಿತಿಯನ್ನೊಳಗೊಂಡ ಸಾಕ್ಷ್ಯಚಿತ್ರವನ್ನು ರಾಜಮಾತೆ ಪ್ರಮೋದಾದೇವಿ ಒಡೆಯರ್ ಬಿಡುಗಡೆ ಮಾಡಿದರು. ಜಲಸಂಪನ್ಮೂಲ ಸಚಿವ ಗೋವಿಂದ ಎಂ.ಕಾರಜೋಳ್ `ಸ್ಮರಣ ಸಂಚಿಕೆ’ ಬಿಡುಗಡೆಗೊಳಿ ಸಿದರು. ರಮೇಶ್ ಬಿಳಿಕೆರೆ ಅವರ `ಮರೆಯಲಾಗದ ಮಾಣಿಕ್ಯ-ಟಿ.ಎಸ್.ಸುಬ್ಭಣ್ಣ’ ಪುಸ್ತಕವನ್ನು ಸಿಎಂ ಲೋಕಾರ್ಪಣೆಗೊಳಿಸಿದರು. ಮೈಲ್ಯಾಕ್‍ನ ಲಾಭಾಂಶದಲ್ಲಿ ಸರ್ಕಾರದ ಪಾಲು 28.41 ಲಕ್ಷ ರೂ. ಚೆಕ್ ಅನ್ನು ಮುಖ್ಯಮಂತ್ರಿಗಳಿಗೆ ಹಸ್ತಾಂತರಿಸಲಾಯಿತು. ಮೈಲ್ಯಾಕ್‍ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರಿಗೆ ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಮೇಯರ್ ಶಿವಕುಮಾರ್, ಉಪ ಮೇಯರ್ ರೂಪಾ, ಶಾಸಕರಾದ ಎಲ್.ನಾಗೇಂದ್ರ, ಎಸ್.ಎ.ರಾಮದಾಸ್, ನಿರಂಜನಕುಮಾರ್, ಮೈಲ್ಯಾಕ್ ಅಧ್ಯಕ್ಷ ಆರ್.ರಘು ಕೌಟಿಲ್ಯ, ಕರ್ನಾಟಕ ವಸ್ತು ಪ್ರದ ರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ್, ಕಾಡಾ ಅಧ್ಯಕ್ಷ ನಿಜಗುಣರಾಜು, ರಂಗಾಯಣ ನಿರ್ದೇ ಶಕ ಅಡ್ಡಂಡ ಸಿ.ಕಾರ್ಯಪ್ಪ, ಮೈಲ್ಯಾಕ್ ವ್ಯವಸ್ಥಾಪಕ ನಿರ್ದೇಶಕ ಜಿ.ಕುಮಾರಸ್ವಾಮಿ, ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಮತ್ತಿತರರು ಉಪಸ್ಥಿತರಿದ್ದರು.

Translate »