ಭಣಗುಡುತ್ತಿರುವ ಮಾರುಕಟ್ಟೆಗಳು!
ಮೈಸೂರು

ಭಣಗುಡುತ್ತಿರುವ ಮಾರುಕಟ್ಟೆಗಳು!

October 24, 2022

ಮೈಸೂರು, ಅ.23(ಜಿಎ)-ವ್ಯಾಪಾರ ಪರವಾಗಿಲ್ಲ. ಈ ಬಾರಿಯ ದೀಪಾವಳಿ ಹಬ್ಬಕ್ಕೆ ಹೂ, ಹಣ್ಣು ಖರೀದಿ ಮಾಡುವವರ ಸಂಖ್ಯೆ ಕಡಿಮೆ ಇದೆ ಎನ್ನುತ್ತಿರುವ ಮೈಸೂರು ದೇವರಾಜ ಮಾರುಕಟ್ಟೆಯ ವ್ಯಾಪಾರಿಗಳು ನಾಳೆ ಹೆಚ್ಚಿನ ಜನರು ಬರುವ ನಿರೀಕ್ಷೆಯಲ್ಲಿದ್ದಾರೆ. ದೀಪಾವಳಿ ಹಬ್ಬಕ್ಕೆ ಪ್ರತಿ ವರ್ಷ ಹೂ, ಹಣ್ಣು ಖರೀದಿಗಾಗಿ ದೇವರಾಜ ಮಾರುಕಟ್ಟೆ, ವಾಣಿವಿಲಾಸ ಮಾರುಕಟ್ಟೆ ಮತ್ತು ಮಂಡಿ ಮಾರುಕಟ್ಟೆಗೆ ಭಾರೀ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದ ಜನತೆ ಈ ಬಾರಿ ಯಾಕೋ ಹೇಳಿಕೊಳ್ಳುವಷ್ಟು ಜನತೆ ಖರೀದಿಗೆ ಮುಂದಾಗಿಲ್ಲ. ಸೋಮವಾರ ಮಾರುಕಟ್ಟೆಗಳಿಗೆ ಬರುವ ಎಂಬ ವಿಶ್ವಾಸದಲ್ಲಿದ್ದಾರೆ.

ಸಾಮಾನ್ಯವಾಗಿ ಹಬ್ಬಗಳು ಎಂದರೆ ಒಂದು ದಿನ ಮುಂಚಿತವಾಗಿ ಮೈಸೂರಿನ ಸÀಯ್ಯಾಜಿರಾವ್ ರಸ್ತೆ, ಇರ್ವಿನ್ ರಸ್ತೆ, ಶೇಷಾದ್ರಿ ಅಯ್ಯರ್ ರಸ್ತೆ, ಪಡುವಾರಹಳ್ಳಿ, ಅಗ್ರಹಾರ, ದೇವರಾಜ ಮಾರುಕಟ್ಟೆ, ಚಿಕ್ಕಗಡಿಯಾರ, ರಿಂಗ್ ರಸ್ತೆ ಸೇರಿದಂತೆ ವಿವಿಧ ಕಡೆಗಳಲ್ಲಿ ಹೂ, ಹಣ್ಣುಗಳ ಮಾರಾಟ ನಡೆಯುತ್ತದೆ. ಜನತೆ ಬೇರೆ ಕಡೆಗಳಿಗಿಂತ ಸಿಟಿಯಲ್ಲಿ ಕಡಿಮೆ ಬೆಲೆಗೆ ದೊರೆಯುತ್ತದೆ ಎಂದು ದೇವರಾಜ ಮಾರುಕಟ್ಟೆಯಲ್ಲಿ ಖರೀದಿ ಮಾಡುವುದು ವಾಡಿಕೆ.
ಇಂದು ಇಂಡೋ- ಪಾಕ್ ರೋಚಕ ಪಂದ್ಯ ಒಂದು ಕಾರಣವಾಗಿದ್ದರೆ, ಸೋಮವಾರದಿಂದ ಸಾಲು-ಸಾಲು ರಜೆ ಇರುವುದರಿಂದ ಭಾನುವಾರವಾದ ಇಂದು ಕಾರಣ ಮಾರುಕಟ್ಟೆಗೆ ಖರೀದಿ ಮಾಡುವವರ ಸಂಖ್ಯೆ ಇರಬಹುದು ಎಂದು ಕೆಲ ವ್ಯಾಪಾರಿಗಳು ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

ಪ್ರತಿ ಬಾರಿ ಹಬ್ಬಗಳ ಸಂದರ್ಭದಲ್ಲಿ ಇಡೀ ಮಾರುಕಟ್ಟೆ ಕಾಲಿಡದಷ್ಟು ಜನರು ಬೆಳಗ್ಗೆ ಮತ್ತು ಸಂಜೆ ಹೂ, ಹಣ್ಣು ಮತ್ತು ಪೂಜಾ ಸಾಮಾಗ್ರಿಯನ್ನು ಕೊಳ್ಳಲು ಬರುತ್ತಾರೆ. ಈ ಬಾರಿ ಮಾತ್ರ ಅತ್ಯಂತ ಕಡಿಮೆ ಜನ ಕಾಣಿಸುತ್ತಿದ್ದು, ಸಾಮಾನ್ಯ ವಾಗಿ ದಿನನಿತ್ಯ ಎಷ್ಟು ಜನರು ಬರುತ್ತಾರೆ ಅಷ್ಟೇ ಜನ ಇದ್ದಾರೆ. ಆದರೆ, ನಮ್ಮ ವ್ಯಾಪಾರದಲ್ಲಿ ಏರಿಕೆಯೂ ಆಗಿಲ್ಲ. ಕಡಿಮೆಯೂ ಆಗಿಲ್ಲ. ಒಟ್ಟಾರೇ ವ್ಯಾಪಾರ ಪರವಾಗಿಲ್ಲ. ಎಂದರು.

ಬೆಲೆ ಹೀಗಿದೆ : ಹಣ್ಣುಗಳ ಬೆಲೆಯಲ್ಲಿ ಏರಿಕೆ ಕಂಡಿಲ್ಲ. ಹೂವಿಗೆ ಪ್ರತಿ ಬಾರಿಯಂತೆ ಈ ಬಾರಿಯೂ ಕೊಂಚ ಬೆಲೆ ಏರಿಕೆಯಾಗಿದೆ. ಸೇವಂತಿಗೆ ಮಾರು 40 ರಿಂದ 50 ರೂ., ಮಲ್ಲಿಗೆ ಮೀಟರ್‍ಗೆ 100 ಹಾಗೂ ಮಾರಿಗೆ 200 ರೂ., ಗುಲಾಬಿ ಕೆ.ಜಿಗೆ 200 ರೂ. ಹಾಗೂ ಕನಕಾಂಬರ ಮೀಟರ್‍ಗೆ 100 ರೂ. ಇದ್ದು, ಕೆ.ಜಿಯಲ್ಲಿ ಮಲ್ಲಿಗೆ 800 ರೂ., ಕನಕಾಂಬರ 1200 ರೂ., ಹಾಗೂ ಕಮಲದ ಹೂ ಎರಡಕ್ಕೆ 30 ರೂ., ನಷ್ಟಿದೆ.

ದಾಳಿಂಬೆ 200 ರೂ., ಮೋಸಂಬಿ 80 ರೂ., ಸೇಬು 120 ರೂ., ದ್ರಾಕ್ಷಿ 180 ರೂ., ಸಪೋಟಾ 200 ರೂ., ಕಿತ್ತಳೆ 120 ರೂ,. ಪೈನಾಪಲ್ 80 ರೂ., ಇವೆ.

Translate »