ಸಾಂಪ್ರದಾಯಿಕ `ದೂರ’ದ ದೀಪಾವಳಿ ದೀಪಗಳ  ದೂರ ಮಾಡುತ್ತಿರುವ ತೋರಿಕೆ ದೀಪಗಳು
ಮೈಸೂರು

ಸಾಂಪ್ರದಾಯಿಕ `ದೂರ’ದ ದೀಪಾವಳಿ ದೀಪಗಳ ದೂರ ಮಾಡುತ್ತಿರುವ ತೋರಿಕೆ ದೀಪಗಳು

October 24, 2022

ಮೈಸೂರು,ಅ.23-ಕೊರೊನಾ ಹಿನ್ನೆಲೆ ಯಲ್ಲಿ ಎರಡು ವರ್ಷದ ನಂತರ ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಪ್ರತಿವರ್ಷ ದೀಪಾವಳಿ ಹಬ್ಬಕ್ಕಾಗಿ ಮಣ್ಣಿನ ದೀಪ ಮಾಡುತ್ತಿದ್ದ ಕುಂಬಾರರ ಕುಲಕಸು ಬಿಗೆ ಹೊರ ರಾಜ್ಯಗಳ ಮೌಲ್ಡ್ ದೀಪಗಳ ಪೈಪೋಟಿ ಭಾರೀ ಹೊಡೆತ ನೀಡಿದೆ.

ಕಳೆದ ಎರಡು ದಶಕಗಳಿಂದ ಮೈಸೂರು, ಚಾಮರಾಜನಗರ ಜಿಲ್ಲೆಯ ವಿವಿಧೆಡೆ ದೀಪಾ ವಳಿ ಹಬ್ಬಕ್ಕಾಗಿ ಮಣ್ಣಿನ ದೀಪ ತಯಾರಿಸಿ ಸರಬರಾಜು ಮಾಡುತ್ತಿದ್ದ ಮೈಸೂರು ತಾಲೂಕಿನ ಜಯಪುರ ಹೋಬಳಿ ದೂರ ಗ್ರಾಮದ ಕುಂಬಾರ ಕುಶಲ ಕೈಗಾರಿಕಾ ಸಂಘದ ಮಣ್ಣಿನ ದೀಪಗಳಿಗೆ ಬೇಡಿಕೆ ಗಣ ನೀಯ ಪ್ರಮಾಣದಲ್ಲಿ ಕುಸಿದಿದೆ. ಪ್ರತಿ ವರ್ಷ 4-5 ಲಕ್ಷ ಮಣ್ಣಿನ ದೀಪ(ಹಣತೆ) ಸರಬರಾಜು ಮಾಡುತ್ತಿದ್ದ ಈ ಸಂಘದ ಸದಸ್ಯರು ಈ ಬಾರಿ 40-50 ಸಾವಿರ ಮಣ್ಣಿನ ದೀಪ ತಯಾರಿಸಿ, ಬೇಡಿಕೆ ಇದ್ದೆಡೆ ಸರಬರಾಜು ಮಾಡಿದ್ದಾರೆ.

ಕೊರೊನಾ ಹಿನ್ನೆಲೆಯಲ್ಲಿ ಎರಡು ವರ್ಷ ಮಣ್ಣಿನ ಹಣತೆ ತಯಾರಿಸುವ ಕುಂಬಾರ ಕುಲಕಸುಬುದಾರರಿಗೆ ಕೆಲಸವೇ ಇರಲಿಲ್ಲ. ಈ ಬಾರಿ ಅದ್ಧೂರಿ ದೀಪಾವಳಿ ಆಚರಿಸು ತ್ತಿರುವುದು ಹರ್ಷ ತಂದಿತ್ತು. ಹೆಚ್ಚಿನ ಬೇಡಿಕೆ ಬರಬಹುದು ಎಂಬ ನಿರೀಕ್ಷೆಯಿತ್ತು. ಆದರೆ, ನಿರೀಕ್ಷೆಗಳು ಹುಸಿಯಾಗಿದ್ದು, ಮೌಲ್ಡ್ ದೀಪಗಳ ಮಾರಾಟದಿಂದ ಕುಲಕಸುಬಿನ ಮೇಲೆ ಅಡ್ಡ ಪರಿಣಾಮ ಬೀರಿರುವುದರಿಂದ ಕುಂಬಾರಿಕೆ ಮಾಡು ವವರು ಆತಂಕ ಪಡುವಂತಾಗಿದೆ.
ಅಂದ ಚೆಂದಕ್ಕೆ ಮರುಳಾಗುತ್ತಾರೆ: ತಮಿಳುನಾಡು, ಬೆಂಗಳೂರು ಸೇರಿದಂತೆ ವಿವಿಧೆಡೆ ಮೌಲ್ಡ್(ಅಚ್ಚು)ನಿಂದ ತಯಾರಿ ಸಿರುವ ಅಲಂಕಾರಿಕ ದೀಪಗಳು ಜನ ರನ್ನು ಆಕರ್ಷಿಸುತ್ತಿವೆ. ಬರೀ ತೋರಿಕೆಗೆ ಮಾರುಹೋಗಿ ಹೆಚ್ಚು ಹಣ ನೀಡಿ ಜನ ಖರೀದಿಸುತ್ತಿದ್ದಾರೆ. ಆಕರ್ಷಕ ಪ್ಯಾಕಿಂಗ್ ನಲ್ಲಿ ಅಲಂಕಾರಿಕ ದೀಪಗಳನ್ನು ಸರಬ ರಾಜು ಮಾಡಲಾಗಿದೆ. ನಾಜೂಕಾದ ದೀಪ ಗಳ ಮುಂದೆ ಗುಡಿ ಕೈಗಾರಿಕೆಯಲ್ಲಿ ತಯಾರಿಸಿದ ಮಣ್ಣಿನ ದೇಸೀ ದೀಪಗಳಿಗೆ ಬೇಡಿಕೆ ಕುಸಿಯುತ್ತಿದೆ. ಇನ್ನಾದರೂ ಕುಂಬಾ ರರು ತಯಾರಿಸುತ್ತಿರುವ ಮಣ್ಣಿನ ದೀಪಗಳ ಬಳಕೆ ಹೆಚ್ಚಿಸಲು ಕ್ರಮ ಕೈಗೊಳ್ಳುವ ಅಗತ್ಯವಿದೆ.

ಕೈ ಹಿಡಿದಿದ್ದ ಸಹಕಾರ ಸಂಘ: ಬೇಡಿಕೆ ಕುಸಿತ, ಶೂನ್ಯ ಸಂಪಾದನೆ ಹೀಗೆ ಹಲವು ಸಮಸ್ಯೆ ಹಾಗೂ ಸವಾಲು ಎದುರಿಸ ಲಾಗದೇ ಕುಲಕಸುಬಿಗೆ ತಿಲಾಂಜಲಿ ಹೇಳುತ್ತಿರುವ ಸಂದರ್ಭದಲ್ಲಿ ದೂರ ಗ್ರಾಮದಲ್ಲಿ 14 ಕುಟುಂಬಗಳು ಒಂದೆಡೆ ಸೇರಿ, ಕುಲಕಸುಬು ಕುಂಬಾರಿಕೆ ವೃತ್ತಿ ಯನ್ನು ಮುಂದುವರೆಸಿಕೊಂಡು ಹೋಗುವ ಸಲುವಾಗಿ ಮೂರು ದಶಕದ ಹಿಂದೆ ದೂರ ಗ್ರಾಮದಲ್ಲಿ `ಕುಂಬಾರ ಕುಶಲ ಕೈಗಾರಿಕಾ ಸಹಕಾರ ಸಂಘ’ ಸ್ಥಾಪಿಸಲಾಗಿದೆ. ಸಂಘಕ್ಕೆ ಗ್ರಾಮದ ಕುಂಬಾರ ಸಮುದಾಯದ ಹಿರಿಯರು ಮುಕ್ಕಾಲು ಗುಂಟೆ ಭೂಮಿಯನ್ನು ದಾನವಾಗಿ ನೀಡಿದ್ದು, ಅದರಲ್ಲ್ಲಿ ಖಾದಿ ಬೋರ್ಡ್‍ನಿಂದ ಸಾಲ ಪಡೆದು ಶೆಡ್ ನಿರ್ಮಿಸಲಾಗಿದೆ. ಇಲ್ಲಿ 14 ಕುಟುಂಬಗಳ ಸದಸ್ಯರು ದೀಪ ಸೇರಿದಂತೆ ಇನ್ನಿತರ ಮಣ್ಣಿನ ಉತ್ಪನ್ನ ತಯಾರಿಸುತ್ತಿದ್ದಾರೆ.

ಒಲೆಗೂಡಲ್ಲಿ ಬೇಯಿಸಲಾಗುತ್ತದೆ: ದೀಪಾವಳಿ ಹಬ್ಬಕ್ಕೆ ಎರಡು ತಿಂಗಳ ಮುನ್ನವೇ ದೀಪ ತಯಾರಿಕೆ ಆರಂಭ ವಾಗುತ್ತದೆ. ನಾಲ್ಕು ಪ್ರತ್ಯೇಕ ಗಾತ್ರದ, ವಿವಿಧ ವಿನ್ಯಾಸದ ದೀಪಗಳನ್ನು ತಯಾರಿಸಲಾಗು ತ್ತದೆ. ಜೇಡಿಮಣ್ಣಿನಿಂದ ತಯಾರಿಸಿದ ದೀಪವನ್ನು 10 ದಿನ ಒಣಗಿಸಲಾಗುತ್ತದೆ. ಆ ನಂತರ ಒಲೆಗೂಡಿನಲ್ಲಿ ತೆಂಗಿನ ಗರಿ ಹಾಗೂ ತೆಂಗಿನಮಟ್ಟೆ ಬಳಸಿ ಮಣ್ಣಿನ ದೀಪ ವನ್ನು 5-6ಗಂಟೆ ಬೇಯಿಸಲಾಗುತ್ತದೆ. ಮರುದಿನ ಒಲೆಗೂಡನ್ನು ತೆರೆಯಲಾಗು ತ್ತದೆ. ಅದರೊಳಗಿರುವ ದೀಪವನ್ನು ಗಾತ್ರ, ವಿನ್ಯಾಸಕ್ಕನುಗುಣವಾಗಿ ವಿಂಗಡಿಸಿ, ಜೋಡಿ ಸಲಾಗುತ್ತದೆ. ಚಿಕ್ಕ ದೀಪವೊಂದಕ್ಕೆ 1 ರೂ., 2 ರೂ., ದೊಡ್ಡ ದೀಪಗಳಿಗೆ 6 ರೂ, 8 ರೂ., ಅಯ್ಯಪ್ಪಸ್ವಾಮಿ ದೀಪಕ್ಕೆ 10 ರೂ. ದರ ನಿಗದಿ ಮಾಡಲಾಗಿದೆ. ಮಾರಾಟ ಗಾರರು ದೂರ ಗ್ರಾಮಕ್ಕೆ ಬಂದು ದೀಪ ಗಳನ್ನು ಕೊಂಡೊಯ್ಯುತ್ತಾರೆ.

Translate »