ಕುಕ್ಕರಹಳ್ಳಿ ಕೆರೆಯ ಹೆಚ್ಚುವರಿ ನೀರು ಹೊರ ಹಾಕಲು  ಹೊಸ ಸುರಕ್ಷಾ ಕಾಲುವೆ ನಿರ್ಮಾಣ
ಮೈಸೂರು

ಕುಕ್ಕರಹಳ್ಳಿ ಕೆರೆಯ ಹೆಚ್ಚುವರಿ ನೀರು ಹೊರ ಹಾಕಲು ಹೊಸ ಸುರಕ್ಷಾ ಕಾಲುವೆ ನಿರ್ಮಾಣ

October 24, 2022

ಮೈಸೂರು,ಅ.23(ಎಂಟಿವೈ)- ಮೈಸೂ ರಲ್ಲಿ ಸುರಿದ ಭಾರೀ ಮಳೆಯಿಂದ ಕುಕ್ಕರ ಹಳ್ಳಿ ಕೆರೆಯಲ್ಲಿ ಅಪಾಯ ಮಟ್ಟಕ್ಕಿಂತ ಹೆಚ್ಚಿನ ನೀರು ಸಂಗ್ರಹವಾಗಿ ಆತಂಕವುಂಟು ಮಾಡಿದ್ದ ಹಿನ್ನೆಲೆಯಲ್ಲಿ ಇದೀಗ ಕೆರೆಯಿಂದ ಹೆಚ್ಚು ವರಿ ನೀರು ಸರಾಗವಾಗಿ ಹರಿದು ಹೋಗಲು ಹೊಸದಾಗಿ ಕಾಲುವೆಯೊಂ ದನ್ನು ನಿರ್ಮಿಸಲಾಗುತ್ತಿದೆ.

ಎಡೆಬಿಡದೆ ಸುರಿದ ಮಳೆಯಿಂದ ಕೆರೆಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬಂದಿತ್ತು. ಕೆರೆಯಲ್ಲಿ ನೀರು ಅಪಾಯ ಮಟ್ಟ ತಲು ಪುತ್ತಿದ್ದಂತೆ ತೂಬಿನ(ಕ್ರೆಸ್ಟ್ ಗೇಟ್) ಮೂಲಕ ಹೆಚ್ಚುವರಿ ನೀರನ್ನು ಕೆರೆಯಿಂದ ಹೊರಕ್ಕೆ ಬಿಡಲಾಗಿತ್ತು. ಹಲವು ವರ್ಷಗಳಿಂದ ತೂಬಿನ ನಿರ್ವಹಣೆ ಮಾಡದ ಕಾರಣ ಕೆರೆಯಿಂದ ಹೆಚ್ಚುವರಿ ನೀರನ್ನು ಹೊರ ಹಾಕಲು ಪರ ದಾಡಬೇಕಾಯಿತು. ಎರಡು ದಿನಗಳಿಂದ ಸಾಕಷ್ಟು ಕಸರತ್ತು ನಡೆಸಿ, ಕೊನೆಗೂ ತೂಬು ದುರಸ್ತಿಯಾಗಿ, ಈಗ ಕಾರ್ಯ ನಿರ್ವಹಿ ಸುತ್ತಿದ್ದು, ಕೆರೆಯಿಂದ ನೀರನ್ನು ಮೈಸೂರು -ಬೋಗಾದಿ ರಸ್ತೆಗೆ ಹೊಂದಿಕೊಂಡಂತಿ ರುವ ಚರಂಡಿ ಮೂಲಕ ರಾಜಕಾಲುವೆಗೆ ಹರಿಸಲಾಗುತ್ತಿದೆ. ಎರಡು ದಿನದಿಂದ ನೀರು ನಿರಂತರವಾಗಿ ಕೆರೆಯಿಂದ ಹೊರ ಹರಿಯುತ್ತಿರುವುದು ಹಾಗೂ ಕೆರೆಗೆ ಒಳಹರಿವು ಕಡಿತವಾಗಿರುವುದರಿಂದ ಕೆರೆ ಅಪಾಯದ ಆತಂಕ ದೂರಾಗಿದೆ.

ತುರ್ತು ಚಾನಲ್ ನಿರ್ಮಾಣ: ಮುಂದೆಯೂ ಮಳೆ ಬಂದರೆ ಕೆರೆಗೆ ಭಾರೀ ಪ್ರಮಾಣದ ನೀರು ಹರಿದು ಬರುವ ಸಾಧ್ಯತೆ ಇರುವು ದರಿಂದ ಕೆರೆಯನ್ನು ಅಪಾಯದಿಂದ ಪಾರು ಮಾಡುವ ನಿಟ್ಟಿನಲ್ಲಿ ಕುಕ್ಕರಹಳ್ಳಿ ಕೆರೆ ಏರಿ ಯುದ್ದಕ್ಕೂ ಹೊಸದಾಗಿ ಕಾಲುವೆಯೊಂ ದನ್ನು ತೋಡಲಾಗುತ್ತಿದೆ. ಕೆರೆಯಲ್ಲಿ ಹೆಚ್ಚಿನ ನೀರು ಸಂಗ್ರಹವಾದರೆ, ಅದನ್ನು ಹೊರ ಹಾಕಲು ಹೊಸದಾಗಿ ತೋಡಿರುವ ಚಾನಲ್ ಸಹಕಾರಿಯಾಗಲಿದೆ. ಕೆರೆ ಭಾಗದ ಪ್ರದೇಶ ಇಳಿಜಾರಾಗಿರುವ ಸುರಕ್ಷಿತ ಜಾಗವನ್ನು ಅವಲೋಕಿಸಿ, ರೈಲ್ವೆ ಸೇತುವೆ ಗೇಟ್ ದಿಕ್ಕಿಗೆ ಸ್ಥಳ ಗುರುತಿಸಿ ಕಾಲುವೆ ತೋಡಲಾಗಿದೆ. ಇದರಿಂದ ಕೆರೆ ಏರಿಯಲ್ಲಿ ಎರಡು ಕಡೆ ಪಾದಚಾರಿ ಮಾರ್ಗಕ್ಕೆ ಅಡ್ಡಲಾಗಿ ದೊಡ್ಡ ಗಾತ್ರದ ಪೈಪ್ ಅಳವಡಿಸಲಾಗುತ್ತಿದೆ.

ಹೆಚ್ಚುವರಿ ನೀರು ಸರಾಗವಾಗಿ ಹರಿದು ಹೋಗಲೆಂಬ ಕಾರಣಕ್ಕೆ ಹೊಸ ಕಾಲುವೆ ಯನ್ನು ಕುಕ್ಕರಹಳ್ಳಿ ಕೆರೆ ಆವರಣದಲ್ಲಿರುವ ಕುವೆಂಪು ವನದ ಮುಂಭಾಗದ ಖಾಲಿ ಜಾಗ ಬಳಸಿಕೊಂಡು ಬೋಗಾದಿ ರಸ್ತೆಯ ಬದಿಯಲ್ಲಿರುವ ಹಳೆ ತೂಬಿನವರೆಗೂ ತೋಡಲಾಗಿದೆ. 18 ಅಡಿ ಆಳ, 5 ಅಡಿ ಅಗಲದ ಕಾಲುವೆ ತೋಡಲಾಗಿದ್ದು, ವಾಯುವಿಹಾರಿ ಗಳ ಸುರಕ್ಷತೆಯ ದೃಷ್ಟಿಯಿಂದ ಹೊಸ ಕಾಲುವೆ ಉದ್ದಕ್ಕೂ ಪಟ್ಟಿಯನ್ನು ಕಟ್ಟಿ, ಎಚ್ಚರಿಕೆ ನೀಡಲಾಗಿದೆ.

ತೂಬು ಕಾರ್ಯನಿರ್ವಹಿಸುತ್ತಿದೆ: ಕುಕ್ಕರಹಳ್ಳಿಯ ವಾಲ್ವ್‍ಮನ್ ತಮ್ಮಣ್ಣೇಗೌಡ ಮಾತನಾಡಿ, ಕೆರೆಯ ಹೆಚ್ಚುವರಿ ನೀರನ್ನು ಗೇಟ್‍ವಾಲ್ವ್ ಮೂಲಕ ಹೊರ ಬಿಡಲಾಗುತ್ತಿದೆ. ಮೊದಲ ಎರಡು ದಿನ ಸ್ಟ್ರಕ್ ಆಗಿತ್ತು. ಸತತ ಪ್ರಯತ್ನದ ಬಳಿಕ ಅದು ಈಗ ಸರಿಯಾಗಿ ಕೆಲಸ ಮಾಡುತ್ತಿದೆ. ಎರಡು ದಿನದಿಂದ ಕೆರೆಯಿಂದ ಹೆಚ್ಚುವರಿ ನೀರನ್ನು ಹೊರಗೆ ಬಿಡುತ್ತಿರುವುದರಿಂದ ಸಾಕಷ್ಟು ನೀರು ಕಡಿಮೆಯಾಗಿರುವುದನ್ನು ವಾಯುವಿಹಾರಿಗಳು ಗಮನಿಸಿದ್ದಾರೆ. ಕೆರೆ ಹಾಗೂ ಏರಿಗೆ ಯಾವುದೇ ಆತಂಕವಿಲ್ಲ ಎಂದರು.

ಸ್ಥಳೀಯರ ಆತಂಕ: ಕುಕ್ಕರಹಳ್ಳಿ ಕೆರೆ ಏರಿಯಲ್ಲಿ ಕೆಲವೆಡೆ ನೀರು ಜಿನುಗು ತ್ತಿರುವುದರಿಂದ ಏರಿ ಅಭದ್ರಗೊಳ್ಳುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ನೀರು ಚರಂಡಿ ಮೂಲಕ ಹರಿಯುತ್ತಿರುವುದರಿಂದ ಸರಸ್ವತಿಪುರಂನ ತಗ್ಗು ಪ್ರದೇಶಕ್ಕೆ ನುಗ್ಗಬಹುದೆಂಬ ಆತಂಕ ಸ್ಥಳೀಯರದ್ದಾಗಿದ್ದು, ಏರಿಯ ಭದ್ರತೆಯ ಬಗ್ಗೆ ವಿಶ್ವಾಸ ಮೂಡಿಸುವಂತೆ ಮನವಿ ಮಾಡಿದ್ದಾರೆ.

Translate »