ಹೋಂ ಕ್ವಾರಂಟೈನ್ ಸ್ಟಿಕ್ಕರ್ ಕಿತ್ತು ಹಾಕಿದರೆ ಕ್ರಿಮಿನಲ್ ಕೇಸ್
ಮೈಸೂರು

ಹೋಂ ಕ್ವಾರಂಟೈನ್ ಸ್ಟಿಕ್ಕರ್ ಕಿತ್ತು ಹಾಕಿದರೆ ಕ್ರಿಮಿನಲ್ ಕೇಸ್

April 7, 2020

ಜಿಲ್ಲಾಧಿಕಾರಿ ಎಚ್ಚರಿಕೆ  ಗುಂಪು ಸೇರಿದರೆ ಕ್ರಮ: ಎಸ್ಪಿ

ಮೈಸೂರು, ಏ.6(ಎಸ್‍ಬಿಡಿ)-ಹೋಂ ಕ್ವಾರಂಟೈನ್ ಸ್ಟಿಕ್ಕರ್ ಕಿತ್ತು ಹಾಕುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಎಚ್ಚರಿಸಿದ್ದಾರೆ. ಹೋಂ ಕ್ವಾರಂಟೈನ್‍ನಲ್ಲಿರುವವರ ಮನೆಯ ಮುಂಭಾಗ ಸ್ಟಿಕ್ಕರ್ ಅಂಟಿಸ ಲಾಗುತ್ತದೆ. ನಂಜನಗೂಡಿನಲ್ಲಿ ಕೆಲವರು 2 ಬಾರಿ ಸ್ಟಿಕ್ಕರ್ ಕಿತ್ತು ಹಾಕಿದ್ದಾರೆ. ಹೋಂ ಕ್ವಾರಂಟೈನ್ ಅವಧಿ ಮುಗಿದಿದ್ದರೂ ಸ್ಟಿಕ್ಕರ್ ಕೀಳುವಂತಿಲ್ಲ. ನಿಮ್ಮ ಹಾಗೂ ನಿಮ್ಮ ಪ್ರಾಂತ್ಯ ದವರ ಸುರಕ್ಷತೆ ದೃಷ್ಟಿಯಿಂದ ಸ್ಟಿಕ್ಕರ್ ಅಂಟಿಸುವುದು. ಆರೋಗ್ಯ ಇಲಾಖೆ ಅಧಿಕಾರಿಗಳ ಹೊರತು ಬೇರೆ ಯಾರಿಗೂ ಅವಕಾಶವಿಲ್ಲ. ಇದು ಕಡೇ ಎಚ್ಚರಿಕೆ. ಇನ್ನು ಮುಂದೆ ಸ್ಟಿಕ್ಕರ್ ಕೀಳುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಸೂಚಿಸಲಾಗಿದೆ ಎಂದರು.

ಜಮಾತ್ ಸಭೆಯಲ್ಲಿ ಭಾಗಿಯಾಗಿದ್ದವರು ಸ್ವಇಚ್ಛೆಯಿಂದ ಕೋವಿಡ್ ಆಸ್ಪತ್ರೆಗೆ ಬಂದು ವರದಿ ಮಾಡಿಕೊಳ್ಳಬೇಕು. ಇದರಿಂದ ಪರೀಕ್ಷೆ ನಡೆಸಲು ಅನುಕೂಲವಾಗುತ್ತದೆ. ಕುಟುಂಬ ಹಾಗೂ ಸಮುದಾಯದ ಸುರಕ್ಷತೆಗೆ ಸಹಕರಿಸಬೇಕು. ಇದು ವಿಶೇಷ ಸನ್ನಿವೇಶವಾದ ಕಾರಣ ಈ ಬಾರಿ ಶಾಬ್ ಇ ಬರಾತ್ ಧಾರ್ಮಿಕ ಆಚರಣೆಗೆ ನಿರ್ಬಂಧವಿದೆ. ಮನೆಯಲ್ಲೇ ಹೆಚ್ಚು ಜನ ಸೇರದೆ ಪ್ರಾರ್ಥನೆ ಸಲ್ಲಿಸುವಂತೆ ರಾಜ್ಯ ವಕ್ಫ್ ಮಂಡಳಿ ಸೂಚನೆ ನೀಡಿದೆ. ಅದರಂತೆ ಸಹಕರಿಸಬೇಕೆಂದು ಮುಸ್ಲಿಂ ಬಾಂಧವರಲ್ಲಿ ಮನವಿ ಮಾಡುತ್ತೇನೆ. ಮನೆ ಬಳಿಗೆ ಪಡಿತರ ತಲುಪಿಸುವ ಕಾರ್ಯ ಮುಂದುವರೆದಿದೆ. ಪ್ರತಿಯೊಂದು ಕುಟುಂಬಕ್ಕೂ ಪಡಿತರ ದೊರಕಲಿದೆ. ಗೊಂದಲ ಬೇಡ. ಈಗಾಗಲೇ ಜಿಲ್ಲೆಯಲ್ಲಿ ಶೇ.30ರಷ್ಟು ಫಲಾನು ಭವಿಗಳಿಗೆ ಪಡಿತರ ವಿತರಿಸಲಾಗಿದೆ ಎಂದರು. ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 35ಕ್ಕೆ ಏರಿದೆ. ಇಂದು ದೃಢಪಟ್ಟ 7ರಲ್ಲಿ ತಬ್ಲಿಘಿ ಜಮಾತ್ ತಂಡಕ್ಕೆ ಸೇರಿದ ಮೂವರ ಹೊರತುಪಡಿಸಿ ಉಳಿದವರು ನಮ್ಮ ನಿಗಾದಲ್ಲೇ ಇದ್ದವರು. ಪಾಸಿಟಿವ್ 154ನೇ ವ್ಯಕ್ತಿ, 104ನೇ ವ್ಯಕ್ತಿಯ ಸಂಪರ್ಕದಲ್ಲಿದ್ದವರು. 158ನೇ ವ್ಯಕ್ತಿ ಜ್ಯುಬಿಲಂಟ್ ಕಾರ್ಖಾನೆ ನೌಕರ. ಇನ್ನುಳಿದ 160ನೇ ವ್ಯಕ್ತಿ, 23ನೇ ವ್ಯಕ್ತಿ(ಮೈಸೂರಿನ 2ನೇ ಪ್ರಕರಣ)ಯ ಹತ್ತಿರದ ಸಂಬಂಧಿ. ಯಾವುದೇ ಹೊಸ ಪ್ರಕರಣವಲ್ಲ ಎಂದು ಹೇಳಿದರು.

ನಿಯಮ ಮೀರಿದರೆ ಕೇಸ್: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಮಾತನಾಡಿ, ಎಷ್ಟು ಹೇಳಿದರೂ ಕೆಲವೆಡೆ ಗುಂಪು ಸೇರುವುದು, ಪ್ರಾರ್ಥನೆ ಮಾಡುವುದು ಕಂಡು ಬರುತ್ತಿದೆ. ಹುಣಸೂರಿನಲ್ಲೂ ಇಂತಹ ಪ್ರಕರಣ ನಡೆದಿದ್ದು, ಕಠಿಣ ಕ್ರಮ ಕೈಗೊಳ್ಳಲಾಗಿದೆ. ಈ ರೀತಿ ಗುಂಪುಗೂಡಿದರೆ ಮತ್ತಷ್ಟು ಕಠಿಣ ಕ್ರಮ ಖಚಿತ. ಜಮಾತ್ ಸಭೆಯಲ್ಲಿ ಭಾಗವಹಿಸಿ ಬಂದವರು ತಾವಾಗಿಯೇ ವರದಿ ಮಾಡಿಕೊಳ್ಳಬೇಕು. ಈ ಬಗ್ಗೆ ಮೌಲ್ವಿಗಳಿಗೆ ಮಾಹಿತಿ ಇದ್ದರೆ, ಅಂತಹವರಿಗೆ ತಿಳಿಹೇಳಿ ಕಳುಹಿಸಿಕೊಡಬೇಕು. ತಾವಾಗಿಯೇ ವರದಿ ಮಾಡಿಕೊಳ್ಳದಿದ್ದರೆ ತುಂಬಾ ತೊಂದರೆಯಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

 

 

 

 

Translate »