ಮಳವಳ್ಳಿ.ಮಾ.22-ತಾಲೂಕಿನ ಮಂಚನಹಳ್ಳಿ ಹೆಬ್ಬಣಿ ಗ್ರಾಮಗಳ ಹೊರವಲಯದ ರೈತರ ಜಮೀನುಗಳಿಗೆ ಬುಧವಾರ ರಾತ್ರಿ ಕಾಡಾನೆಗಳು ದಾಳಿ ನಡೆಸಿ ಮಾವಿನ ಮರ, ಬಾಳೆ ಹಾಗೂ ತರಕಾರಿ ಬೆಳೆಗಳನ್ನು ನಾಶಮಾಡಿವೆ.
ಗ್ರಾಮದ ನಿಂಗಯ್ಯ ಎಂಬುವರ ಎರಡು ಎಕರೆ ಪ್ರದೇಶದಲ್ಲಿದ್ದ 20ಕ್ಕೂ ಹೆಚ್ಚು ಮಾವಿನ ಮರ ಮತ್ತು ಸಸಿಗಳನ್ನು ಮುರಿದು ಹಾನಿಮಾಡಿದ್ದು, ಇದೇ ಗ್ರಾಮದ ಮಹೇಶ ಎಂಬುವರ ಜಮೀನಿನಲ್ಲಿ ಬೆಳೆದಿದ್ದ ಬಾಳೆ ಹಾಗೂ ವಿವಿಧ ತರಕಾರಿ ಬೆಳೆಗಳನ್ನು ಕಾಡಾನೆಗಳ ಹಿಂಡು ನಾಶಮಾಡಿವೆ. ಅಲ್ಲದೆ ಹೆಬ್ಬಣಿ ಗ್ರಾಮದ ಮಹದೇವಮ್ಮ ಎಂಬು ವರ ಬಾಳೆತೋಟಕ್ಕೂ ನುಗ್ಗಿರುವ ಆನೆಗಳು ಬಾಳೆತೋಟವನ್ನು ನಾಶ ಪಡಿಸಿದೆ, ಆನೆ ದಾಳಿಯ ಬಗ್ಗೆ ಅರಣ್ಯ ಇಲಾಖೆಯ ಅಧಿ ಕಾರಿಗೆ ದೂರವಾಣಿ ಕರೆಮಾಡಿ ತಿಳಿಸಿದ್ದರೂ ಯಾವೊಬ್ಬ ಅಧಿಕಾರಿಯೂ ಸ್ಥಳಕ್ಕೆ ಬರಲಿಲ್ಲ ವೆಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೃಷಿಮಾಡಿ ಖುಷಿಯಾಗಿರಿ ಎಂದು ರೈತರಿಗೆ ಸರ್ಕಾರ ಮನವಿಮಾಡುತ್ತಿದೆ. ಆದರೆ ಸರ್ಕಾರದ ಆಡಳಿತದ ಅಧಿಕಾರಿಗಳ ಬೇಜವಬ್ದಾರಿತನದಿಂದ ಕಷ್ಟಪಟ್ಟು ಬೆಳೆಯುವ ಬೆಳೆಗಳಿಗೆ ರಕ್ಷಣೆ ಇಲ್ಲದಂತಾಗಿದ್ದು, ಅಧಿಕಾರಿಗಳ ಈ ನಡೆಯಿಂದ ರೈತವರ್ಗ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಸಂಬಂಧಪಟ್ಟ ಇಲಾಖೆ ಮೇಲಧಿಕಾರಿಗಳು ಕಾಡುಪ್ರಾಣಿಗಳ ಹಾವಳಿ ತಪ್ಪಿಸಲು ಸೂಕ್ತ ಕ್ರಮ ವಹಿಸಬೇಕೆಂದು ಗ್ರಾಮದ ಮುಖಂದ ಮಹದೇವು ಒತ್ತಾಯಿಸಿದ್ದಾರೆ.