ಜು.31ರೊಳಗೆ ಬೆಳೆ ವಿಮೆಗೆ ಮುಸುಕಿನ ಜೋಳ, ರಾಗಿ,  ತೊಗರಿ, ಹತ್ತಿ, ಅರಿಶಿಣ ಬೆಳೆಗಾರರು ನೋಂದಾಯಿಸಿಕೊಳ್ಳಿ
ಮೈಸೂರು

ಜು.31ರೊಳಗೆ ಬೆಳೆ ವಿಮೆಗೆ ಮುಸುಕಿನ ಜೋಳ, ರಾಗಿ, ತೊಗರಿ, ಹತ್ತಿ, ಅರಿಶಿಣ ಬೆಳೆಗಾರರು ನೋಂದಾಯಿಸಿಕೊಳ್ಳಿ

July 20, 2021

ಮೈಸೂರು,ಜು.19(ಆರ್‍ಕೆಬಿ)-ಈ ಸಾಲಿನ ಮುಂಗಾರು ಹಂಗಾಮಿಗೆ ಸೂಚಿಸಲಾಗಿ ರುವ ರಾಗಿ (ನೀರಾವರಿ) ಹಾಗೂ ಮಳೆಯಾಶ್ರಿತ ಮುಸುಕಿನ ಜೋಳ, ರಾಗಿ, ತೊಗರಿ, ಹತ್ತಿ, ಅರಿಶಿಣ ಬೆಳೆ ಗಳಿಗೆ ಬೆಳೆ ವಿಮಾ ಅವಧಿ ಜು.31ರವರೆಗೂ ಇದ್ದು, ರೈತರು ನಿಗದಿತ ದಿನಾಂಕದೊಳಗೆ ವಿಮಾ ಕಂತಿನ ಮೊತ್ತವನ್ನು ಪಾವತಿಸಿ, ಬೆಳೆ ವಿಮೆ ಯೋಜನೆ ಪ್ರಯೋಜನ ಪಡೆದುಕೊಳ್ಳುವಂತೆ ಮೈಸೂರಿನ ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಎಂ.ಮಹಾಂತೇಶಪ್ಪ ತಿಳಿಸಿದ್ದಾರೆ.

ಕೃಷಿ ಇಲಾಖೆಗೆ ಸಂಬಂಧಿಸಿದಂತೆ ರೈತರಿಗಾಗಿ ಸೋಮ ವಾರ ಆಯೋಜಿಸಿದ್ದ ನೇರ ಫೋನ್ ಇನ್ ಕಾರ್ಯಕ್ರಮದ ಬಳಿಕ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಅವರು, ಕಳೆದ ಮುಂಗಾರು ಹಂಗಾಮಿನಲ್ಲಿ 515 ರೈತರಿಗೆ 45 ಲಕ್ಷ ರೂ. ವಿಮೆ ಬಂದಿತ್ತು. ರೈತರ ಕೈ ಹಿಡಿಯುವ ಬೆಳೆ ವಿಮೆಗೆ ರೈತರು ಹೆಚ್ಚು ಮುಂದಾಗಬೇಕು. ಅದರ ಪ್ರಯೋಜನ ಪಡೆದುಕೊಳ್ಳಬೇಕು. ವಿಮಾ ಮೊತ್ತದಲ್ಲಿ ಶೇ.2ರಷ್ಟು ಕಟ್ಟಿದರೆ ಸಾಕು, ಉಳಿದ ಶೇ.98ರಷ್ಟನ್ನು ಕರ್ನಾಟಕ ಮತ್ತು ಕೇಂದ್ರ ಸರ್ಕಾರ ಶೇ.50:50 ಅನು ಪಾತದಡಿ ನೀಡಲಿವೆ ಎಂದು ತಿಳಿಸಿದರು.

ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ 1.5ಯಿಂದ 2 ಲಕ್ಷ ದವರೆಗೆ ರೈತರು ಬೆಳೆ ವಿಮೆ ನೋಂದಾವಣಿ ಮಾಡಿ ಕೊಂಡಿದ್ದು, 100 ಕೋಟಿವರೆಗೂ ಬೆಳೆ ವಿಮೆ ಪರಿಹಾರ ಬಂದಿದೆ. ಅದೇ ರೀತಿ ನಮ್ಮ ಜಿಲ್ಲೆಯ ಜನರು ಬೆಳೆ ವಿಮೆಯ ಪ್ರಯೋಜನ ಪಡೆದುಕೊಳ್ಳುವಂತೆ ರೈತರಿಗೆ ಸಲಹೆ ನೀಡಿದರು. ಈ ಬಾರಿಯ ಮುಂಗಾರು ಹಂಗಾಮಿಗೆ 3,97,774 ಎಕರೆ ಬಿತ್ತನೆ ಗುರಿ ಪೈಕಿ 2,07,797 ಎಕರೆ (ಶೇ. 53ರಷ್ಟು) ಬಿತ್ತನೆ ಆಗಿದೆ. ಮಳೆ ಉತ್ತಮವಾಗಿ ಬೀಳು ತ್ತಿದ್ದು, ಶೇ.24ರಷ್ಟು ಮಳೆ ಕೊರತೆ ಇತ್ತು. ಈಗದು ಶೇ.15ಕ್ಕೆ ಇಳಿದಿದೆ. ಈಗ ರಾಗಿ, ಮುಸುಕಿನ ಜೋಳ ಬಿತ್ತನೆಗೆ ಒಳ್ಳೆಯ ಸಮಯ, ಹತ್ತಿ, ರಾಗಿ ಬೆಳೆಗಳು ಚೇತರಿಕೆ ಆಗಿವೆ ಎಂದರು. ಉತ್ತಮ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯಗಳ ನೀರಿನ ಮಟ್ಟದ ಹೆಚ್ಚುತ್ತಿದ್ದು, ಕಬಿನಿ ನೀರು ಬಿಟ್ಟು, ಕೆರೆಗಳನ್ನು ತುಂಬಿಸಲಾಗುತ್ತಿದೆ. ರೈತರು ನರ್ಸರಿ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

Translate »