ಬೆಂಗಳೂರು, ಅ.18- ನವೆಂಬರ್ 1ರ ಕನ್ನಡ ರಾಜ್ಯೋತ್ಸವ ನಂತರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸ್ಥಾನ ಜವಾಬ್ದಾರಿಯಿಂದ ಸಿ.ಟಿ.ರವಿಯವರನ್ನು ಮುಕ್ತಗೊಳಿಸುವ ಸಾಧ್ಯತೆಯಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಗೊಂಡ ಹಿನ್ನೆಲೆಯಲ್ಲಿ ಕಳೆದ ಅ.2 ರಂದು ಸಿ.ಟಿ.ರವಿಯವರು ಸಲ್ಲಿಸಿದ್ದ ರಾಜೀನಾಮೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಮುಂದಿದೆ.
ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಸಿ.ಟಿ.ರವಿಯವರು ಜೆ.ಪಿ.ನಡ್ಡಾ ತಂಡಕ್ಕೆ ಸೇರಿದ ನಂತರ ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳ ಪಕ್ಷದ ಉಸ್ತುವಾರಿ ನೋಡಿಕೊಳ್ಳುವ, ಪಕ್ಷ ಸಂಘಟನೆ ಮಾಡುವ ಜವಾಬ್ದಾರಿ ಸಿ.ಟಿ. ರವಿ ಯವರಿಗಿದೆ. ದಕ್ಷಿಣ ರಾಜ್ಯಗಳಲ್ಲಿ ಪಕ್ಷ ವನ್ನು ಸಂಘಟಿಸಲು ಸಿ.ಟಿ. ರವಿ ಅವ್ಯಾ ಹತವಾಗಿ ಪ್ರಯಾಣ ಮಾಡುತ್ತಿದ್ದಾರೆ.
ಮುಖ್ಯಮಂತ್ರಿಗಳ ಕಚೇರಿ ಮೂಲ ಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ಕನ್ನಡ ರಾಜ್ಯೋತ್ಸವದವರೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ರವಿಯವರನ್ನು ಮುಂದುವರಿಸಲು ಮುಖ್ಯಮಂತ್ರಿ ಬಯಸಿದ್ದಾರೆ.
ನ.3ರಂದು ರವಿಯವರ ರಾಜೀನಾಮೆ ಅಂಗೀಕರಿಸುವ ಸಾಧ್ಯತೆಯಿದೆ ಎಂದರು. ರಾಜ್ಯೋತ್ಸವ ಸಮಾರಂಭಕ್ಕೆ ತಯಾರಿ ನಡೆಸುತ್ತಿರುವುದರ ಮಧ್ಯೆ, ಕೋವಿಡ್-19 ಇರುವುದರಿಂದ ಪ್ರಶಸ್ತಿ ಸಮಾರಂಭ ನಡೆಸುವುದೇ ಅಥವಾ ಮುಂದೂಡುವುದೇ ಎಂಬ ಸಂದಿಗ್ಧ ಸ್ಥಿತಿಯಲ್ಲಿ ಸರ್ಕಾರವಿದೆ. 2008-09ರಲ್ಲಿ ಯಡಿಯೂರಪ್ಪನವರು ಮುಖ್ಯ ಮಂತ್ರಿಯಾಗಿದ್ದಾಗ ರಾಜ್ಯೋತ್ಸವ ಪ್ರಶಸ್ತಿಯನ್ನು ಆ ಸಮಯದಲ್ಲಿ ಪ್ರವಾಹ ಬಂದ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ನಂತರ ಮುಂದಿನ ವರ್ಷ ಪ್ರಶಸ್ತಿ ಘೋಷಣೆ ಮಾಡಿ ಎರಡೂ ವರ್ಷದ ಪ್ರಶಸ್ತಿಯನ್ನು ನೀಡಲಾಯಿತು. ಈ ವರ್ಷ ಸಾಂಕ್ರಾಮಿಕ ಇದ್ದರೂ ಸಹ ದಸರಾ ಆಚರಣೆ ನಿಲ್ಲಿಸಿಲ್ಲ. ಈ ವರ್ಷ ರಾಜ್ಯೋತ್ಸವ ಪ್ರಶಸ್ತಿ ಕೋರಿ 1,500 ಅರ್ಜಿಗಳು ಬಂದಿವೆ ಎಂದು ಸಿ.ಟಿ.ರವಿ ಹೇಳಿದ್ದಾರೆ. ಈ ವರ್ಷ ಕರ್ನಾಟಕ ರಾಜ್ಯ ರಚನೆಯಾಗಿ 65 ವರ್ಷ ಆದ ಹಿನ್ನೆಲೆಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಸಂಖ್ಯೆ ಯನ್ನು 65ಕ್ಕೆ ಮಿತಿಗೊಳಿಸಲಿದ್ದೇವೆ. 65 ಜನರನ್ನು ಸೇರಿಸಿ ಕಾರ್ಯಕ್ರಮ ಮಾಡುವುದು ದೊಡ್ಡ ವಿಷಯವಲ್ಲ. ಪ್ರಶಸ್ತಿ ಪುರಸ್ಕೃತರು ಕೊರೊನಾ ಸೋಂಕಿನ ಕಾರಣದಿಂದ ಬರಲು ಸಾಧ್ಯವಾಗದಿದ್ದರೆ ಅವರ ಮನೆಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನು ಜಿಲ್ಲಾಧಿಕಾರಿಗಳ ಮೂಲಕ ಮಾಡುತ್ತೇವೆ ಎಂದು ಸಿ.ಟಿ.ರವಿ ಹೇಳಿದರು.