ಕಫ್ರ್ಯೂ; ಬಹುತೇಕ ಸಾರಿಗೆ ಬಸ್‍ಗಳಿಗೂ ವಾರಾಂತ್ಯ ವಿಶ್ರಾಂತಿ!
ಮೈಸೂರು

ಕಫ್ರ್ಯೂ; ಬಹುತೇಕ ಸಾರಿಗೆ ಬಸ್‍ಗಳಿಗೂ ವಾರಾಂತ್ಯ ವಿಶ್ರಾಂತಿ!

April 24, 2021

ಮೈಸೂರು, ಏ.23(ಎಂಟಿವೈ)- ಆರನೇ ವೇತನ ಆಯೋಗದ ವರದಿ ಜಾರಿಗೆ ಒತ್ತಾಯಿಸಿ 15 ದಿನ ಮುಷ್ಕರ ನಡೆಸಿ, ಕಳೆದೆರಡು ದಿನದಿಂದಷ್ಟೆ ಕರ್ತವ್ಯಕ್ಕೆ ಹಾಜರಾದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿಗೆ ಈಗ ವೀಕೆಂಡ್ ಕಫ್ರ್ಯೂ ಹಿನ್ನೆಲೆಯಲ್ಲಿ ಮತ್ತೆ 4 ದಿನ ವಿಶ್ರಾಂತಿ ಲಭಿಸಲಿದೆ. ಶನಿವಾರ ಮತ್ತು ಭಾನುವಾರ ಸಾರಿಗೆ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳಲಿದೆ. ವೀಕೆಂಡ್ ಕಫ್ರ್ಯೂ ಜಾರಿ ಜತೆಗೆ ಮೇ 4ರವರೆಗೂ ಕಟ್ಟುನಿಟ್ಟಿನ ನಿಯಮ ಪಾಲನೆಗೆ ಸೂಚಿಸಿರುವುದು ಸಾರಿಗೆ ಸಂಸ್ಥೆಯ ಬಸ್ ಸಂಚಾರಕ್ಕೂ ಅನ್ವಯವಾಗಲಿದೆ.

30 ಬಸ್ ಕಾಯ್ದಿರಿಸಲಾಗುತ್ತದೆ: ಕೆಎಸ್‍ಆರ್‍ಟಿಸಿಯ ಮೈಸೂರು ನಗರ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಪಿ.ನಾಗರಾಜು `ಮೈಸೂರು ಮಿತ್ರ’ನೊಂದಿಗೆ ಶುಕ್ರವಾರ ಮಾತನಾಡಿ, ವೀಕೆಂಡ್ ಕಫ್ರ್ಯೂನಿಂದಾಗಿ ಶನಿವಾರ-ಭಾನುವಾರ ನಗರ ವಿಭಾಗದ ಬಸ್ ಸಂಚಾರ ಸ್ಥಗಿತಗೊಳ್ಳಲಿದೆ. ವಿಭಾಗದ 450 ಬಸ್‍ಗಳಲ್ಲಿ 30-35 ಬಸ್‍ಗಳನ್ನು ನಗರ ಬಸ್ ನಿಲ್ದಾಣದಲ್ಲಿಯೇ ಕಾಯ್ದಿರಿಸಲಾಗುತ್ತದೆ. ಅನಿವಾರ್ಯ ಪರಿಸ್ಥಿತಿ ಎದುರಾದರೆ ಈ ಬಸ್‍ಗಳನ್ನು ಪ್ರಯಾಣಿಕರ ಬೇಡಿಕೆ ಆಧರಿಸಿ ಸಂಚರಿಸಲು ಅವಕಾಶ ನೀಡಲಾಗುತ್ತದೆ. ಬೇರೆ ಮಾರ್ಗಗಳಲ್ಲಿ ಬಸ್ ಸಂಚಾರ ನಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಬೆರಳೆಣಿಕೆ ಬಸ್: ಗ್ರಾಮಾಂತರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ ಮಾತನಾಡಿ, ವೀಕೆಂಡ್ ಕಫ್ರ್ಯೂ ವೇಳೆ ಬಸ್ ಸಂಚಾರ ಸ್ಥಗಿತಗೊಳಿಸ ಬೇಕು. ಕಫ್ರ್ಯೂ ದಿನ ಗ್ರಾಮಾಂತರ ವಿಭಾಗದಿಂದ ಪರಿಸ್ಥಿತಿಗೆ ಅನುಗುಣವಾಗಿ ಬೆರಳೆಣಿಕೆ ಬಸ್ ಸಂಚರಿಸಬಹುದು. ಬೇರೆಲ್ಲಾ ಮಾರ್ಗಗಳಲ್ಲೂ ಬಸ್ ಸಂಚಾರ 2 ದಿನ ಸ್ಥಗಿತಗೊಳ್ಳಲಿದೆ. ಪ್ರಯಾಣಿಕರ ಬೇಡಿಕೆ ಆಧರಿಸಿ, ಅದರಲ್ಲೂ ಅಗತ್ಯ ಬಿದ್ದರೆ ಮಾತ್ರ ಪ್ರಮುಖ ರೂಟ್‍ಗಳಲ್ಲಿ ಬಸ್ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಅಂತಾರಾಜ್ಯ ಬಸ್: ವೀಕೆಂಡ್ ಕಫ್ರ್ಯೂ ಕಾರಣ ಮೈಸೂರಿಂದ ತಮಿಳುನಾಡು, ಕೇರಳದ ನಗರಗಳಿಗೆ ಸಂಚರಿಸುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್ ಸಂಚಾರ ಸ್ಥಗಿತಗೊಳಿಸುವುದಾಗಿ ಉಭಯ ರಾಜ್ಯಗಳ ಸಾರಿಗೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಆ ರಾಜ್ಯಗಳ ಸಾರಿಗೆ ಸಂಸ್ಥೆ ಬಸ್‍ಗಳ ಸಂಚಾರ ಕರ್ನಾಟಕದಲ್ಲಿ ಮುಂದುವರೆಯುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಬಸ್‍ಗಳಿದ್ದರೂ ಪ್ರಯಾಣಿಕರೇ ಇರಲಿಲ್ಲ!
ಮೈಸೂರು ನಗರ, ಗ್ರಾಮಾಂತರ ಬಸ್‍ಗಳಲ್ಲಿ ಶೇ.50 ಪ್ರಯಾಣಿಕರಿಗೆ ಅವಕಾಶ ವಿದ್ದರೂ ವೀಕೆಂಡ್ ಕಫ್ರ್ಯೂ ಪ್ರಭಾವದಿಂದಾಗಿ ಶುಕ್ರವಾರ ಪ್ರಯಾಣಿಕರು ಹೆಚ್ಚಿರಲಿಲ್ಲ. ಇದರಿಂದ 5 ಬಸ್ ತೆರಳುತ್ತಿದ್ದ ಮಾರ್ಗಗಳಲ್ಲಿ 2 ಬಸ್ ಪ್ರಯಾಣಿಸಿದವು. ಸಂಜೆ ಬೆರಳೆಣಿಕೆ ಪ್ರಯಾಣಿಕರಿದ್ದರು. ಮೈಸೂರು ಜಿಲ್ಲೆ ಸಾರಿಗೆ ವ್ಯವಸ್ಥೆಯಲ್ಲಿ ಶುಕ್ರವಾರ ಸಂಜೆಯಿಂದಲೇ `ವೀಕೆಂಡ್ ಕಫ್ರ್ಯೂ’ ಜಾರಿಗೊಂಡ ಸನ್ನಿವೇಶ ಕಂಡು ಬಂದಿತು.

 

 

Translate »