ಮೈಸೂರಿನ ಸಸ್ಯ ಸಂರಕ್ಷಕ ರಘುಲಾಲ್ ರಾಘವನ್
ಮೈಸೂರು

ಮೈಸೂರಿನ ಸಸ್ಯ ಸಂರಕ್ಷಕ ರಘುಲಾಲ್ ರಾಘವನ್

April 24, 2021

 ಗಿಡಗಳ ನೆಡುವುದು ಮಾತ್ರವಲ್ಲದೆ, ಅವುಗಳ ಪಾಲನೆ-ಪೋಷಣೆಗೆ ಕಂಕಣ ಕಟ್ಟಿರುವ ರಘುಲಾಲ್ ರಾಘವನ್

ಬೆಟ್ಟದ ಚಾಮುಂಡೇಶ್ವರಿ ದೇವಾಲಯದ ಆವರಣದಲ್ಲಿ ನೆಟ್ಟ ಗಿಡಗಳಿಗೂ ರಕ್ಷಾಕವಚ

 ಈವರೆಗೆ ಸಾವಿರಾರು ಗಿಡ ನೆಟ್ಟು ಪೋಷಿಸಿ, ಅವುಗಳ ರಕ್ಷಣೆಗಾಗಿ 27,500 ಗಾರ್ಡ್‍ಗಳ ಕೊಡುಗೆ ನೀಡಿದ್ದಾರೆ

ಮೈಸೂರು,ಏ.22(ಪಿಎಂ)- ಮೈಸೂರಿನ ಪ್ರಾಕೃತಿಕ ಸೌಂದರ್ಯದ ತಾಣ ಚಾಮುಂಡಿ ಬೆಟ್ಟ. ಇಲ್ಲಿನ ಶ್ರೀಚಾಮುಂಡೇಶ್ವರಿ ದೇವ ಸ್ಥಾನದ ಆಸುಪಾಸಿನ ನಿಸರ್ಗದ ಪ್ರಶಾಂತ ಮಯ ವಾತಾವರಣ ಇಮ್ಮಡಿಗೊಳಿಸಲು ದೇವಸ್ಥಾನದ ವತಿಯಿಂದ ವಿವಿಧ ಜಾತಿ ಗಿಡಗಳನ್ನು ನೆಡಲಾಗಿದ್ದು, ಈ ಎಲ್ಲಾ ಗಿಡ ಗಳಿಗೆ ರಕ್ಷಣೆಗೆ ಅಗತ್ಯವಿರುವ ಟ್ರೀ ಗಾರ್ಡ್ (ಬೇಲಿ) ಒದಗಿಸುವ ಮೂಲಕ ತಮ್ಮ ಸಸ್ಯ ಸೇವೆಯನ್ನು ಮುಂದುವರೆಸಿದ್ದಾರೆ ಮೈಸೂರಿನ ಸಸ್ಯ ಸಂರಕ್ಷಕ.

ಮೈಸೂರಿನ ಪ್ರಸಿದ್ಧ ಔಷಧ ಮಳಿಗೆ ರಘುಲಾಲ್ ಅಂಡ್ ಕಂಪನಿ ಮಾಲೀಕ ಎನ್. ರಾಘವನ್ ಮೈಸೂರು ನಗರ ವ್ಯಾಪ್ತಿಯಲ್ಲಿ ಸಸಿ ನೆಡುವ ಸಾರ್ಥಕ ಕಾರ್ಯದ ಜೊತೆಗೆ ಅವುಗಳಿಗೆ ಟ್ರೀ ಗಾರ್ಡ್ ಕೊಡುಗೆ ನೀಡುವ ಸೇವಾ ಕಾರ್ಯ ಮುಂದುವರೆಸಿದ್ದಾರೆ. ಅರಣ್ಯ ಇಲಾಖೆ, ಸಂಘ-ಸಂಸ್ಥೆಗಳು ನೆಡುವ ಸಸಿಗಳಿಗೆ ಕಳೆದ 12 ವರ್ಷಗಳಿಂದ ಟ್ರೀ ಗಾರ್ಡ್ ಒದಗಿಸುವ ಸೇವಾ ಕಾಯಕ ದಲ್ಲಿ ತೊಡಗಿದ್ದಾರೆ. ಈವರೆಗೆ 27,500 ಗಾರ್ಡ್‍ಗಳ ಕೊಡುಗೆ ನೀಡಿ, ಸಸ್ಯ ಸಂಕುಲ ಉಳಿಸುವ ಮಹಾತ್ಕಾರ್ಯದಲ್ಲಿ ತಮ್ಮ ಸೇವೆ ಮೆರೆದಿದ್ದಾರೆ. ಬೇಸಿಗೆಯಲ್ಲಿ ಸಸ್ಯಗಳ ರಕ್ಷಣೆಗೆ ತಮ್ಮದೇ ಟ್ಯಾಂಕರ್‍ಗಳ ಮೂಲಕ ನೀರುಣಿಸುತ್ತಿದ್ದಾರೆ.

ಲಲಿತ ಮಹಲ್ ಅರಮನೆ ಆಸುಪಾಸು ಸಾವಿರಾರು ಗಿಡಗಳನ್ನು ನೆಟ್ಟು ಟ್ರೀ ಗಾರ್ಡ್ ಅಳವಡಿಸಿದ್ದಾರೆ. ಮೈಸೂರಿನ ವಿವಿಧ ಬಡಾವಣೆಯಲ್ಲೂ ಇದೇ ರೀತಿ ಸಸ್ಯ ಸಂರ ಕ್ಷಣೆಗೆ ಅವರ ಕೊಡುಗೆ ಮಹತ್ವದಾಗಿದೆ. ಇತ್ತೀಚೆಗೆ ಚಾಮುಂಡಿಬೆಟ್ಟದಲ್ಲಿ ಶ್ರೀ ಚಾಮುಂಡೇಶ್ವರಿ ದೇವಾಲಯ ಆವರಣದ ಮಲ್ಟಿ ಲೆವಲ್ ಪಾರ್ಕಿಂಗ್ ಕಟ್ಟಡದ ಬಳಿ ಟರ್ಮಿನಲ್ಲಿಯಾ ಜಾತಿ ಗಿಡಗಳನ್ನು ನೆಟ್ಟಿದ್ದು, ಇವುಗಳಿಗೆ ರಾಘವನ್ ಟ್ರೀ ಗಾರ್ಡ್ ನೀಡಿದ್ದಾರೆ. ಅಲ್ಲದೆ, ಪ್ರಾಣಿ-ಪಕ್ಷಿಗಳಿಗೆ ಆಹಾರ ಕಲ್ಪಿಸುವಂತಹ ಹಣ್ಣಿನ ಜಾತಿ ಗಿಡಗಳನ್ನು ನೆಡಲು ಉದ್ದೇಶಿಸಿದ್ದು, ಅವುಗಳಿಗೂ ರಾಘವನ್ ಟ್ರೀ ಗಾರ್ಡ್ ನೀಡಲು ಮುಂದಾಗಿದ್ದಾರೆ.

`ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ವತಿಯಿಂದ ಗಿಡಗಳನ್ನು ನೆಡಲಾಗಿದೆ. ಗಿಡ ನೆಟ್ಟು ಅನ್ಯ ಉದ್ದೇಶಕ್ಕಾಗಿ ಕೀಳುವುದು ಬೇಡ ಎಂಬ ಹಿನ್ನೆಲೆಯಲ್ಲಿ ಸೂಕ್ತ ಸ್ಥಳಗಳನ್ನು ಗುರುತಿಸಿ ಸಾಧ್ಯವಿರುವ ಜಾಗಗಳಲ್ಲಿ ಗಿಡ ನೆಡುವ ಕಾರ್ಯ ಮುಂದುವರೆಸಲಾಗು ವುದು. ಮಲ್ಟಿ ಲೆವಲ್ ಪಾರ್ಕಿಂಗ್ ಕಟ್ಟಡದ ಬಳಿ ತ್ಯಾಜ್ಯ ನೀರು ಸಂಸ್ಕರಣ ಘಟಕವಿದ್ದು, ಅಲ್ಲಿಂದ ಬರುವ ಇದೇ ಕಟ್ಟಡದ ತ್ಯಾಜ್ಯ ನೀರನ್ನು ಈ ಗಿಡಗಳಿಗೆ ಪೂರೈಸಲು ವ್ಯವಸ್ಥೆ ಮಾಡಿದ್ದೇವೆ’ ಎಂದು ದೇವಸ್ಥಾನದ ಕಾರ್ಯ ನಿರ್ವಾಹಕ ಅಧಿಕಾರಿ ಯತಿರಾಜ್ ಸಂಪತ್ ಕುಮಾರ್ ತಿಳಿಸಿದರು.

ಎನ್.ರಾಘವನ್ ಅವರು `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಇಂದು ವಿಶ್ವಭೂಮಿ ದಿನ. ಈ ಸಂದರ್ಭದಲ್ಲಿ ಯಾದರೂ ಪ್ರತಿಯೊಬ್ಬರು ತಮ್ಮ ಮನೆ ಆವರಣದಲ್ಲಿ ಒಂದೆರಡು ಗಿಡಗಳನ್ನಾ ದರೂ ನೆಟ್ಟು ಪೋಷಣೆ ಮಾಡಿದರೆ ಪರಿಸರ ಸಂರಕ್ಷಣೆಯಾಗಿ ಜೀವ ಸಂಕುಲ ಉಳಿಯ ಲಿದೆ. ಬಿದಿರು ಗಾರ್ಡ್ 6 ಅಡಿಯಲ್ಲಿ ಮಾಡಿ ಸುತ್ತೇವೆ. ಗೆಜ್ಜಲು ತಿನ್ನದಿರಲಿ ಎಂದು ಅದರ ಕೆಳಗಿಂದ 1 ಅಡಿವರೆಗೆ ಟಾರು ಬಳಿಯ ಲಾಗುತ್ತದೆ. ಫೆಬ್ರವರಿ ಮತ್ತು ಮಾರ್ಚ್ ನಲ್ಲಿ ಮಳೆಯ ಅಭಾವ ಕಾರಣ ಗಿಡಗಳಿಗೆ ನೀರು ಪೂರೈಸಲು ಅರಣ್ಯ ಇಲಾಖೆ ಜೊತೆಗೆ ಕೈಜೋಡಿಸುತ್ತೇವೆ. ಗಿಡಗಳಿಗೆ ನೀರುಣಿಸುವ ಕಾರ್ಯ ಸಂಬಂಧ `ರೀಯಲ್ ಟೈಮ್ ಜಿಪಿಎಸ್’ ವ್ಯವಸ್ಥೆ ಮಾಡಿದ್ದು, ಮೊಬೈಲ್‍ನ ಈ ಆ್ಯಪ್ ಮೂಲಕ ಎಲ್ಲಲ್ಲಿ ನೀರು ಹಾಕಲಾಗಿದೆ ಎಂದು ಮಾಹಿತಿ ಲಭ್ಯವಾಗಲಿದೆ ಎಂದು ತಿಳಿಸಿದರು.

ಕೆಲವರು ಗಿಡ ನೆಟ್ಟು ಟ್ರೀ ಗಾರ್ಡ್ ಹಾಕಿ ಕೊಡಲು ಕೇಳುತ್ತಾರೆ. ಬಹುತೇಕರು ಟ್ರೀ ಗಾರ್ಡ್ ಮಾತ್ರ ನೀಡಲು ಕೋರುತ್ತಾರೆ. ಈ ಸೇವಾ ಕಾರ್ಯಕ್ಕೆ ಪ್ರತ್ಯೇಕವಾಗಿ ಸಿಬ್ಬಂದಿ ನೇಮಕ ಮಾಡಿಕೊಂಡಿಲ್ಲ. ಅಗತ್ಯವಿದ್ದಾಗ ಸಿಬ್ಬಂದಿ ಸಂಪರ್ಕಿಸಿ ಕರೆಸಿಕೊಳ್ಳಲಾಗು ವುದು. ಸ್ವತಃ ನಮ್ಮ ವತಿಯಿಂದಲೇ ಗಿಡ ನೆಡುವ ಸಂದರ್ಭದಲ್ಲಿ ಮಹಾಘನಿ, ನಂದಿ, ಬಸವನಪಾದ, ಕಾಡಬಾದಾಮಿ ಸೇರಿದಂತೆ ಆಡು-ಮೇಕೆ ತಿನ್ನದಂತಹ ಜಾತಿಗೆ ಸೇರಿದ ಗಿಡಗಳಿಗೆ ಆದ್ಯತೆ ನೀಡುತ್ತೇವೆ. ಕೋರಿಕೆ ಮೇರೆಗೆ ಕೆಲವೆಡೆ ಗುಂಡಿ ತೋಡಿ ಗಿಡ ನೆಟ್ಟು ನೀರನ್ನೂ ಉಣಿಸುವ ಕೆಲಸ ಮಾಡಿದ್ದೇವೆ. 3 ವರ್ಷ ಕಳೆದ ಮೇಲೆ ಗಿಡ ಮರವಾದ ಬಳಿಕ ಟ್ರೀ ಗಾರ್ಡ್ ತೆಗೆಸುವ ಕೆಲಸವನ್ನೂ ಮಾಡಿದ್ದೇವೆ ಎಂದು ಹೇಳಿದರು.

ಸಂಘ ಸಂಸ್ಥೆಗೂ ಗಾರ್ಡ್: ಚಾಮುಂಡಿ ಬೆಟ್ಟ ತಪ್ಪಲಿನ ಉತ್ತನಹಳ್ಳಿ ಬಳಿಯ ಭಾರತಿ ಯೋಗಧಾಮ ಆವರಣದಲ್ಲಿ ನೆಟ್ಟಿರುವ 500 ವಿವಿಧ ಜಾತಿಯ ಗಿಡಗಳಿಗೂ ರಾಘ ವನ್ ಟ್ರೀ ಗಾರ್ಡ್ ಕೊಟ್ಟಿದ್ದಾರೆ. ಇದ ಕ್ಕಾಗಿ ರಾಘವನ್ ಅವರಿಗೆ ಧನ್ಯವಾದ ಅರ್ಪಿಸುವ ಭಾರತಿ ಯೋಗಧಾಮದ ಸಂಚಾಲಕ ಸುಂದರೇಶ್ ಸತ್ಯನಾರಾಯಣ, ಅರಳಿ, ಆಲ, ತೇಗ, ಮಾವು ಸೇರಿದಂತೆ ವಿವಿಧ ಜಾತಿ ಗಿಡಗಳನ್ನು ನೆಟ್ಟಿದ್ದೇವೆ. ಇನ್ನೂ 500 ಗಿಡಗಳನ್ನು ನೆಡುವ ಉದ್ದೇಶ ಹೊಂದಿದ್ದು, ಅವುಗಳಿಗೂ ಗಾರ್ಡ್ ನೀಡುವುದಾಗಿ ರಾಘವನ್ ತಿಳಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ಗಿಡಕ್ಕೆ ನೀರುಣಿಸುವ ಕಾಯಕಕ್ಕೂ ಸಹಕಾರ…
1 ವರ್ಷದಲ್ಲಿ 4 ಸಾವಿರ ಟ್ರೀ ಗಾರ್ಡ್ ಕೊಡುಗೆ…
ಎಲ್ಲೇ ಗಿಡ ನೆಟ್ಟರೂ ರಾಘವನ್ ಟ್ರೀ ಗಾರ್ಡ್ ಕೊಡುಗೆ ನೀಡುತ್ತಿದ್ದಾರೆ. ಕಳೆದ ಒಂದೇ ವರ್ಷದಲ್ಲಿ ಅಂದಾಜು 4 ಸಾವಿರ ಟ್ರೀ ಗಾರ್ಡ್ ಕೊಟ್ಟಿದ್ದಾರೆ. ಈ ಮೊದಲು ಕಬ್ಬಿಣದ ಟ್ರೀ ಗಾರ್ಡ್ ಕೊಡುತ್ತಿದ್ದರು. ಅದು ಒಂದಕ್ಕೆ 900 ರೂ. ವೆಚ್ಚವಾಗುತ್ತದೆ. ಜೊತೆಗೆ ಗಿಡ ಬೆಳೆದ ಬಳಿಕ ಗಾರ್ಡ್ ಹೊರ ತೆಗೆಯುವುದೂ ಕಷ್ಟ. ಹೀಗಾಗಿ ನಾನೇ ಬಿದುರಿನ ಗಾರ್ಡ್ ನೀಡಲು ಸಲಹೆ ಕೊಟ್ಟೆ. ಇದು ಒಂದಕ್ಕೆ ಕೇವಲ 140 ರೂ. ತಗುಲುತ್ತದೆ. ಮೂರು ವರ್ಷ ಗಾರ್ಡ್ ಹಾಕಿದರೆ ಸಾಕು. ಬಿದಿರು ಗಾರ್ಡ್ ಈ ಅವಧಿಗೆ ಬಂದೇ ಬರುತ್ತವೆ. ವೆಚ್ಚವೂ ಕಡಿಮೆ. ಹೀಗಾಗಿ ಈಗ ಅವರು ಹೆಚ್ಚಾಗಿ ಬಿದುರಿನ ಗಾರ್ಡ್ ಅನ್ನೇ ಕೊಡುತ್ತಿದ್ದಾರೆ. ಇವರ ಸಹಕಾರದೊಂದಿಗೆ ಗಿಡಗಳಿಗೆ ನೀರು ಉಣಿಸುವ ಕೆಲಸ ಸಹ ಅರಣ್ಯ ಇಲಾಖೆಯಿಂದ ನಡೆಯುತ್ತಿದೆ. ಬೇಸಿಗೆಯಲ್ಲಿ ಅರಣ್ಯ ಇಲಾಖೆ ಒಂದರಿಂದಲೇ ನೀರು ಪೂರೈಸಲು ಕಷ್ಟ ಸಾಧ್ಯ. ಇದಕ್ಕೂ ರಾಘವನ್ ಕೈಜೋಡಿಸಿದ್ದಾರೆ.
-ಪ್ರಕಾಶ್, ಉಪವಲಯ ಅರಣ್ಯ ಅಧಿಕಾರಿ, ನಗರ ಹಸಿರೀಕರಣ ವಲಯ ಮೈಸೂರು.

 

 

 

Translate »