ಮುಕ್ತ ವಿವಿಯಲ್ಲಿ ಪ್ರಸಕ್ತ  ಸಾಲಿನಿಂದ ಕೌಶಲ ತರಬೇತಿ
ಮೈಸೂರು

ಮುಕ್ತ ವಿವಿಯಲ್ಲಿ ಪ್ರಸಕ್ತ ಸಾಲಿನಿಂದ ಕೌಶಲ ತರಬೇತಿ

September 15, 2021

ಮೈಸೂರು, ಸೆ.14(ಆರ್‍ಕೆ)- ಬೆಳ್ಳಿಹಬ್ಬ ಆಚರಿಸಿಕೊಳ್ಳುತ್ತಿರುವ ಮೈಸೂರಿನ ಕರ್ನಾ ಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ (ಕೆಎಸ್‍ಒಯು)ದಲ್ಲಿ ಪ್ರಸಕ್ತ ಸಾಲಿನಿಂದ ವಿದ್ಯಾರ್ಥಿಗಳಿಗೆ ಕೌಶಲಾಭಿವೃದ್ಧಿ ತರ ಬೇತಿ ಕಾರ್ಯಕ್ರಮ ಆರಂಭವಾಗಲಿದೆ.

ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾದಂತಹ ಶೈಕ್ಷಣಿಕ ಕಾರ್ಯ ಕ್ರಮಗಳನ್ನು ನೀಡುತ್ತಿರುವ ಮುಕ್ತ ವಿವಿಯು ವೃತ್ತಿ ನಡೆಸಲು ಅಥವಾ ಸ್ವಯಂ ಉದ್ಯೋಗ ಮೂಲಕ ಸ್ವಾಭಿಮಾನದ ಬದುಕು ನಡೆಸಲು ಸಹಕಾರಿಯಾಗುವಂತೆ ಕೌಶಲ ತರಬೇತಿ ನೀಡಲು ಮುಂದಾಗಿದೆ. 2021-22ನೇ ಸಾಲಿಗೆ ‘ಮುಖ್ಯಮಂತ್ರಿಗಳ ಕೌಶಲ ಕರ್ನಾಟಕ ಯೋಜನೆ’ (ಸಿಎಂಕೆವೈಸಿ)ಯಡಿ ತರಬೇತಿ ಕಾರ್ಯಕ್ರಮ ಆರಂಭಿ ಸಲು ‘ಕರ್ನಾಟಕ ಕೌಶಲಾಭಿವೃದ್ಧಿ ನಿಗಮ’ವು ತರಬೇತಿ ಸಂಸ್ಥೆಯ ಜಾಬ್‍ರೋಲ್‍ಗಳಿಗೆ ಅನುಗುಣವಾಗಿ ಒಡಂಬಡಿಕೆ ಮಾಡಿಕೊಂಡು ಆ.25ರಂದು ‘ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ’ಕ್ಕೆ ಕಾರ್ಯಾ ದೇಶ ನೀಡಿದೆ. ಅಭ್ಯರ್ಥಿಗಳು ಮಾರ್ಗಸೂಚಿ ಅನುಸಾರ ಕೋವಿಡ್ ಲಸಿಕೆ ಮೊದಲ ಡೋಸ್ ಪಡೆದಿರುವುದನ್ನು ಖಚಿತಪಡಿಸಿ ಕೊಂಡು ಪ್ರಸಕ್ತ ಸಾಲಿನಿಂದಲೇ ತರಬೇತಿ ಆರಂಭಿಸುವಂತೆ ಕರ್ನಾಟಕ ಕೌಶಲಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಮುಕ್ತ ವಿವಿಗೆ ತಿಳಿಸಿದ್ದಾರೆ. ಮುಕ್ತ ಗಂಗೋತ್ರಿ ಆವರಣದಲ್ಲಿ ತರಬೇತಿ ಆರಂಭಿಸಲು ಸಿದ್ಧತೆ ಮಾಡಿಕೊಂಡಿರುವ ವಿಶ್ವವಿದ್ಯಾನಿಲಯವು, ಅಧಿಸೂಚನೆ ಮೂಲಕ ಪ್ರವೇಶಾತಿ ಪ್ರಕ್ರಿಯೆ ಆರಂಭಿಸಲಿದೆ. ಈ ಕುರಿತು ‘ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯೆ ನೀಡಿದ ಕರಾಮುವಿ ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್, ದೂರ ಶಿಕ್ಷಣಕ್ಕೆ ಸೀಮಿತವಾಗದೇ ವಿದ್ಯಾರ್ಥಿಗಳಿಗೆ ಕೌಶಲ ತರಬೇತಿ ನೀಡಲು ವಿಶ್ವ ವಿದ್ಯಾನಿಲಯ ಸಜ್ಜುಗೊಂಡಿದೆ. ಸರ್ಕಾರವು ಸಿಎಂಕೆವೈಸಿಯಡಿ ತರಬೇತಿ ನೀಡಲು ಕಾರ್ಯಾದೇಶ ನೀಡಿರುವುದರಿಂದ ಲಭ್ಯ ಮೂಲ ಸೌಲಭ್ಯ ಗಳನ್ನೆಲ್ಲಾ ಬಳಸಿಕೊಂಡು ಪ್ರಸಕ್ತ ಸಾಲಿನಿಂದಲೇ ಕಾರ್ಯಕ್ರಮ ಆರಂಭಿಸಲಾಗುವುದು ಎಂದರು. ಕೌಶಲ ಅಭಿವೃದ್ಧಿ ತರಬೇತಿಗೆ ಹೆಚ್ಚು ಬೇಡಿಕೆ ಇರುವುದರಿಂದ ಶೀಘ್ರ ಅಧಿಸೂಚನೆ ಹೊರಡಿಸಿ ಪ್ರವೇಶ ಪ್ರಕ್ರಿಯೆ ಆರಂಭಿಸುವುದಾಗಿ ತಿಳಿಸಿದರು.

Translate »