ಮೈಸೂರು, ಜು.8(ಆರ್‍ಕೆಬಿ)- ಮುಂಬೈನ ದಾದರ್‍ನಲ್ಲಿರುವ ಭಾರತರತ್ನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ `ರಾಜ ಗೃಹ ನಿವಾಸಕ್ಕೆ ಹಾನಿ ಮಾಡಿದ ದುಷ್ಕರ್ಮಿಗಳ ಕೃತ್ಯವನ್ನು ಖಂಡಿಸಿರುವ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮೈಸೂರು ಜಿಲ್ಲಾ ಘಟಕ, ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ. ಶತಮಾನಗಳಿಂದ ಶೋಷಣೆಗೆ ಒಳಗಾಗಿದ್ದ ಕೋಟ್ಯಾನುಕೋಟಿ ಶೋಷಿತ ರಿಗೆ ಬೆಳಕು ನೀಡಿದ ಡಾ. ಬಿ.ಆರ್.ಅಂಬೇಡ್ಕರ್ ಅವರು ರೂಪಿಸಿದ ಸಂವಿಧಾನದ ಚೌಕಟ್ಟಿನಲ್ಲಿಯೇ ನಾವೆಲ್ಲಾ ಕೆಲಸ ನಿರ್ವಹಿಸುತ್ತಿದ್ದೇವೆ. ಇಂತಹ ಮಾನವತಾವಾದಿಯ ಪುತ್ಥಳಿ ಮೇಲೆ ಒಂದಲ್ಲ ಒಂದು ಕಡೆ ನಿರಂತರ ಅಪಮಾನ ನಡೆಯುತ್ತಲೇ ಇದೆ. ಈಗ ಅವರ ನಿವಾಸಕ್ಕೆ ಹಾನಿ ಮಾಡಲಾಗಿದೆ. ಅಲ್ಲಿನ ಸರ್ಕಾರ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ, ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದ ದಸಂಸ ಜಿಲ್ಲಾ ಸಂಚಾಲಕ ಬನ್ನಳ್ಳಿ ಸೋಮಣ್ಣ, ಈ ಬಗ್ಗೆ ರಾಷ್ಟ್ರಪತಿಗಳನ್ನು ಒತ್ತಾಯಿಸುವ ಮನವಿ ಯನ್ನು ಜಿಲ್ಲಾಧಿಕಾರಿ ಕಚೇರಿಗೆ ನೀಡಿದರು. ಈ ಸಂದರ್ಭ ಕದಸಂಸ ವಿಭಾಗೀಯ ಸಂಚಾಲಕಿ ಪುಟ್ಟಲಕ್ಷ್ಮಮ್ಮ, ಸಂಚಾಲಕಿ ಸುನಿತಾ ಇನ್ನಿತರರಿದ್ದರು.