ಅರಮನೆ ಮುಂದೆಯೇ ಅಪಾಯಕಾರಿ ಹೊಂಡ!
ಮೈಸೂರು

ಅರಮನೆ ಮುಂದೆಯೇ ಅಪಾಯಕಾರಿ ಹೊಂಡ!

October 20, 2021

ಮೈಸೂರು, ಅ.19 (ಮಿತ್ರ)- ಮೈಸೂರಿನ ವಿಶ್ವವಿಖ್ಯಾತ ಅರಮನೆ ಮುಂಭಾಗ ಅದೂ ಐತಿಹಾಸಿಕ ಚಾಮರಾಜ ವೃತ್ತದಲ್ಲಿ ಅಪಾಯ ಕಾರಿ ಪರಿಸ್ಥಿತಿ ಇದ್ದರೂ ನಗರ ಪಾಲಿಕೆ ದಿವ್ಯ ನಿರ್ಲಕ್ಷ್ಯ ವಹಿಸಿರುವುದು ವಿಷಾದನೀಯ.

ಚಾಮರಾಜ ವೃತ್ತ-ಕೃಷ್ಣರಾಜ ವೃತ್ತ ಮಾರ್ಗದ ಜೀಬ್ರಾ ಕ್ರಾಸ್ ಬಳಿ ಮಳೆ ನೀರು ಚರಂಡಿಗೆ ಅಳವಡಿಸಿರುವ ಕಬ್ಬಿಣದ ಸರಳಿನ ಮುಚ್ಚಳ ಮುರಿದು, ಕುಸಿದಿದ್ದು ಪಾದಚಾರಿಗಳು ಹಾಗೂ ವಾಹನ ಸವಾರರಿಗೆ ಕಂಟಕವಾಗಿದೆ. ಚಾಮ ರಾಜ ವೃತ್ತದಿಂದ ನಗರ ಬಸ್ ನಿಲ್ದಾಣಕ್ಕೆ ಸರಾಗ ಸಂಚಾರಕ್ಕಾಗಿ ನಿರ್ಮಿಸಲಾಗಿರುವ ಬಸ್‍ಬೇ ಮಾರ್ಗದಲ್ಲಿ ಅದೂ ಪಾದಚಾರಿಗಳು ರಸ್ತೆ ದಾಟುವ ಜೀಬ್ರಾ ಕ್ರಾಸ್‍ನಲ್ಲೇ ಈ ಅಪಾಯಕಾರಿ ಹೊಂಡವಿದೆ.
ಮಳೆ ನೀರು ಚರಂಡಿಗೆ ಹರಿಯಲು ಅನುವಾಗುವಂತೆ ಕಬ್ಬಿಣದ ಸರಳಿನ ಮುಚ್ಚಳವನ್ನು ಅಳವಡಿಸಲಾಗಿದೆ. ಆದರೆ ಅದು ಮುರಿದು ಹಲವು ದಿನಗಳೇ ಕಳೆದಿದೆ. ಸದ್ಯ ಅಪಾಯ ಅರಿತ ದೇವರಾಜ ಸಂಚಾರ ಠಾಣೆ ಪೊಲೀಸರು ಬ್ಯಾರಿ ಕೇಡ್ ಹಾಕುವ ಮೂಲಕ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಅಪಾಯ ಸ್ಥಳದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಪಾಲಿಕೆ ಗಮನಕ್ಕೂ ತಂದು, ಸರಿಪಡಿಸುವಂತೆ ಮನವಿ ಮಾಡಿದರೂ ಯಾವುದೇ ಕ್ರಮ ವಹಿಸಿಲ್ಲ ಎಂದು ತಿಳಿದುಬಂದಿದೆ. ನಗರ ಬಸ್ ನಿಲ್ದಾಣ, ಅರಮನೆ ಉತ್ತರ ದ್ವಾರದ ಕಡೆಯಿಂದ ಪುರ ಭವನದ ಕಡೆಗೆ ಹೋಗುವವರು ಹಾಗೂ ಆ ಕಡೆಯಿಂದ ಬರುವವರು ಈ ಸ್ಥಳದಲ್ಲೇ ರಸ್ತೆ ದಾಟುತ್ತಾರೆ. ಅದರಲ್ಲೂ ದಸರಾ ದೀಪಾಲಂಕಾರ ಇರು ವುದರಿಂದ ಪ್ರತಿನಿತ್ಯ ಸಂಜೆ ವೇಳೆ ಸಾವಿರಾರು ಜನ ಇಲ್ಲಿ ಓಡಾಡುತ್ತಾರೆ. ವಾಹನ ದಟ್ಟಣೆಯೂ ಹೆಚ್ಚಾ ಗಿದೆ. ದೀಪಾಲಂಕಾರ, ಅರಮನೆ ಸೌಂದರ್ಯ ಸವಿಯುತ್ತಾ ಯಾರಾದರೂ ಮೈಮರೆತು ಬ್ಯಾರಿ ಕೇಡ್ ಸರಿಸಿ, ಮುಂದೆ ಸಾಗುವ ಪ್ರಯತ್ನ ಮಾಡಿ ದರೆ ವಾಹನದ ಚಕ್ರ ಚರಂಡಿಯೊಳಗೆ ಸಿಲುಕಿ, ದುರಂತ ಸಂಭವಿಸುವುದು ಖಚಿತ. ಪಾದಚಾರಿಗಳು ಸ್ವಲ್ಪ ಎಚ್ಚರ ತಪ್ಪಿದರೂ ಕಾಲು ಮುರಿದುಕೊಳ್ಳ ಬಹುದು. ಪ್ರಾಣಾಪಾಯದ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಜೋರು ಮಳೆಯಾದರೆ ಈ ಸ್ಥಳ ದಲ್ಲಿ ಮಂಡಿಯುದ್ದ ನೀರು ನಿಂತಿರುತ್ತದೆ. ಅಂತಹ ಸಂದರ್ಭದಲ್ಲಿ ಪುಟ್ಟ ಮಕ್ಕಳು ಏನಾದರೂ ಈ ಸ್ಥಳದಲ್ಲಿ ಕಾಲಿಟ್ಟರೆ ಚರಂಡಿಯಲ್ಲಿ ಕೊಚ್ಚಿಕೊಂಡು ಹೋಗಬಹುದು. ಅರಮನೆ ಮುಂದೆ, ಪ್ರಮುಖ ವೃತ್ತದ ಬಳಿಯೇ ಈ ಅಪಾಯಕಾರಿ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಪಾಲಿಕೆ ಕಣ್ಮುಚ್ಚಿ ಕೊಂಡಿರುವುದು ವಿಷಾದÀನೀಯ. ಈ ಸಮಸ್ಯೆ ಬಗ್ಗೆ ಅತ್ಯಂತ ಬೇಸರ ವ್ಯಕ್ತಪಡಿಸಿರುವ ದೇವರಾಜ ಸಂಚಾರ ಠಾಣೆ ಎಎಸ್‍ಐ ಸುಬ್ರಮಣಿ, ಚರಂಡಿಗೆ ನೀರು ಹರಿಯುವ ಸ್ಥಳದಲ್ಲಿ ಅಳವಡಿಸಿರುವ ಕಬ್ಬಿಣದ ಮುಚ್ಚಳ ಮುರಿದು, ಕುಸಿದಿರುವ ಬಗ್ಗೆ ಪಾಲಿಕೆ ಗಮನಕ್ಕೆ ತರಲಾಗಿದೆ. ಅಭಯ ತಂಡದವರಿಗೂ ತಿಳಿಸಲಾಗಿದೆ. ಸಂಜೆಯಿಂದ ವಾಹನ, ಜನದಟ್ಟಣೆ ಹೆಚ್ಚಾಗುವುದರಿಂದ ನಮ್ಮ ಸಿಬ್ಬಂದಿ ಈ ಅಪಾಯಕಾರಿ ಸ್ಥಳದ ಬಗ್ಗೆ ಎಲ್ಲರಿಗೂ ತಿಳಿಸಲು ಸಾಧ್ಯ ವಾಗುವುದಿಲ್ಲ. ಅಪಾಯ ಸಂಭವಿಸದಂತೆ ತಕ್ಷಣ ಕ್ರಮ ವಹಿಸುವ ಅಗತ್ಯವಿದೆ ಎಂದು ಸುಬ್ರಮಣಿ ಮನವಿ ಮಾಡಿದ್ದಾರೆ.

Translate »