ಬೆಂಗಳೂರು/ಮೈಸೂರು, ಅ.10-ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉದ್ಘಾಟಕರಾಗಿ ಖ್ಯಾತ ಹೃದ್ರೋಗ ತಜ್ಞ, ಬೆಂಗಳೂರು ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್. ಮಂಜು ನಾಥ್ ಅವರನ್ನು ದಸರಾ ಉನ್ನತ ಮಟ್ಟದ ಸಮಿತಿ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಯ್ಕೆ ಮಾಡಿದ್ದಾರೆ.
ಈ ಮೂಲಕ ಕೊರೊನಾ ವಿರುದ್ಧ ಹೋರಾಟದಲ್ಲಿ ತೊಡಗಿರುವ ವೈದ್ಯರಿಗೆ ರಾಜ್ಯ ಸರ್ಕಾರವು ದೊಡ್ಡ ಗೌರವವನ್ನು ಸಲ್ಲಿಸಿದೆ. ಮುಖ್ಯ ಮಂತ್ರಿಗಳ ನಿರ್ದೇಶನದಂತೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು, ಶನಿವಾರ ಡಾ. ಸಿ.ಎನ್.ಮಂಜು ನಾಥ್ ಅವರ ಹೆಸರನ್ನು ಮೈಸೂರಿನಲ್ಲಿ ಅಧಿಕೃತವಾಗಿ ಪ್ರಕಟಿಸಿದರು. ಕೊರೊನಾ ಸೋಂಕಿನಿಂದ ಈ ಬಾರಿ ದಸರಾ ಉತ್ಸವವನ್ನು ಸರಳವಾಗಿ ಆಚರಿಸುತ್ತಿದ್ದು, ಸೋಂಕಿನ ವಿರುದ್ಧ ಹೋರಾಟ ನಡೆಸುತ್ತಿರುವ ವಾರಿಯರ್ ಅನ್ನೇ ಸಮಾರಂಭದ ಉದ್ಘಾಟನೆಗೆ ಆಯ್ಕೆ ಮಾಡಲಾಗಿದೆ. ಅಲ್ಲದೆ ಕೊರೊನಾ ವಾರಿಯರ್ಸ್‍ಗಳಾದ, ಪೌರ ಕಾರ್ಮಿಕರಾದ ಶ್ರೀಮತಿ ಮರಗಮ್ಮ, ವೈದ್ಯಾಧಿಕಾರಿ ಡಾ. ನವೀನ್ ಕುಮಾರ್, ಸ್ಟಾಫ್ ನರ್ಸ್ ಶ್ರೀಮತಿ ರುಕ್ಮಿಣಿ, ಆಶಾ ಕಾರ್ಯಕರ್ತೆ ಶ್ರೀಮತಿ ನೂರ್ಜಾನ್, ಪೊಲೀಸ್ ಕಾನ್ಸ್‍ಟೇಬಲ್ ಪಿ.ಕುಮಾರ್ ಹಾಗೂ ಅಪರಿಚಿತ ಮೃತದೇಹ ಗಳನ್ನು ಅಂತ್ಯಸಂಸ್ಕಾರ ಮಾಡಿ ಮುಕ್ತಿ ದೊರಕಿಸುವಲ್ಲಿ ಶ್ರಮಿಸುತ್ತಿರುವ ಸಾಮಾಜಿಕ ಕಾರ್ಯಕರ್ತ ಅಯೂಬ್ ಅಹಮದ್ ಅವರನ್ನು ಉದ್ಘಾಟನಾ ಸಮಾರಂಭದಲ್ಲೇ ಸನ್ಮಾನಿಸುವ ಮೂಲಕ ಗೌರವಿಸಲಾಗುವುದು ಎಂದು ಸಚಿವ ಸೋಮಶೇಖರ್ ತಿಳಿಸಿದರು.
ತಾಂತ್ರಿಕ ಸಲಹಾ ಸಮಿತಿ ನೀಡಿರುವ ವರದಿಯಂತೆಯೇ ದಸರಾ ಮಹೋತ್ಸವ ಆಚರಿಸಲಾಗುವುದು ಎಂದ ಅವರು, ದಸರಾ ಉದ್ಘಾಟನೆ, ವಿಜಯ ದಶಮಿ ಮೆರವಣಿಗೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ವರ್ಚುಯಲ್ ಆಗಲಿದ್ದು, ಅದರ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗುವುದು. ದಸರಾ ಉದ್ಘಾಟನೆಗೆ 200 ಮತ್ತು ಜಂಬೂ ಸವಾರಿ ಮೆರವಣಿಗೆಗೆ 300 ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ 50 ಕಲಾವಿದರಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶ ನೀಡಲಾಗುವುದು. ಸುಮಾರು 350 ಮಾಧ್ಯಮ ಪ್ರತಿನಿಧಿಗಳಿದ್ದರೂ, ಅವರಲ್ಲಿ 50 ಮಂದಿಗೆ ಮಾತ್ರ ಅವಕಾಶ ನೀಡಲಾಗುವುದು. 25 ಮಂದಿ ಜನಪ್ರತಿನಿಧಿಗಳು ಹಾಗೂ 50 ಮಂದಿ ಪೊಲೀಸರಿಗೆ ಜಂಬೂ ಸವಾರಿ ಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುತ್ತದೆ. ದಸರಾ ಸಮಯದಲ್ಲಿ ಮೈಸೂರು ನಗರದಾದ್ಯಂತ ಜನ ಗುಂಪು ಸೇರದಂತೆ ಎಚ್ಚರಿಕೆ ವಹಿಸುವುದಲ್ಲದೇ, ಎಲ್ಲಿಯೂ ಸಾರ್ವಜನಿಕ ಕಾರ್ಯಕ್ರಮ ಏರ್ಪಡಿಸದಂತೆ ನಿಗಾ ವಹಿಸಲಾಗುವುದು ಎಂದರು.
ದೀಪಾಲಂಕಾರವನ್ನು ಕೇವಲ 2 ತಾಸಿಗೆ ಸೀಮಿತಗೊಳಿಸಿ, ಆ ಸ್ಥಳಗಳಲ್ಲಿ ಜನ ಗುಂಪು ಸೇರುವುದು ಹಾಗೂ ಸೆಲ್ಫಿ ತೆಗೆದುಕೊಳ್ಳುವುದನ್ನು ತಡೆಯಲು ಪೊಲೀಸರನ್ನು ನಿಯೋಜಿಸಲಾಗುವುದು ಎಂದ ಸಚಿವರು, ಕೇರಳದ ಓಣಂ ನಂತರ ಅಲ್ಲಿ ಕೊರೊನಾ ಸೋಂಕು ಹೆಚ್ಚಾಯಿತು ಎಂಬುದರ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಓಣಂ ಹಬ್ಬದ ಪರಿಸ್ಥಿತಿಗೂ ಮೈಸೂರು ದಸರಾ ಮಹೋತ್ಸವಕ್ಕೂ ಹೋಲಿಕೆ ಮಾಡುವಂತಿಲ್ಲ ಎಂದರು.
ಈ ಬಾರಿ ದಸರಾ ಬಜೆಟ್ ಬಗ್ಗೆ ಇನ್ನೂ ಪ್ಲಾನ್ ಮಾಡಿಲ್ಲ. ತಾಂತ್ರಿಕ ಸಲಹಾ ಸಮಿತಿ ವರದಿಯನ್ವಯ ಕಾರ್ಯಕ್ರಮ ರೂಪಿಸುತ್ತಿದ್ದೇವೆ. ಅದಕ್ಕೆ ಎಷ್ಟು ಹಣ ಬೇಕಾಗಬಹುದು ಎಂಬುದನ್ನು ತಿಳಿದುಕೊಂಡು ವೆಚ್ಚ ಮಾಡುತ್ತೇವೆ ಎಂದರು.
ನಾಡಿನ ಜನತೆ, ವೈದ್ಯ ಸಮೂಹಕ್ಕೆ ಸಂದ ಗೌರವ
ಮೈಸೂರು, ಅ.10 (ಆರ್‍ಕೆ)- ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಗೆ ನನ್ನನ್ನು ಆಯ್ಕೆ ಮಾಡಿರುವುದು ರಾಜ್ಯದ ಆರೂವರೆ ಕೋಟಿ ಜನ ಹಾಗೂ ವೈದ್ಯ ಸಮೂಹಕ್ಕೆ ಸಂದ ಗೌರವ ವಾಗಿದೆ ಎಂದು ಖ್ಯಾತ ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್ ಪ್ರತಿ ಕ್ರಿಯಿಸಿ ದ್ದಾರೆ. ದೂರವಾಣಿ ಮೂಲಕ ಇಂದು ಬೆಳಿಗ್ಗೆ `ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಮೈಸೂರಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾಗ ಸಯ್ಯಾಜಿರಾವ್ ರಸ್ತೆ ಯಲ್ಲಿ ನಿಂತು ಜಂಬೂ ಸವಾರಿ ವೀಕ್ಷಿಸುತ್ತಿದ್ದೆ. ಆದರೆ ಎಂದೂ ಚಾಮುಂಡಿ ಬೆಟ್ಟದಲ್ಲಿ ನಡೆಯುವ ದಸರಾ ಉದ್ಘಾಟನೆ ಸಮಾ ರಂಭ ನೋಡಿರಲಿಲ್ಲ. ಆದರೆ ಈಗ ಅಂತಹ ದೊಡ್ಡ ಅವ ಕಾಶ ದೊರೆತಿರುವುದು ನನ್ನ ಜೀವಿತಾ ವಧಿಯ ಅತೀ ದೊಡ್ಡ ಗೌರವವಷ್ಟೇ ಅಲ್ಲ, ವೈದ್ಯಕೀಯ ಕ್ಷೇತ್ರಕ್ಕೆ ಕೊರೊನಾ ವಾರಿಯರ್ಸ್‍ಗೆ ಸಂದ ಮಾನ್ಯತೆ ಯಾಗಿದೆ ಎಂದರು.
ನಾಡಹಬ್ಬವು ರಾಜ್ಯದ ಅತ್ಯಂತ ಪ್ರತಿಷ್ಠಿತ ಉತ್ಸವ. ದೇಶ-ವಿದೇಶಗಳಲ್ಲಿ ಪ್ರಸಿದ್ಧಿ ಹೊಂದಿರುವ ದಸರಾ ಮಹೋತ್ಸವದ ಉದ್ಘಾಟನೆಗಾಗಿ ಆಯ್ಕೆಯಾಗಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆಯಲ್ಲದೆ, ಇಡೀ ವೈದ್ಯಕೀಯ ಕ್ಷೇತ್ರಕ್ಕೆ ರಾಜ್ಯ ಸರ್ಕಾರ ತೋರಿಸಿದ ಗೌರವವಾಗಿದೆ ಎಂದು ಅವರು ತಿಳಿಸಿದರು. ಕೋವಿಡ್-19 ಸಂಕಷ್ಟ ಪರಿಸ್ಥಿತಿ ಹಿನ್ನೆಲೆಯಲ್ಲಿ ಈ ಬಾರಿ ಅತ್ಯಂತ ಸರಳವಾಗಿ ದಸರಾ ಆಚರಣೆಗೆ ನಿರ್ಧ ರಿಸಿರುವುದರಿಂದ ಅರ್ಥಪೂರ್ಣ ಉತ್ಸವದ ಜೊತೆಗೆ ಸುರಕ್ಷ ತೆಗೂ ಒತ್ತು ನೀಡಬೇಕಾಗಿರುವುದರಿಂದ ತಾಂತ್ರಿಕ ಸಲಹಾ ಸಮಿತಿ ನೀಡಿರುವ ಶಿಫಾರಸ್ಸು
ಔಚಿತ್ಯಪೂರ್ಣವಾಗಿದೆ. ಆ ಮಾರ್ಗಸೂಚಿಗಳನ್ನು ಜನರು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಮಹಾಮಾರಿ ಸೋಂಕು ಹರಡದಂತೆ ತಡೆಯಲು ಸರ್ಕಾರ ದೊಂದಿಗೆ ಸಹಕರಿಸಬೇಕೆಂದು ಅವರು ಮನವಿ ಮಾಡಿದರು. ದಸರಾ ಉದ್ಘಾಟಿಸಲು ನನ್ನನ್ನು ಆಯ್ಕೆ ಮಾಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹಾಗೂ ಎಲ್ಲಾ ಮಹನೀಯರುಗಳಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ನಾಡಹಬ್ಬ ಎಲ್ಲರಿಗೂ ಒಳ್ಳೆಯದನ್ನು ಮಾಡಲೆಂದು ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸುತ್ತೇನೆ ಎಂದು ಅವರು ತಿಳಿಸಿದರು.
ಡಾ.ಸಿ.ಎನ್.ಮಂಜುನಾಥ್ ಮೈಸೂರು ಮೆಡಿಕಲ್ ಕಾಲೇಜ್ ಹಳೇ ವಿದ್ಯಾರ್ಥಿ
ಮೂಲತಃ ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲೂಕಿನ ಚೋಳೇರ ಹಳ್ಳಿ ಗ್ರಾಮದ ನಂಜಪ್ಪ ಮತ್ತು ಶ್ರೀಮತಿ ಸೊಂಬಮ್ಮ ದಂಪತಿ ಪುತ್ರ ಪ್ರಸಿದ್ಧ ಹೃದ್ರೋಗ ತಜ್ಞರಾದ ಡಾ.ಸಿ.ಎನ್.ಮಂಜುನಾಥ್ ಅವರು ಮೈಸೂರು ಮೆಡಿಕಲ್ ಕಾಲೇಜಿನ ಹಳೇ ವಿದ್ಯಾರ್ಥಿ. 1982ರಲ್ಲಿ ಎಂಬಿಬಿಎಸ್ ಪದವಿ ಪೂರೈಸಿದ ಅವರು, 1985ರಲ್ಲಿ ಬೆಂಗಳೂರು ಮೆಡಿಕಲ್ ಕಾಲೇಜಿ ನಲ್ಲಿ ಎಂ.ಡಿ.(ಜನರಲ್ ಮೆಡಿಸಿನ್) ಮತ್ತು 1988ರಲ್ಲಿ ಕಸ್ತೂರಬಾ ಮೆಡಿಕಲ್ ಕಾಲೇಜಿನಲ್ಲಿ ಕಾರ್ಡಿಯಾಲಜಿ ಡಿ.ಎಂ. ಮಾಡಿದರು.
ಕಳೆದ 4 ದಶಕಗಳಿಂದ ಹೃದಯ ಸಂಬಂಧಿತ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತಿರುವ ಡಾ.ಮಂಜುನಾಥ್, ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕರಾಗಿ ಹತ್ತಾರು ವರ್ಷ ಸೇವೆ ಸಲ್ಲಿಸಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಹೈಟೆಕ್ ಮಾದರಿ ಬಡ ಜನರಿಗೆ ಸೇವೆ ನೀಡಲು ಸಾಧ್ಯ ಎಂಬುದನ್ನು ಅವರು ತೋರಿಸಿದ್ದಾರೆ. ಇವರ ಸೇವೆಯನ್ನು ಗಮನಿಸಿದ ಸರ್ಕಾರವು ಕಳೆದ ಐದು ವರ್ಷಗಳ ಹಿಂದೆಯೇ ನಿವೃತ್ತಿಯಾಗಿದ್ದ ಅವರನ್ನೇ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕರಾಗಿ ಮುಂದುವರೆಸಿದೆ.
ಮಿಟ್ರಲ್ ವಾಲ್ವ ಲೋಪ್‍ಪ್ಲ್ಯಾಸ್ಟಿಯಲ್ಲಿ ಹೊಸ ಪ್ರೊಟೋಕಾಲ್ ಅಭಿವೃದ್ಧಿಪಡಿಸಿರುವ ಡಾ.ಮಂಜುನಾಥ್ ಅಕ್ಯೂರಾ ಬಲೂನ್ ಕ್ಯಾತಿಟರ್ ಅನ್ನು ಬಳಸಿಕೊಂಡು ಹೃದಯ ಸಂಬಂಧಿ ರೋಗಿಗಳಿಗೆ ಚಿಕಿತ್ಸೆ ಕಲ್ಪಿಸಲು ಜಯದೇವ ಆಸ್ಪತ್ರೆಯು ದೊಡ್ಡ ಪ್ರಮಾಣದಲ್ಲಿ ಬೆಳೆಯಲು ಕಾರಣೀಭೂತರಾಗಿದ್ದಾರೆ. ಇವರ ಸೇವೆಯನ್ನು ಗಮನಿಸಿ ಕೇಂದ್ರ ಸರ್ಕಾರ ಇವರಿಗೆ 2000ದಲ್ಲಿ `ಪದ್ಮಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಅಲ್ಲದೇ ಇವರಿಗೆ ರಾಷ್ಟ್ರ ಮತ್ತು ವಿಶ್ವ ಮಟ್ಟದಲ್ಲಿ ಅನೇಕ ಪ್ರಶಸ್ತಿಗಳು ದೊರೆತಿವೆ. ಡಾ. ಮಂಜುನಾಥ ಅವರ ನೇತೃತ್ವದಲ್ಲಿ ಬೆಂಗಳೂರಿನ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ 300 ಹಾಸಿಗೆ ಸಾಮಥ್ರ್ಯದ ಆಸ್ಪತ್ರೆಯ ಸಮಗ್ರ ಅಭಿವೃದ್ಧಿ ಮಾಡಲಾಗಿದೆಯಲ್ಲದೆ, 640 ಹಾಸಿಗೆಗೆ ವಿಸ್ತರಿಸಲಾಗಿದೆ. ಮೈಸೂರು, ಕಲಬುರಗಿ ಯಲ್ಲೂ ಇವರ ನೇತೃತ್ವದಲ್ಲಿ ಸುಸಜ್ಜಿತ ಹೃದ್ರೋಗ ಆಸ್ಪತ್ರೆಗಳು ಸ್ಥಾಪನೆಯಾಗಿವೆ.
ಬಡವರಿಗೆ ಕೈಗೆಟಕುವ ದರದಲ್ಲಿ ಹೃದ್ರೋಗ ಚಿಕಿತ್ಸೆ ನೀಡುವ ಪರಿಕಲ್ಪನೆ ಹೊಂದಿರುವ ಡಾ.ಮಂಜುನಾಥ್, `ಚಿಕಿತ್ಸೆ ಮೊದಲು-ಶುಲ್ಕ ಪಾವತಿ ನಂತರ’ (Treatment First – Payment Next) ಎಂಬ ಧ್ಯೇಯದಿಂದ ಜಯದೇವ ಆಸ್ಪತ್ರೆಯಲ್ಲಿ ಸೇವೆ ಮುಂದುವರಿಯುತ್ತಿರುವುದು ಅವರ ಸಾಧನೆಗೆ ಸಾಕ್ಷಿಯಾಗಿದೆ.