ಸಿರಿಗನ್ನಡ ವೇದಿಕೆಯಿಂದ ದಸರಾ ಕವಿಗೋಷ್ಠಿ ಹರಿಯಿತು ಸಮಾಜದ ತಲ್ಲಣಗಳ ಕಾವ್ಯಲಹರಿ
ಮೈಸೂರು

ಸಿರಿಗನ್ನಡ ವೇದಿಕೆಯಿಂದ ದಸರಾ ಕವಿಗೋಷ್ಠಿ ಹರಿಯಿತು ಸಮಾಜದ ತಲ್ಲಣಗಳ ಕಾವ್ಯಲಹರಿ

October 22, 2018

ಮೈಸೂರು: ಮೀ ಟೂ, ಮೀ ಟೂ ಎಂದು ಎಲ್ಲರೆದೆಯ ಭಾವನೆಗಳ ಮೀಟುತ್ತಿರಲ್ಲ.., ಎಂದೋ ತಿಳಿದೋ, ತಿಳಿಯದೋ ಮಾಡಿದ ತಪ್ಪಿಗೆ ಇಂದು ಮಾನ ಹರಾಜು ಹಾಕುವುದು ಎಷ್ಟು ಸರಿ ಎಂಬುದು ಶ್ರೀಕಂಠೇಶ್ ರಚಿತ ಕವನ ಸಾರವಿದು.

ನಗರದ ಕೃಷ್ಣಮೂರ್ತಿಪುರಂನಲ್ಲಿರುವ ನಮನ ಕಲಾಮಂಟಪದಲ್ಲಿ ಭಾನುವಾರ ಸಿರಿಗನ್ನಡ ವೇದಿಕೆ ವತಿಯಿಂದ ಆಯೋಜಿಸಿದ್ದ ದಸರಾ ಕವಿಗೋಷ್ಠಿ ಯಲ್ಲಿ ಯುವ ಕವಿಗಳು ಪ್ರಕೃತಿ, ದಸರಾ, ಮೀ ಟೂ ವಿವಾದ ಸೇರಿದಂತೆ ಹಲವು ವಿಷಯಗಳ ಕುರಿತು ಳಾಗಿ ವಾಚನ ಮಾಡಿ ಕೇಳುಗರ ಹೃದಯ ಕೆರಳಿಸಿದರು.

ಮಲಿಯೂರು ಮಹೇಶ್ ಅವರು ನಾನು ಮೊನ್ನೆ ಯೊಂದು ಪ್ರಶಸ್ತಿ ಪಡೆದೆ, ಮದ್ದೆ ಇಲ್ಲದ ಕಾಯಿಲೆಗೆ ತುತ್ತಾದೆ ಎಂದು `ನಾನು’ಎಂಬ ಅಹಂ ಎಂತಹ ಕಾಯಿಲೆ ಎಂಬುದನ್ನು ನಾನು ಕವನದ ಮೂಲಕ ತಿಳಿಸಿಕೊಟ್ಟರು.

ಊರಿಗೆ ಊರೇ ಮಾಯವಾಗಿದೆ. ಕುಡಿಯಲು ನೀರಿಲ್ಲ, ಭೂ ಒಡಲು ಜಲಮಯವಾಗಿದೆ. ಸವೆದ ದಾರಿಯ ಹೆಜ್ಜೆ ಗುರುತಿಲ್ಲ ಹೀಗೆ ಕೊಡಗು ಪ್ರವಾಹಕ್ಕೆ ಸಿಕ್ಕ ಬಳಿಕ ನೆನಪುಗಳ ಗುರುತು ಇಲ್ಲವಾಗಿದೆ ಎಂಬ ನೋವನ್ನು ಮಡಿಕೇರಿಯ ಸಂದೇಶ್ ಡಿಸೋಜಾ ಅವರ ಕವನ ಕೇಳುಗರ ಮೆಚ್ಚುಗೆ ಗಳಿಸಿತ್ತಲ್ಲದೇ, ಚಪ್ಪಾಳೆಯನ್ನು ಗಿಟ್ಟಿಸಿತು. ವಾಣಿ ರಾಘವೇಂದ್ರ ಅವರು ಕಲೆಗಳ, ಕವಿಗಳ ಹಬ್ಬ ಮೈಸೂರು ದಸರಾ…ಎಂದು ಮುಕ್ತಾಯಗೊಂಡ ದಸರಾವನ್ನು ನೆನೆದು ಅದರ ಸೊಬಗನ್ನು ತಮ್ಮ ಕವನದ ಮೂಲಕ ಕಟ್ಟಿಕೊಡುವ ಪ್ರಯತ್ನ ಮಾಡಿದರು.

ಕವಿ ಹರೀಶ್ ಅವರು ಹೆಣ್ಣಾಗಲಿ, ಗಂಡಾಗಲಿ ಹುಟ್ಟಿದ ಮಗುವಿಗೂ ಕೊಡಿಸಬೇಕು ಮೊದಲು ಮೊಬೈಲ್ ಉಪಕರಣ, ಆಮೇಲೆಯೇ ನಾಮಕರಣ ಎಂಬ ಚುಟುಕು ಕವನ ಎಲ್ಲರ ಮೊಗದಲ್ಲಿ ನಗುತರಿ ಸಿತು. ದೇವರಾಜ್ ಅವರು `ಧರೆ ಉರುಳಿದರು ಉಳಿಯಬಹುದೇ ನಾವು’ ಎಂಬ ಕವನದ ಮೂಲಕ ಭೂಮಿ, ತಾಯಿ, ಪ್ರಕೃತಿಯನ್ನು ರಕ್ಷಿಸಬೇಕಿದೆ ಎಂಬುದನ್ನು ತಿಳಿಸಿದರು.
ಕೆ.ಆರ್.ಪೇಟೆ ವಿಜಯಕುಮಾರ್ ಅವರು `ಕಲಿ ಯುಗದ ದೇವರು ನೀನಕ್ಕ, ನಿನ್ನ ಕೆಲಸ ಮೆಚ್ಚದ ವರಾರಕ್ಕ’ ಎಂದು ಸಾಲುಮರದ ತಿಮ್ಮಕ್ಕ ಕವನದ ಮೂಲಕ ಅವರ ಸೇವೆಯನ್ನು ನೆನೆದರು. ಯುವ ಕವಯತ್ರಿ ಸುರಭಿ ಅವರು ಕಲಾವಿದನ ಕೈಯಲ್ಲಿನ ಕುಂಚ ನಡೆಸಿತೊಂದು ಹೊಸ ಸಂಚ ಎಂಬ ಸಾಲುಗಳುಳ್ಳ ಕಲಾವಿದನ ಕುಂಚ ಕವನ ವಾಚನದ ಮೂಲಕ ಕೇಳುಗರಿಗೆ ಮುದ ನೀಡಿದರು.

ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಎಂ.ಎಸ್. ವೆಂಕಟರಾಮಯ್ಯ ಅವರು ಮಾತನಾಡಿ, ಸಮಾಜದ ತಲ್ಲಣವನ್ನು ಕವನದ ಮೂಲಕ ಯುವ ಕವಿಗಳು ಕಟ್ಟಿಕೊಡುವ ಪ್ರಯತ್ನ ಮಾಡಿರುವುದು ಸಂತೋಷದ ವಿಚಾರ. ಚಿಕ್ಕವರು, ದೊಡ್ಡವರೆನ್ನದೇ ಎಲ್ಲರೂ ಕವಿಗೋಷ್ಠಿ ಯಲ್ಲಿ ಭಾಗವಹಿಸಿ ತಮ್ಮ ಭಾವನೆಗಳನ್ನು ಕವನದ ಮೂಲಕ ತಿಳಿಸುವ ಪ್ರಯತ್ನ ಮಾಡಿರುವುದು ಉತ್ತಮ ವಿಚಾರ. ಮತ್ತಷ್ಟು ಓದಿನೊಂದಿಗೆ ಇನ್ನೂ ಉತ್ತಮವಾಗಿ ಬರೆಯಿರಿ ಎಂದು ಸಲಹೆ ನೀಡಿದರು.

ಮಹದೇವನಾಂiÀiಕ್, ಎನ್.ಕೆ.ಚೆನ್ನಪ್ಪ, ಸೀಗವಾಳು ಸೋಮಶೇಖರ್, ಚಂದ್ರು ಇಲವಾಲ, ವೆಂಕಟಸ್ವಾಮಿ ಕೊಳ್ಳೇಗಾಲ, ನಾಗಾರ್ಜುನ್ ಸೇರಿದಂತೆ ಇನ್ನೂ ಅನೇಕರು ಗೋಷ್ಠಿಯಲ್ಲಿ ಕವನ ವಾಚನ ಮಾಡಿದರು. ಈ ವೇದಿಕೆಯಲ್ಲಿ ವಿಪ್ರಮುಖಂಡ ಡಾ.ಕೆ.ರಘುರಾಂ, ಹಿರಿಯ ಪತ್ರಕರ್ತ ಹೊಮ್ಮಮಂಜುನಾಥ್, ಸಿರಿಗನ್ನಡ ವೇದಿಕೆ ಜಿಲ್ಲಾಧ್ಯಕ್ಷೆ ಎ.ಹೇಮಗಂಗಾ ಇನ್ನಿತರಿದ್ದರು.

Translate »