ದಸರಾ ಜನದಟ್ಟಣೆ ನಿರ್ವಹಣೆ ಸಂಬಂಧ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಇಂದು ಸಭೆ
ಮೈಸೂರು

ದಸರಾ ಜನದಟ್ಟಣೆ ನಿರ್ವಹಣೆ ಸಂಬಂಧ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಇಂದು ಸಭೆ

October 22, 2020

ಮೈಸೂರು,ಅ.21(ಎಸ್‍ಬಿಡಿ)-ಮೈಸೂರು ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣ ಪರಿಣಾಮಕಾರಿಯಾಗಿದ್ದು, ದಸರಾ ಸಂದರ್ಭದಲ್ಲಿ ಜನದಟ್ಟಣೆ ನಿರ್ವಹಣೆ ಸಂಬಂಧ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಚರ್ಚಿಸಿ, ನಾಳೆ(ಗುರುವಾರ) ನಿರ್ಧಾರ ಕೈಗೊಳ್ಳಲಾಗುವುದು ಎಂದು ಆರೋಗ್ಯ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ಬುಧವಾರ ಕೊರೊನಾ ನಿರ್ವಹಣೆ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮ ಶೇಖರ್ ಅವರೊಂದಿಗೆ ಉನ್ನತ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಜಿಲ್ಲೆಯಲ್ಲಿ ಕಳೆದ 8 ದಿನಗಳಿಂದ ಕೊರೊನಾ ನಿಯಂತ್ರಣ ಸಾಕಷ್ಟು ಯಶಸ್ವಿಯಾಗಿದೆ. ಪಾಸಿಟಿವ್ ಕೇಸ್ ಪ್ರಮಾಣ ಶೇ.19ರಿಂದ ಶೇ.9.3ಕ್ಕೆ ಇಳಿಕೆ ಯಾಗಿದ್ದು, ಸಾವಿನ ಪ್ರಮಾಣವೂ ಕಡಿಮೆಯಾಗಿದೆ ಎಂದರು.

ಸರ್ಕಾರಿ ಆಸ್ಪತ್ರೆ ವ್ಯವಸ್ಥೆಯಲ್ಲೇ ಈ ವಾರದಲ್ಲಿ ಸಾಕಷ್ಟು ಐಸಿಯು ಹಾಗೂ ಆಕ್ಸಿಜನ್ ವ್ಯವಸ್ಥೆ ಇರುವ ಬೆಡ್‍ಗಳು ಖಾಲಿ ಇವೆ. ಇದರಿಂದ ಕೊರೊನಾ ನಿಯಂತ್ರಣ ಸಾಧ್ಯವಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಜಿಲ್ಲಾ ಉಸ್ತುವಾರಿ ಸಚಿವರು, ಡಿಸಿ ನೇತೃತ್ವದಲ್ಲಿ ಇಡೀ ಜಿಲ್ಲಾಡಳಿತದ ಪರಿಶ್ರಮದಿಂದ ಇದು ಸಾಧ್ಯವಾಗಿದೆ. ಮುಂದಿನ ಶುಕ್ರವಾರ, ಶನಿವಾರ ಹಾಗೂ ಭಾನುವಾರ ರಜೆ ಇರುವುದರಿಂದ ಹೆಚ್ಚು ಜನ ಮೈಸೂರಿಗೆ ಬರುವ ಸಾಧ್ಯತೆ ಇದೆ. ಜನರ ನಿಯಂತ್ರಣ, ಇನ್ನಿತರ ನಿರ್ವಹಣೆ ಕ್ರಮಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಈಗಾಗಲೇ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಅಂತಿಮವಾಗಿ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಸಭೆಯನ್ನು ಮಾಡಿ, ನಾಳೆ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

ನವೆಂಬರ್ ಅಂತ್ಯಕ್ಕೆ ಶೇ.2ಕ್ಕೆ ಇಳಿಕೆ: ದೇಶದಲ್ಲೇ ಅತೀ ಹೆಚ್ಚು ಟೆಸ್ಟಿಂಗ್ ಕರ್ನಾಟಕದಲ್ಲಿ ನಡೆಸಲಾಗುತ್ತಿದೆ. 90 ಸಾವಿರಕ್ಕೂ ಹೆಚ್ಚು ಆರ್‍ಟಿಪಿಸಿಆರ್ ಟೆಸ್ಟಿಂಗ್ ಆಗುತ್ತಿದೆ. ರಾಜ್ಯದಲ್ಲಿ 150 ಲ್ಯಾಬ್‍ಗಳಿದ್ದು, ಟೆಸ್ಟಿಂಗ್ ಸಂಖ್ಯೆ ಹೆಚ್ಚಿಸಿ, ಆದಷ್ಟು ಬೇಗ ಸೋಂಕಿತರ ಪತ್ತೆ ಹಚ್ಚಿ, ಸೂಕ್ತ ಚಿಕಿತ್ಸೆ ನೀಡುವ ಮೂಲಕ ಸಾವಿನ ಪ್ರಮಾಣ ಕಡಿಮೆ ಮಾಡಬೇಕೆಂಬುದೇ ಸರ್ಕಾರದ ಉದ್ದೇಶವಾಗಿದೆ. ಆರಂಭದಲ್ಲಿ ನಿಯಂತ್ರಣಾ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದರಿಂದ ಸೋಂಕಿತರ ಪ್ರಮಾಣ ಕಡಿಮೆಯಿತ್ತು. ಆದರೆ ಅನ್‍ಲಾಕ್ ನಂತರ ಹಂತಹಂತವಾಗಿ ಎಲ್ಲಾ ಚಟುವಟಿಕೆ ಪುನಾರಂಭವಾದ್ದರಿಂದ ಸ್ವಾಭಾವಿಕವಾಗಿ ಸೋಂಕಿತರ ಪ್ರಮಾಣ ಹೆಚ್ಚಾಯಿತು. ಈಗ ನಿಯಂತ್ರಣಕ್ಕೆ ಬರುತ್ತಿದೆ ಎಂದ ಮಾತ್ರಕ್ಕೆ ವೈರಾಣುವಿನ ಸಾಮಥ್ರ್ಯವೇನು ಕಡಿಮೆಯಾಗಿಲ್ಲ. ಆದರೆ ಜನ ಜವಾಬ್ದಾರಿಯುತವಾಗಿ ಮುನ್ನೆಚ್ಚರಿಕೆ ವಹಿಸುತ್ತಿರುವುದರಿಂದ ನಿಯಂತ್ರಣಕ್ಕೆ ಬರುತ್ತಿದೆ. ನವೆಂಬರ್ ಅಂತ್ಯದೊಳಗೆ ಸೋಂಕಿತರ ಪ್ರಮಾಣ ಶೇ.2ಕ್ಕೆ ಇಳಿಯಬಹುದು. ಆದರೆ ಚಳಿಗಾಲ ಆರಂಭ, ಹಬ್ಬಗಳಿರುವುದರಿಂದ ಮತ್ತಷ್ಟು ಎಚ್ಚರ ವಹಿಸಬೇಕು. ಲಸಿಕೆ ಬರುವವರೆಗೂ ಜಾಗ್ರತೆ ವಹಿಸಬೇಕು. ಸ್ವಲ್ಪ ಮೈಮರೆತರೂ ಅಪಾಯ ಖಂಡಿತ ಎಂದು ಎಚ್ಚರಿಸಿದ ಅವರು, ಲಸಿಕೆ ಲಭ್ಯವಾದ ಬಳಿಕ ಉನ್ನತ ಸಮಿತಿ ಮೂಲಕ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

 

Translate »