ದಸರಾ: ಚಾಮುಂಡಿಬೆಟ್ಟದಲ್ಲಿ ಮೈಸೂರು ಪಾಕ್ ವಿತರಣೆ
ಮೈಸೂರು

ದಸರಾ: ಚಾಮುಂಡಿಬೆಟ್ಟದಲ್ಲಿ ಮೈಸೂರು ಪಾಕ್ ವಿತರಣೆ

October 23, 2020

ಮೈಸೂರು, ಅ.22- ಮೈಸೂರಿನ ಅಪೂರ್ವ ಸ್ನೇಹ ಬಳಗದಿಂದ ದಸರಾ ಅಂಗವಾಗಿ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಸ್ಥಾನದ ಮುಂಭಾಗ ದೇಶ ವಿದೇಶದಿಂದ ಆಗಮಿಸಿದ ಭಕ್ತಾದಿಗಳಿಗೆ ಮೈಸೂರಿನ ಹಿರಿಮೆ ಮೈಸೂರು ಪೇಟ ಹಾಕಿಕೊಂಡು, ಮೈಸೂರು ಪಾಕ್ ವಿತರಿಸಿ ಮೈಸೂರು ಪಾಕ್‍ನ ಮಹತ್ವ ಹಾಗೂ ಅದರ ಇತಿಹಾಸ, ಮೈಸೂರಿನ ಸಾಂಸ್ಕೃತಿಕ ಹಿರಿಮೆಯನ್ನು ವಿವರಿಸಲಾಯಿತು.

ಬಳಗದ ಅಧ್ಯಕ್ಷ ಅಪೂರ್ವ ಸುರೇಶ್ ಈ ವೇಳೆ ಮಾತನಾಡಿ, ಸಂತೋಷದ ಸಂಕೇತ ಸಿಹಿ. ಆದರೆ ಇದು ಕೆಲವರ ಆರೋಗ್ಯಕ್ಕೆ ಹಾನಿಕರ ಎಂದು ಭಾವಿಸಲಾಗುತ್ತಿದೆ. ಆದರೆ ಮೈಸೂರು ಪಾಕ್ ತಿಂದರೆ ಆರೋಗ್ಯ ವೃದ್ಧಿಸುತ್ತದೆ. ಕಡ್ಲೆಹಿಟ್ಟು ಚರ್ಮದ ಕಾಯಿಲೆ ಗುಣಪಡಿಸುತ್ತದೆ. ಸಕ್ಕರೆಯಲ್ಲಿ ಆಮ್ಲಜನಕ ಹೆಚ್ಚಾಗಿದ್ದು, ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ. ತುಪ್ಪದ ಅಂಶದಿಂದ ಮೂಳೆ ಸವೆತ ನಿವಾರಣೆಯಾಗುತ್ತದೆ. ಅದಕ್ಕಾಗಿಯೇ ಚಿಕ್ಕ ಮಕ್ಕಳಿಂದ ಹಿರಿಯ ನಾಗರಿಕರವರೆಗೆ ಮೈಸೂರು ಪಾಕ್ ತಿನ್ನಲು ಅಚ್ಚುಮೆಚ್ಚು. ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆಯಾಗಿ ಮೈಸೂರು ಪಾಕ್ ವಿಶ್ವಾದ್ಯಂತ ತನ್ನ ಹಿರಿಮೆ ಸಾರುತ್ತಿದೆ. ಹಾಗೆಯೇ ಪ್ರವಾಸೋದ್ಯಮ ಇಲಾಖೆ ಮೈಸೂರು ಪಾಕ್ ತಯಾರಿಸುವ ಅಡುಗೆ ಉದ್ಯಮವನ್ನು ಸೃಷ್ಟಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಮಾತನಾಡಿ, ಮೈಸೂರು ಪಾಕ್ ಮೈಸೂರು ಅರಸರ ಕಾಲದಲ್ಲಿ ಜನಿಸಿದ್ದ ಭಕ್ಷ್ಯ. ಹಿಂದೆ ಮೈಸೂರು ರಾಜ್ಯದಲ್ಲಿ ಬೆಲ್ಲದ ಸಿಹಿ ಮಾತ್ರ ಅಸ್ತಿತ್ವದಲ್ಲಿತ್ತು ಎಂದರು. ನಗರ ಪಾಲಿಕಾ ಮಾಜಿ ಸದಸ್ಯ ಎಂ.ಡಿ.ಪಾರ್ಥಸಾರಥಿ, ಶ್ರೀಕಾಂತ್ ಕಶ್ಯಪ್, ಹರೀಶ್ ನಾಯ್ಡು, ರಾಕೇಶ್ ಕುಂಚಿಟಿಗ, ದೀಪಕ್, ಶಶಿ ಹಾಗೂ ಇನ್ನಿತರರು ಹಾಜರಿದ್ದರು.

Translate »