ಭತ್ತದ ಬೆಳೆಗೆ ಕೀಟ, ರೋಗ ಬಾಧೆಗೆ ಮುನ್ನೆಚ್ಚರಿಕಾ ಕ್ರಮ
ಮೈಸೂರು

ಭತ್ತದ ಬೆಳೆಗೆ ಕೀಟ, ರೋಗ ಬಾಧೆಗೆ ಮುನ್ನೆಚ್ಚರಿಕಾ ಕ್ರಮ

October 23, 2020

ಮೈಸೂರು,ಅ.21-ಮೈಸೂರು ಜಿಲ್ಲೆಯ ಕೆ.ಆರ್.ನಗರ, ತಿ.ನರಸೀಪುರ, ನಂಜನ ಗೂಡು ಮತ್ತು ಮೈಸೂರು ತಾಲೂಕಿನ ಕೆಲವು ಭಾಗಗಳಲ್ಲಿ ಭತ್ತದ ಬೆಳೆಗೆ ಹಳದಿ ಕಾಂಡ ಕೊರಕ, ಗರಿ ಸುತ್ತುವ ಹುಳು, ಬೆಂಕಿ ರೋಗ ಮತ್ತು ದುಂಡಾಣು ಅಂಗಮಾರಿ ರೋಗ ಕಂಡು ಬಂದಿದ್ದು, ಪ್ರಸ್ತುತ ರೋಗ/ಕೀಟಗಳು ಹೆಚ್ಚಾಗಲು ಅನುಕೂಲ ವಾತಾವರಣವಿರುವುದ ರಿಂದ ಅವುಗಳ ನಿರ್ವಹಣೆಗಾಗಿ ಮುಂಜಾಗ್ರತಾ ಕ್ರಮವಾಗಿ ಸಿಂಪಡಣೆ ಕ್ರಮಗಳನ್ನು ಅನುಸರಿಸುವಂತೆ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ಕಾಂಡ ಕೊರಕ ಹುಳು ಇದ್ದಲ್ಲಿ, ಬೆಳವಣಿಗೆಯ ಹಂತದಲ್ಲಿ ಸುಳಿ ಒಣಗುವುದು. ತೆನೆ ಬರುವ ಹಂತದಲ್ಲಿ ಮತ್ತು ಬಂದ ನಂತರ ಬಿಳಿತೆನೆ ಜಳ್ಳು ತೆನೆ ಕಂಡು ಬರುತ್ತದೆ. ಇದರ ನಿರ್ವಹಣೆಗಾಗಿ ಪ್ರತಿ ಲೀಟರ್ ನೀರಿಗೆ ಕ್ಲೋರೋಪೈರಿಫಾಸ್ 20ಇಅ 2.5 ಮಿ.ಲೀ ಬೆರೆಸಿ ಸಿಂಪಡಿಸಬೇಕು. ಎಕರೆಗೆ 200-250 ಲೀ ದ್ರಾವಣ ಉಪಯೋಗಿಸಬೇಕು.

ಗರಿ ಮಡಚುವ (ಸುತ್ತುವ) ಹುಳು ಇದ್ದಲ್ಲಿ ಗರಿಗಳ ಅಂಚು ಒಳಭಾಗಕ್ಕೆ ಸುರುಳಿ ಸುತ್ತಿಕೊಂಡಿರುವುದು, 2-3 ಗರಿಗಳನ್ನು ಕುಣಿಕೆ ಆಕಾರದಲ್ಲಿ ಹೆಣೆದಿರುವುದು ಕಂಡು ಬರುತ್ತವೆ. ಇದರ ನಿರ್ವಹಣೆಗಾಗಿ ಪ್ರತಿ ಲೀಟರ್ ನೀರಿಗೆ ಕ್ವಿನಾಲ್ ಫಾಸ್ 20ಇಅ 2 ಮಿ.ಲೀ ಅಥವಾ ಇಂಡಾಕ್ಸಿಕಾರ್ಬ್ 14.5 ಇಅ 0.5 ಮಿ.ಲೀ ಬೆರೆಸಿ ಸಿಂಪಡಿಸಬೇಕು. ಒಂದು ಎಕರೆಗೆ 250 ರಿಂದ 300 ಲೀ ದ್ರಾವಣ ಸಿಂಪಡಿಸಬೇಕು.

ಬೆಂಕಿ ರೋಗ/ಕುತ್ತಿಗೆ ರೋಗ ಇದ್ದಲ್ಲಿ ಬೆಳವಣಿಗೆ ಹಂತದಲ್ಲಿ ಗರಿಗಳ ಮೇಲೆ ವಜ್ರದಾಕಾರದ ಕಂದು ಚುಕ್ಕಿಗಳಾಗಿ, ಆ ಚುಕ್ಕಿಗಳ ಮಧ್ಯಭಾಗವು ಬೂದಿ ಬಣ್ಣ ಹೊಂದಿರುತ್ತದೆ. ತೆನೆ ಹೊರ ಬಂದಾಗ ತೆನೆಯ ಕುತ್ತಿಗೆ ಭಾಗದಲ್ಲಿ ಕಪ್ಪು ಮಚ್ಚೆ ಕಂಡು ಬಂದು ಕಾಳು ಒಣಗಿ ಜೊಳ್ಳಾಗಿರುತ್ತದೆ. ಇದರ ನಿವಾರಣೆಗಾಗಿ ಪ್ರತಿ ಲೀಟರ್ ನೀರಿಗೆ ಟ್ರೈಸೈಕ್ಲೋಜೋಲ್ 75 Wಅ 0.6 ಗ್ರಾಂ ಅನ್ನು ಸೇರಿಸಿ ಅಗತ್ಯಕ್ಕೆ ತಕ್ಕಂತೆ ಬೆಳವಣಿಗೆ ಹಂತ ಅಥವಾ ತೆನೆ ಬರುವ ಪೂರ್ವದಲ್ಲಿ (ಹೂ ಬಿಡುವ ಹಂತ) ಸಿಂಪಡಿ ಸುವುದು. ದುಂಡಾಣು ಅಂಗಮಾರಿ ರೋಗ ಕಂಡುಬಂದಲ್ಲಿ ತೆನೆಯ ಅಂಚಿನ ಗರಿಗಳು ಒಣಗಿದಂತಾಗಿ ತುದಿ ಬಾಗಿರುವುದು ಮತ್ತು ಗರಿಗಳ ಅಂಚಿನಲ್ಲಿ ಉದ್ದನೆಯ ಒಣಗಿದ ಪಟ್ಟಿಗಳು ಕಂಡು ಬರುತ್ತವೆ. ಇದರ ನಿರ್ವಹಣೆಗಾಗಿ ಬೆಳವಣಿಗೆ ಮತ್ತು ಕಾಳು ಕಟ್ಟುವ ಸಮಯದಲ್ಲಿ ಪ್ರತಿ ಲೀಟರ್ ನೀರಿಗೆ 0.5 ಗ್ರಾಂ ಸ್ಟ್ರೆಪೆÇ್ಟೀಸೈಕ್ಲಿನ್ ಮತ್ತು 3 ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ 50 WP ಬೆರೆಸಿ ಸಿಂಪಡಿಸುವುದು. ಪ್ರತಿ ಎಕರೆಗೆ 200ರಿಂದ 260 ಲೀಟರ್ ದ್ರಾವಣವನ್ನು ಸಿಂಪಡಿಸುವುದು. ಕೊಳವೆ ಹುಳು, ಎಳೆ ಕವಚ ರೋಗ ಮತ್ತು ಊದುಬತ್ತಿ ರೋಗವೂ ಸಹ ಅಲ್ಲಲ್ಲಿ ಕಂಡು ಬಂದಿದ್ದು, ಇವುಗಳ ನಿರ್ವಹಣೆಗಾಗಿ ಮತ್ತು ಮಾಹಿತಿಗೆ ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಹತ್ತಿರದ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು, ಕೃಷಿ ವಿಜ್ಞಾನ ಕೇಂದ್ರ, ಕೃಷಿ ವಿಸ್ತರಣಾ ಶಿಕ್ಷಣ ಘಟಕ/ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳನ್ನು ಸಂಪರ್ಕಿಸಬಹುದು.

 

 

Translate »