ಮಂಡ್ಯ, ಮಾ.5- ವರದಕ್ಷಿಣೆ ಕಿರುಕುಳ ನೀಡಿ, ಸೊಸೆಯನ್ನು ಕೊಂದು ಶವವನ್ನು ಚೀಲದಲ್ಲಿ ಕಟ್ಟಿ ಬಿಸಾಡಿದ್ದ ಮಾವನಿಗೆ ಜೀವಾವಧಿ ಮತ್ತು ಅತ್ತೆಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿ ಮಂಡ್ಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ಜೆ.ಪಿ.ಅರ್ಚನಾ ಅವರು ತೀರ್ಪು ನೀಡಿದ್ದಾರೆ.
ಮಂಡ್ಯ ತಾಲೂಕಿನ ಬೂತನ ಹೊಸೂರು ಗ್ರಾಮದ ನಿವಾಸಿಗಳಾದ ದೇವೇಗೌಡ ಮತ್ತು ಆತನ ಪತ್ನಿ ಜಯಮ್ಮ ಶಿಕ್ಷೆಗೆ ಗುರಿಯಾದವರು.
ವಿವರ: ನೇತ್ರಾವತಿ ಎಂಬುವವರನ್ನು ಬೂತನ ಹೊಸೂರು ಗ್ರಾಮದ ದೇವೇಗೌಡ ಮತ್ತು ಜಯಮ್ಮ ದಂಪತಿ ಪುತ್ರ ಸಿದ್ದರಾಜುವಿಗೆ 2010 ಫೆ.22ರಂದು ಮದುವೆ ಮಾಡಿಕೊಡಲಾಗಿತ್ತು.
ಪತಿ ಸಿದ್ದರಾಜು ಮತ್ತು ಅತ್ತೆ-ಮಾವ ಆಕೆಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರೆಂದು ಹೇಳಲಾಗಿದ್ದು, 2011ರ ಜುಲೈ 17ರಂದು ನೇತ್ರಾವತಿ ಮನೆಯಿಂದ ಹೊರಗೆ ಹೋದವಳು ವಾಪಸ್ಸಾಗದೇ ನಾಪತ್ತೆಯಾಗಿದ್ದಾಳೆ ಎಂದು ಪತಿ, ಅತ್ತೆ-ಮಾವ ಹೇಳಿದ್ದರು. ಈ ಸಂಬಂಧ ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದ ಮಂಡ್ಯ ಗ್ರಾಮಾಂತರ ಠಾಣೆ ಪೊಲೀಸರು, ತನಿಖೆ ಆರಂಭಿಸಿದಾಗ ಇವರು ಮೂವರು ಸೇರಿ ನೇತ್ರಾವತಿಯನ್ನು ಕೊಂದು ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ಕೊನ್ನೆ ಕಟ್ಟೆಯಲ್ಲಿ ಬಿಸಾಡಿ ರುವುದು 2011ರ ಜುಲೈ 20ರಂದು ಬಯಲಾಗಿದ್ದು, ಮೂವರನ್ನು ಪೊಲೀಸರು ಬಂಧಿಸಿದ್ದರು. ಅಂದಿನ ಮಂಡ್ಯ ಡಿವೈಎಸ್ಪಿ ಎಸ್.ಎಲ್. ಚೆನ್ನಬಸವಣ್ಣ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ವೇಳೆಯಲ್ಲಿ ಸಿದ್ದರಾಜು ಮೃತಪಟ್ಟ ಹಿನ್ನೆಲೆ ಯಲ್ಲಿ ದೇವೇಗೌಡ ಮತ್ತು ಜಯಮ್ಮ ಅವರ ವಿಚಾರಣೆ ನಡೆದಿತ್ತು.
ಆರೋಪ ದೃಢಪಟ್ಟ ಕಾರಣ ನ್ಯಾಯಾಧೀಶರು ದೇವೇಗೌಡನಿಗೆ ಜೀವಾವಧಿ ಶಿಕ್ಷೆ ಮತ್ತು 50 ಸಾವಿರ ರೂ.ದಂಡ ಹಾಗೂ ಆತನ ಪತ್ನಿ ಜಯಮ್ಮಳಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿ ದ್ದಾರೆ. ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿ ಯೋಜಕರಾದ ಎಸ್.ಜಿ.ಪೀರಜಾದೆ, ವಿ.ಎಸ್.ಭಟ್, ಎಸ್.ಟಿ.ಸುಧಾ ಮತ್ತು ವಿ.ಎಂ.ಅಂಗಡಿ ವಾದ ಮಂಡಿಸಿದ್ದರು.