ಕಂದಾಯ ಇಲಾಖೆ ಕಾರ್ಯದರ್ಶಿಗಳಿಂದಲೇ ಆದೇಶ ಬರಬೇಕಾಗಿದೆ ಎಂದ ಡಿಸಿ ಅಭಿರಾಮ್ ಜಿ.ಶಂಕರ್
ಮೈಸೂರು

ಕಂದಾಯ ಇಲಾಖೆ ಕಾರ್ಯದರ್ಶಿಗಳಿಂದಲೇ ಆದೇಶ ಬರಬೇಕಾಗಿದೆ ಎಂದ ಡಿಸಿ ಅಭಿರಾಮ್ ಜಿ.ಶಂಕರ್

October 1, 2018

ಮೈಸೂರು: ಮೈಸೂರಿನ ಕುರುಬಾರಹಳ್ಳಿ ಸರ್ವೆ ನಂ.4 ಮತ್ತು ಆಲನ ಹಳ್ಳಿ ಸರ್ವೆ ನಂ.41ಕ್ಕೆ ಒಳಪಟ್ಟ ಸಿಐಟಿಬಿ ಮತ್ತು ಮುಡಾ ಬಡಾವಣೆಗಳನ್ನು ಬಿ-ಖರಾಬಿನಿಂದ ಕೈಬಿಡುವಂತೆ ಕಂದಾಯ ಇಲಾಖೆಯಿಂದ ಮುಡಾಗೆ ಆದೇಶ ರವಾನಿಸುವ ಕಾರ್ಯಕ್ಕೆ ಶೀಘ್ರವೇ ಚಾಲನೆ ದೊರೆಯಬೇಕಾಗಿದೆ.

ಈ ಸರ್ವೆ ನಂಬರ್‌ಗಳ ವ್ಯಾಪ್ತಿಗೆ ಸೇರಿದ ಸಿದ್ಧಾರ್ಥನಗರ, ವಿದ್ಯಾನಗರ, ಕೆ.ಸಿ.ಬಡಾ ವಣೆ, ಜೆ.ಸಿ.ಬಡಾವಣೆ ಮತ್ತು ಕಂದಾಯ ಬಡಾವಣೆಗಳನ್ನು ಬಿ-ಖರಾಬಿನಿಂದ ಕೈಬಿಡಲು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ವಿಧಾನಸಭಾ ಚುನಾವಣೆ ಎದುರಾದ ಕಾರಣ ಸಂಪುಟ ಸಭೆಯ ನಿರ್ಣಯವನ್ನು ಅನುಷ್ಠಾನಗೊಳಿಸಲು ಅಂದಿನ ಕಂದಾಯ ಇಲಾಖೆ ಕಾಯದರ್ಶಿಗಳಿಗೆ ಸಮಯವಕಾಶವಾಗಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

ಈಗ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಕಚೇರಿಯಿಂದ ಮುಡಾ ಆಯುಕ್ತರಿಗೆ ಬಂದ ಆದೇ ಶದ ಮೇರೆಗೆ ಕ್ರಮ ಕೈಗೊಳ್ಳಲಾಗದು ಎಂಬ ಖಚಿತ ಮಾಹಿತಿ ಬಂದಿದೆ. ಇದರಿಂದಾಗಿ ಈ ಬಡಾವಣೆ ನಿವಾಸಿಗಳ ಸಮಸ್ಯೆ ಇತ್ಯರ್ಥವಾಗದೇ ನೆನೆಗುದಿಗೆ ಬಿದ್ದಿತ್ತು. ಅಂತಿಮವಾಗಿ ಹಾಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೂ ಮೈಸೂರಿನ ಜೆಎಸ್‍ಎಸ್ ಶಾಖಾ ಮಠದಲ್ಲಿ ಇತ್ತೀಚೆಗೆ ಬಿ.ಪಿ.ಮಂಜುನಾಥ್ ನೇತೃತ್ವದಲ್ಲಿ ನಿವಾಸಿಗಳು ಮನವಿ ಸಲ್ಲಿಸಿದ್ದರು. ಮುಖ್ಯಮಂತ್ರಿಗಳೂ ಕೂಡ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು.

ಅದರಂತೆ ಈ ಸಮಸ್ಯೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳ ಉಪ ಕಾರ್ಯದರ್ಶಿ ಅರುಣ್ ಫುರ್ಟಾಡೋ ಅವರು ಮುಡಾ ಆಯುಕ್ತರಿಗೆ ಪತ್ರ ಬರೆದಿದ್ದರು. (ಸಂಖ್ಯೆ ಸಿಎಂ/52430/ಆರ್‍ಇಟಿ-4ಇಎಂ/2018 ದಿನಾಂಕ 17/9/2018). ಈ ಪತ್ರದ ಪ್ರತಿಯನ್ನು ಕುರುಬಾರಹಳ್ಳಿ ಸರ್ವೇ ನಂ.4, ಆಲನಹಳ್ಳಿ ಸರ್ವೇ ನಂ.41ರ ಬಡಾವಣೆಗಳ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರೂ ಆದ ಬಿಜೆಪಿ ಮುಖಂಡ ಬಿ.ಪಿ.ಮಂಜುನಾಥ್ ಅವರಿಗೆ ರವಾನಿಸಲಾಗಿತ್ತು. ಈ ವಿಚಾರ ಮಾಧ್ಯಮಗಳಲ್ಲೂ ಪ್ರಕಟವಾಗಿತ್ತು.

ಆದರೆ, ಈ ಸರ್ವೇ ನಂಬರ್‌ಗಳ ನಿವಾಸಿಗಳ ಸಮಸ್ಯೆ ಇತ್ಯರ್ಥಕ್ಕೆ ಯಾವುದೇ ರೀತಿಯ ಕ್ರಮ ಮುಂದುವರೆಯದೇ ನೆನೆಗುದಿಗೆ ಬಿದ್ದಿದ್ದ ಹಿನ್ನೆಲೆಯಲ್ಲಿ ಇಂದು `ಮೈಸೂರು ಮಿತ್ರ’ ಪ್ರಧಾನ ಸಂಪಾದಕರಾದ ಕೆ.ಬಿ.ಗಣಪತಿ ಅವರು ದೂರವಾಣಿ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರನ್ನು ಸಂಪರ್ಕಿಸಿ, ಮುಖ್ಯಮಂತ್ರಿಗಳ ಪತ್ರದ ಹಿನ್ನೆಲೆಯಲ್ಲಿ ಮುಡಾ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗಳು ಯಾವ ಕ್ರಮ ಕೈಗೊಂಡಿದ್ದಾರೆ ಎಂಬುದರ ಬಗ್ಗೆ ವಿಚಾರಿಸಿದರು.

ಈ ವೇಳೆ `ಜಿಲ್ಲಾಧಿಕಾರಿಗಳು ನನ್ನ ಜೊತೆಗೇ ಇದ್ದಾರೆ. ಅವರೊಂದಿಗೆ ಮಾತನಾಡಿ’ ಎಂದು ಗೌಡರು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅವರಿಗೆ ಕರೆ ಹಸ್ತಾಂತರಿಸಿದರು. `ಈ ಪ್ರಕರಣ ಸಂಪೂರ್ಣವಾಗಿ ಕಂದಾಯ ಇಲಾಖೆ ವ್ಯಾಪ್ತಿಗೆ ಒಳಪಡುವುದರಿಂದ ಸಿದ್ದರಾಮಯ್ಯ ಅವಧಿಯಲ್ಲಿ ಸಚಿವ ಸಂಪುಟ ಕೈಗೊಂಡಿರುವ ನಿರ್ಣಯವನ್ನು ಅನುಷ್ಠಾನಕ್ಕೆ ತರುವ ಬಗ್ಗೆ ಕಂದಾಯ ಇಲಾಖೆ ಕಾರ್ಯದರ್ಶಿಗಳಿಂದ ತಮಗೆ ಆದೇಶ ಬರಬೇಕಾಗಿದೆ. ಅವರ ಆದೇಶ ಬಂದ ಕೂಡಲೇ ಈ ಬಡಾವಣೆಗಳನ್ನು ಬಿ-ಖರಾಬಿನಿಂದ ಕೈಬಿಡುವ ಪ್ರಕ್ರಿಯೆಗಳು ನಡೆಯಲಿವೆ’ ಎಂದು ಜಿಲ್ಲಾಧಿಕಾರಿಗಳು `ಮೈಸೂರು ಮಿತ್ರ’ ಪ್ರಧಾನ ಸಂಪಾದಕರಿಗೆ ವಿವರಿಸಿದರು.

ಆನಂತರ ಕೆ.ಬಿ.ಗಣಪತಿ ಅವರೊಂದಿಗೆ ಮಾತನಾಡಿದ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರು, ತಾವು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರ ಜೊತೆ ಚರ್ಚೆ ನಡೆಸಿ ಕಂದಾಯ ಇಲಾಖೆ ಕಾರ್ಯದರ್ಶಿ ಡಾ. ರಾಜ್‍ಕುಮಾರ್ ಖತ್ರಿ ಅವರಿಂದ ಹಿಂದಿನ ಸರ್ಕಾರದ ಸಚಿವ ಸಂಪುಟದ ನಿರ್ಣಯವನ್ನು ಅನುಷ್ಠಾನಗೊಳಿಸುವ ಆದೇಶ ಹೊರಡಿಸಲು ಶೀಘ್ರವಾಗಿಯೇ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಕುರುಬಾರಹಳ್ಳಿ ಸರ್ವೆ ನಂ.4 ಮತ್ತು ಆಲನಹಳ್ಳಿ ಸರ್ವೆ ನಂ.41ರಲ್ಲಿರುವ ಸಿಐಟಿಬಿ ಮತ್ತು ಮುಡಾದಿಂದ ಖರೀದಿಸಿರುವ ನಿವಾಸಿಗಳು ಅನುಭವಿಸುತ್ತಿರುವ ಯಾತನೆ ಕೊನೆಗೊಳ್ಳಬೇಕಾಗಿದೆ. ಹಿಂದಿನ ಸಿದ್ದರಾಮಯ್ಯ ಅವರ ಸರ್ಕಾರದ ಸಚಿವ ಸಂಪುಟವೂ ಕೂಡ ಈ ನಿವಾಸಿಗಳ ಸಮಸ್ಯೆ ನಿವಾರಣೆಗೆ ಪೂರಕವಾಗಿ ನಿರ್ಣಯ ಕೈಗೊಂಡಿದೆ. ಈ ನಿರ್ಣಯವನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ಕಂದಾಯ ಇಲಾಖೆಯದ್ದಾಗಿದ್ದು, ಅದು ಕಾರ್ಯ ರೂಪಕ್ಕೆ ಬರಬೇಕಾದರೆ ಜಿಲ್ಲಾ ಉಸ್ತುವಾರಿ ಸಚಿವರಾದ ಜಿ.ಟಿ.ದೇವೇಗೌಡರು ಹಾಗೂ ಮುಡಾ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿಗಳು ಮತ್ತು ಮುಡಾ ಆಯುಕ್ತರು ಜಂಟಿಯಾಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಈ ಕೆಲಸವು ಜರೂರಾಗಿ ಆಗಬೇಕಾದ ಅಗತ್ಯವಿದೆ.

ಸ್ವಲ್ಪ ಸಾಮಾನ್ಯ ಜ್ಞಾನವನ್ನು ತನ್ನ ಸರ್ಕಾರಿ ಸೇವೆಯ ಅನುಭವದಿಂದ ಪಡೆದಿದ್ದರೂ, ಮುಖ್ಯಮಂತ್ರಿಗಳ ಉಪ ಕಾರ್ಯದರ್ಶಿ ಅರುಣ್ ಫುರ್ಟಾಡೋ ಅವರು ಇದಕ್ಕೆ ಸಂಬಂಧಪಟ್ಟ ಪತ್ರವನ್ನು ಮುಡಾ ಆಯುಕ್ತರಿಗೆ ರವಾನಿಸುವ ಬದಲು ಕಂದಾಯ ಇಲಾಖೆ ಕಾರ್ಯದರ್ಶಿಗಳಿಗೆ ಕಳುಹಿಸಿದ್ದರೆ ಕಳೆದ ನಾಲ್ಕು ವರ್ಷಗಳಿಂದ ನರಳುತ್ತಿರುವ ಸಾವಿರಾರು ನಿವಾಸಿಗಳಿಗೆ ಈಗಾಗಲೇ ಪರಿಹಾರ ಸಿಕ್ಕುತ್ತಿತ್ತು ಅಲ್ಲವೇ?

ಹಿನ್ನೆಲೆ

ಕಳೆದ 3 ವರ್ಷದ ಹಿಂದೆ ಕೆಲವೊಂದು ದೂರುಗಳನ್ನು ಆಧರಿಸಿ ನ್ಯಾಯಾಲಯ ಹಾಗೂ ಸರ್ಕಾರದ ಆದೇಶದ ಮೇರೆಗೆ ಅಂದಿನ ಜಿಲ್ಲಾಧಿಕಾರಿ ಸಿ.ಶಿಖಾ ಅವರು ಕುರುಬಾರಹಳ್ಳಿ ಸರ್ವೆ ನಂ.4 ಮತ್ತು ಆಲನಹಳ್ಳಿ ಸರ್ವೆ ನಂ.41 ವ್ಯಾಪ್ತಿಯ ಭೂಮಿಯನ್ನು ಬಿ-ಖರಾಬು (ಸರ್ಕಾರಿ ಭೂಮಿ) ಎಂದು ಆದೇಶ ಹೊರಡಿಸಿದ್ದರು. ಅಂದಿನಿಂದಲೂ ಈ ಸರ್ವೆ ನಂಬರ್‌ಗಳವ್ಯಾಪ್ತಿಗೆ ಬರುವ ಸಿಐಟಿಬಿ ಮತ್ತು ಮುಡಾ ಅಭಿವೃದ್ಧಿಪಡಿಸಿದ ಸಿದ್ಧಾರ್ಥನಗರ, ವಿದ್ಯಾನಗರ, ಕೆ.ಸಿ.ಬಡಾವಣೆ, ಜೆ.ಸಿ.ಬಡಾವಣೆ, ಆಲನಹಳ್ಳಿ ಹಾಗೂ ಆದಾಯ ತೆರಿಗೆ ಬಡಾವಣೆ ನಿವಾಸಿಗಳಿಗೆ ನಿವೇಶನ, ಮನೆ, ಆಸ್ತಿಗೆ ಸಂಬಂಧಿಸಿದ ದಾಖಲಾತಿ ವಿಲೇವಾರಿಯನ್ನು ಮುಡಾ ಹಾಗೂ ನಗರಪಾಲಿಕೆ ಸ್ಥಗಿತಗೊಳಿಸಿದ್ದವು. ಇದರಿಂದಾಗಿ ತಾವು ಖರೀದಿಸಿದ್ದ ನಿವೇ ಶನಕ್ಕೆ ಖಾತಾ ಪಡೆಯಲು, ತಮ್ಮ ಆಸ್ತಿಯನ್ನು ಮಾರಾಟ ಮಾಡಲು, ಅವುಗಳ ಮೇಲೆ ಬ್ಯಾಂಕ್‍ನಿಂದ ಸಾಲ ಪಡೆಯಲು ಸಾಧ್ಯವಾಗದೇ, ನಿವೇಶನದಲ್ಲಿ ಕಟ್ಟಡ ನಿರ್ಮಿಸಲು ನಕ್ಷೆ ಅನುಮೋದನೆಯಾಗದೆ ನಿವಾಸಿಗಳು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದರು.

ಈ ರೀತಿ ಸಂಕಷ್ಟಗಳಿಗೆ ಒಳಗಾದ ನಿವಾಸಿಗಳು ಕುರುಬಾರಹಳ್ಳಿ ಮತ್ತು ಆಲನಹಳ್ಳಿ ಈ ಸರ್ವೆ ನಂಬರ್‍ಗಳಿಗೆ ಒಳಪಡುವ ಸಿಐಟಿಬಿ ಹಾಗೂ ಮುಡಾ ಅಭಿವೃದ್ಧಿಪಡಿಸಿರುವ ಬಡಾವಣೆಗಳನ್ನು ಬಿ-ಖರಾಬಿನಿಂದ ಮುಕ್ತಗೊಳಿಸುವಂತೆ ಕ್ಷೇಮಾಭಿವೃದ್ಧಿ ಸಂಘ ರಚಿಸಿಕೊಂಡು ಬಿಜೆಪಿ ಮುಖಂಡರೂ ಆದ ಬಿ.ಪಿ.ಮಂಜುನಾಥ್ ನೇತೃತ್ವದಲ್ಲಿ ಹಲವು ಬಾರಿ ಲಲಿತ ಮಹಲ್ ರಸ್ತೆಯಲ್ಲಿ ರಸ್ತೆ ತಡೆ, ಮುಡಾ ಮುಂದೆ ಪ್ರತಿಭಟನೆ ನಡೆಸಿದ್ದನ್ನು ಸ್ಮರಿಸಬಹುದು.

Translate »