ಸಾಂಸ್ಕೃತಿಕ ನಗರಿಯಲ್ಲಿ ವಿಂಟೇಜ್ ಕಾರುಗಳ ಕಲರವ
ಮೈಸೂರು

ಸಾಂಸ್ಕೃತಿಕ ನಗರಿಯಲ್ಲಿ ವಿಂಟೇಜ್ ಕಾರುಗಳ ಕಲರವ

October 1, 2018

ಮೈಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕೆ ಬೆಂಗಳೂರಿಂದ ಮೈಸೂರಿಗೆ ಆಗಮಿಸಿದ ವಿವಿಧ ದೇಶಗಳ 50 ವಿಂಟೇಜ್ ಕಾರ್‍ಗಳು ನಗರದ ಪ್ರಮುಖ ರಸ್ತೆಗೆ ಇಳಿದು, ಸಾರ್ವಜನಿಕರು, ಪ್ರವಾಸಿಗರ ಮನಸೊರೆ ಗೊಂಡವು. ಅಂತೆಯೇ ಮಾನಿನಿಯರ ಮೊಬೈಲ್ ನಲ್ಲಿ ಸೆಲ್ಫಿಗೆ ಸೆರೆಯಾದ ದೃಶ್ಯ ಸಾಮಾನ್ಯವಾಗಿತ್ತು. ಲಲಿತಮಹಲ್ ಪ್ಯಾಲೇಸ್ ಹೋಟೆಲ್ ಮುಂಭಾಗದಲ್ಲಿ ನಾಡಹಬ್ಬ ದಸರಾ ಮಹೋತ್ಸವ ಅಂಗವಾಗಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಫೆಡರೇಷನ್ ಆಫ್ ಹಿಸ್ಟಾರಿಕ್ ವೆಹಿಕಲ್ ಆಫ್ ಇಂಡಿಯಾ ಸಹಯೋಗದಲ್ಲಿ ಆಯೋಜಿಸಿದ್ದ ವಿಂಟೇಜ್ ಕಾರ್ ರ‍್ಯಾಲಿ ಜನರನ್ನು ಆಕರ್ಷಿಸಿದ ಪರಿಯಿದು.

1925ನೇ ಇಸವಿಯ ಇಂಗ್ಲೆಂಡ್‍ನಲ್ಲಿ ನೋಂದಣಿಯಾಗಿರುವ ಲಾಂಚ್‍ಸ್ಟಾರ್ 40 ಹೆಚ್‍ಪಿ ಟೂರೆರ್(ಡಿಎಸ್8015) ಕಾರನ್ನು 80 ವರ್ಷದ ಪೀಟರ್ ನೊಬೆಲ್ ದಂಪತಿ ಮೈಸೂರಿನ ಪ್ರಮುಖ ರಸ್ತೆಯಲ್ಲಿ ಸಂಚರಿಸಿ, ಪ್ರವಾಸಿಗರ ಆತ್ಮೀಯತೆಗೆ ಮನಸೋತರು. ಪೀಟರ್ ದಂಪತಿ, ಈ ರ‍್ಯಾಲಿಯಲ್ಲಿ ಭಾಗವಹಿಸುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರಲ್ಲದೆ, ಪ್ರವಾಸೋದ್ಯಮದಲ್ಲಿ ಮೈಸೂರು ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದ್ದು, ಇದರಲ್ಲಿ ಭಾಗವ ಹಿಸಲು ಲಂಡನ್‍ನಿಂದ ಮೈಸೂರಿಗೆ ಆಗಮಿಸಿದ್ದೇನೆ ಎಂದರು.

1928ನೇ ಇಸವಿಯ ಬೆಂಗಳೂರಿಂದ ಆಗಮಿಸಿದ್ದ ಫೆಡರೇ ಷನ್ ಆಫ್ ಹಿಸ್ಟಾರಿಕ್ ವೆಹಿಕಲ್ಸ್ ಆಫ್ ಇಂಡಿಯಾ ಸಂಸ್ಥೆಗಳ ಅಧ್ಯಕ್ಷ ಡಾ.ರವಿಪ್ರಕಾಶ್ ಅವರು, ಲಾಂಚ್‍ಸ್ಟಾರ್ ಎಸ್‍ಟಿ 8(ಎಂಡಿಓ 8) ಆಗಮಿಸಿದ್ದರು. ಉದ್ಘಾಟನೆ ವೇಳೆ ಬೇರೊಂದು ಕೆಂಪು ಕಲರ್ ಕಾರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರನ್ನು ಜೊತೆಯಲ್ಲಿ ಕೂರಿಸಿಕೊಂಡು ಲಲಿತ್ ಮಹಲ್ ಹೋಟೆಲ್ ಮುಂಭಾಗ ಪ್ರಾಯೋಗಿಕವಾಗಿ ಸುತ್ತಾಡಿಸಿ, ರ‍್ಯಾಲಿಗೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಸಚಿವರು, ಭಾನುವಾರ ಬೆಳಿಗ್ಗೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು, ವಿಧಾನಸೌಧ ಮುಂಭಾಗದಿಂದ ಮೈಸೂರಿನಲ್ಲಿ ನಡೆಯುವ ವಿಂಟೇಜ್ ರ‍್ಯಾಲಿಗೆ ಚಾಲನೆ ನೀಡಿದ್ದರು. ಸುಮಾರು ಐದು ಗಂಟೆಗಳ ಕಾಲ ಮೈಸೂರು-ಬೆಂಗಳೂರು ರಸ್ತೆಯಲ್ಲಿ ಸಂಚರಿಸಿ ಮೈಸೂರಿಗೆ ಆಗಮಿಸಿವೆ. ದೇಶ-ವಿದೇಶಗಳಿಂದ ಆಗಮಿಸಿರುವ ವಿಂಟೇಜ್ ಕಾರುಗಳನ್ನು ನೋಡುತ್ತಿದ್ದರೆ, ರಾಜ-ಮಹಾರಾಜರ ಕಾಲ ನೆನಪಿಗೆ ಬರುತ್ತಿದೆ. ಇದನ್ನು ಮೈಸೂರಿನ ಜನತೆ ಹಾಗೂ ದಸರಾ ಮಹೋತ್ಸವಕ್ಕೆ ಆಗಮಿಸುವ ಪ್ರವಾಸಿಗರು ಹಿಂದಿನ ಕಾಲದ ಕಾರುಗಳನ್ನು ನೋಡಿ ಆನಂದಿಸಬೇಕು. ನಾಡಹಬ್ಬ ದಸರಾ ಮಹೋತ್ಸವಕ್ಕೆ ವಿಂಟೇಜ್ ರ‍್ಯಾಲಿ ಮೂಲಕ ಚಾಲನೆ ನೀಡಲಾಗಿದೆ. ಹೀಗೆ ಯುವ ದಸರಾ, ಯುವ ಸಂಭ್ರಮ ಹಾಗೂ ಮಹಿಳೆಯರ ದಸರಾ, ರೈತ ದಸರಾ, ಕುಸ್ತಿ ಸೇರಿದಂತೆ ಇತರೆ ಕಾರ್ಯ ಕ್ರಮಗಳಿಗೂ ಚಾಲನೆ ಸಿಗಲಿದೆ ಎಂದು ತಿಳಿಸಿದರು.

ಫೆಡರೇಷನ್ ಆಫ್ ಹಿಸ್ಟಾರಿಕ್ ವೆಹಿಕಲ್ಸ್ ಆಫ್ ಇಂಡಿಯಾ ಸಂಸ್ಥೆಗಳ ಅಧ್ಯಕ್ಷ ಡಾ.ರವಿಪ್ರಕಾಶ್ ಮಾತನಾಡಿ, ರ‍್ಯಾಲಿಯಲ್ಲಿ 1925ರಿಂದ 1975ರವರೆಗೆ ತಯಾರಾಗಿ ರುವ ವಿವಿಧ ಕಂಪನಿಯ 50 ಕಾರ್‍ಗಳು ಪಾಲ್ಗೊಂಡಿವೆ. ಇಂಗ್ಲೆಂಡ್, ಫ್ರಾನ್ಸ್, ಶ್ರೀಲಂಕಾ ದಿಂದ 14 ಕಾರ್, ಭಾರತದ ವಿವಿಧ ರಾಜ್ಯಗಳಿಂದ 22 ಕಾರ್, ಕರ್ನಾಟಕದಿಂದ 16 ವಿಂಟೇಜ್ ಕಾರುಗಳು ರ‍್ಯಾಲಿಯಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ ಎಂದರು.

ಈ ಉತ್ಸವದಲ್ಲಿ ಮುಂಬೈನ ಗ್ರಹಾಂ (1933), ಫೌರ್ಡ್ ಮಾಂಡಲ್ ಎ, ಮರ್ಸಿಡೆಸ್ 170 ವಿ(1936), ಫೌರ್ಡ್ ಜೀಪ್(1946), ಜಗ್ವಾರ್, ಹಿಂದೂಸ್ತಾನ್ ಮೋಟಾರ್ಸ್ 14 ಮೋರಿಸ್ ಆಕ್ಸ್‍ಫರ್ಡ್ ಸಲೂನ್, ಎಂಜಿ ಟಿಡಿ, ಮರ್ಸಿಡೆಸ್ ಬೆಂಜ್ 120 ಎಸ್‍ಎಲ್, ಮೋರಿಸ್ 1000, ಮೆರ್ಸಿಡೆಸ್ ಬೆಂಜ್ ಡಬ್ಲ್ಯೂ 108 280 5 ಸೇರಿದಂತೆ 50 ಕಾರುಗಳು ರಸ್ತೆಗಿಳಿದ್ದವು. ನಗರದ ಪ್ರಮುಖ ರಸ್ತೆಗಳಲ್ಲಿ ವಿಂಟೇಜ್ ಕಾರುಗಳು ಸಂಚರಿಸುತ್ತಿದ್ದರೆ, ವಿವಿಧ ಆಕೃತಿಯ 1925ರ ಕಾಲಘಟ್ಟದ ಹಳೆಯ ಕಾರುಗಳು ಇತಿಹಾಸವನ್ನು ಸಾರುವಂತಹ ಪಳೆಯುಳಿಕೆಯಂತಿದ್ದವು. ಅಲ್ಲದೆ, ಹಳೆಯ ಮಾಡಲ್‍ಗಳು ಮೈಸೂರಿನ ಅಂದ ಹೆಚ್ಚುವಂತೆ ಭಾಸವಾಗುತ್ತಿದ್ದವು.
ನಗರದಲ್ಲಿ ವಿಂಟೇಜ್ ಸುಂದರಿಯರ ಕಾರುಬಾರು: ಲಲಿತ್ ಮಹಲ್ ಪ್ಯಾಲೆಸ್ ಹೋಟೆಲ್ ಆವರಣದಿಂದ 5 ಗಂಟೆಗೆ ಆರಂಭ ವಾದ ರ‍್ಯಾಲಿಯು, ಮಾಲ್ ಆಫ್ ಮೈಸೂರು, ಜೆಎಸ್‍ಎಸ್ ಆಸ್ಪತ್ರೆ, ಆರ್‍ಟಿಓ ವೃತ್ತದಲ್ಲಿ ಎಡಕ್ಕೆ ತಿರುಗಿ, ಅದ್ವೈತ್ ಹುಂಡೈ ಕಾರ್ ಷೋ ರೂಂ ಬಳಿ ಹತ್ತು ನಿಮಿಷ ರ‍್ಯಾಲಿಗೆ ಬಿಡುವು ನೀಡಲಾಯಿತು. ಬಳಿಕ ಇಲ್ಲಿಂದ ಆರಂಭಗೊಂಡು ಮೈಸೂರು ಜಿಲ್ಲಾ ನ್ಯಾಯಾಲಯ, ಮೈಸೂರು ವಿವಿ ಕ್ರಾಫರ್ಡ್ ಭವನ, ಜಿಲ್ಲಾಧಿಕಾರಿಗಳ ಕಚೇರಿ, ಮೆಟ್ರೋಪೋಲ್ ವೃತ್ತ, ರೈಲ್ವೆ ನಿಲ್ದಾಣ, ಕೆ.ಆರ್.ಆಸ್ಪತ್ರೆಯಿಂದ ಬಲಕ್ಕೆ ತಿರುವು ಪಡೆದುಕೊಂಡು, ಕೆ.ಆರ್.ವೃತ್ತ, ಪುರಭವನದ ಬಳಿ ಯೂಟರ್ನ್ ಪಡೆಯಲಾಯಿತು.

ನಂತರ ಹಾರ್ಡಿಂಜ್ ವೃತ್ತ, ಜೆಎಸ್‍ಎಸ್ ಮಹಾವಿದ್ಯಾಪೀಠದ ಬಳಿ ತಿರುವು ಪಡೆದುಕೊಂಡು ಸಂಜೆ 5.50ರ ಸುಮಾರಿನಲ್ಲಿ ಅರಮನೆಯ ಜಯಮಾರ್ತಾಂಡ ದ್ವಾರದ ಮೂಲಕ ಒಳ ಪ್ರವೇಶಿಸಿದವು. ಬಳಿಕ ಅಂಬಾವಿಲಾಸ್ ಮುಂಭಾಗದ ಆವರಣದಲ್ಲಿ ಲಾಳಾಕೃತಿಯಾಗಿ ನಿಲ್ಲಿಸಿ, ಪ್ರದರ್ಶಿಸಲಾಯಿತು. ನಂತರ ರಾತ್ರಿ 7.30ಕ್ಕೆ ಲಲಿತ್‍ಮಹಲ್ ಹೋಟೆಲ್ ಆವರಣ ತಲುಪಿದವು.

ರ‍್ಯಾಲಿಯಲ್ಲಿ ಮೋತಿ ಲಾಲ್ ಅವರ ಕಾರು ವಿಶೇಷ : ಇಂದಿನ ವಿಂಟೇಜ್ ಕಾರು ಉತ್ಸವದಲ್ಲಿ ಮಾಜಿ ಪ್ರಧಾನಿ ಜವಹರ್ ಲಾಲ್ ನೆಹರು ಅವರ ತಂದೆ ಮೋತಿಲಾಲ್ ನೆಹರು ಅವರು, 1928ರಿಂದ 85ರವರೆಗೆ ಲಾಂಚ್‍ಸ್ಟಾರ್ ಎಸ್‍ಟಿ 8(ಎಂಡಿಓ 8)ಉಪಯೋಗಿಸುತ್ತಿದ್ದ ಕಾರು ಭಾಗಿಯಾಗಿದ್ದು ವಿಶೇಷವಾಗಿತ್ತು. ಇದರ ಮಾಲೀಕರು ಫೆಡರೇಷನ್ ಆಫ್ ಹಿಸ್ಟಾರಿಕ್ ಆಫ್ ವೆಹಿಕಲ್ಸ್ ಆಫ್ ಇಂಡಿಯಾ ಅಧ್ಯಕ್ಷ ಡಾ. ರವಿಶಂಕರ್. ಆದರೆ, ಬೆಂಗಳೂರಿಂದ ಮೈಸೂರಿಗೆ ಆಗಮಿಸಿದ ಈ ಕಾರು, ಲಲಿತ್ ಮಹಲ್ ಹೋಟೆಲ್ ತಲುಪಿಸುವಷ್ಟರಲ್ಲಿ ರಿಪೇರಿಗೆ ಬಂದಿತ್ತು ಎನ್ನಲಾಗಿದೆ.

ಸೆಲ್ಫಿಗೆ ಮುಗಿಬಿದ್ದ ಪ್ರವಾಸಿಗರು: ವಿಂಟೇಜ್ ಕಾರು ಉತ್ಸವಕ್ಕೆ ಚಾಲನೆ ದೊರೆತು ಲಲಿತಮಹಲ್ ಹೋಟೆಲ್ ಆವರಣದಿಂದ 50 ಕಾರುಗಳು ನಗರದ ಕಡೆಗೆ ಹೋರಟಾಗ ರಸ್ತೆಯ ಅಕ್ಕ-ಪಕ್ಕದಲ್ಲಿ ನಿಂತಿದ್ದ ಸಾರ್ವಜನಿಕರು ಹಳೆಯ ಕಾರುಗಳ ಸೆಲ್ಫಿಗೆ ಮುಗಿಬಿದ್ದರು. ಇಂದು ಬೆಳಿಗ್ಗೆ ಬೆಂಗಳೂರಿನ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿಂಟೇಜ್ ಕಾರ್ ರ‍್ಯಾಲಿಗೆ ಚಾಲನೆ ನೀಡಿದರು.

Translate »