ಸಿದ್ದರಾಮಯ್ಯ ದಿನಕ್ಕೆ 4 ಪ್ಯಾಕ್ ಸಿಗರೇಟ್ ಸೇದುತ್ತಿದ್ದರಂತೆ!!
ಮೈಸೂರು

ಸಿದ್ದರಾಮಯ್ಯ ದಿನಕ್ಕೆ 4 ಪ್ಯಾಕ್ ಸಿಗರೇಟ್ ಸೇದುತ್ತಿದ್ದರಂತೆ!!

October 1, 2018

ಮೈಸೂರು:  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದಿನಕ್ಕೆ 4 ಪ್ಯಾಕ್ ಸಿಗರೇಟ್ ಸೇದುತ್ತಿದ್ದರಂತೆ. ಅವರ ಸಿಗರೇಟ್ ಬ್ರ್ಯಾಂಡ್ ಯಾವುದು ಗೊತ್ತಾ? ಅದು ವಿಲ್ಸ್ ಸಿಗರೇಟ್.

ಇದನ್ನು ಸ್ವತಃ ಅವರೇ ಮನಬಿಚ್ಚಿ ಹಂಚಿಕೊಂಡರಲ್ಲದೆ, ಸಿಗರೇಟ್ ಬಿಟ್ಟ ಸಂಗತಿಯನ್ನು ಪ್ರಸ್ತಾಪಿಸಿದ ಅವರು, ದುಶ್ಚಟಗಳನ್ನು ಬಿಡಲು ದೃಢ ಸಂಕಲ್ಪ ಇರಬೇಕು. ಅದೊಂದಿದ್ದರೆ ಯಾವುದು ಕಷ್ಟಸಾಧ್ಯವಲ್ಲ ಎಂದರು. ಸೆನೆಟ್ ಭವನದಲ್ಲಿ ಭಾನುವಾರ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕ್ಯಾನ್ಸರ್ ಬರಲು ಮುಖ್ಯ ಕಾರಣ ತಂಬಾಕು ಎಂದು ಹೇಳಲಾಗಿದೆ. ಕೆಲವರು ಸಿಗರೇಟು ಪ್ಯಾಕೆಟ್ ಮೇಲೆ ಬರೆದಿರುವ ‘ಧೂಮಪಾನ ಕ್ಯಾನ್ಸರ್ ಗೆ ಕಾರಣ’ ಎಂಬುದನ್ನು ಓದುತ್ತಲೇ ಸಿಗರೇಟ್ ಸೇವನೆ ಮಾಡುತ್ತಾರೆ ಎಂದು ವಿಷಾದಿಸಿದರು.

ವಿದ್ಯಾರ್ಥಿದೆಸೆಯಲ್ಲಿ ಹಾಗೂ ವಕೀಲನಾಗಿದ್ದ ವೇಳೆಯಲ್ಲಿ ಸಿಕ್ಕಾಪಟ್ಟೆ ಸಿಗರೇಟ್ ಸೇದುತ್ತಿದ್ದೆ. ದಿನಕ್ಕೆ 4 ಪ್ಯಾಕ್ ಬೇಕಿತ್ತು. ಇದನ್ನು ನೋಡುತ್ತಿದ್ದ ಸ್ನೇಹಿತರು ತಾವುಗಳು ವಿದೇಶಕ್ಕೆ ಹೋಗಿದ್ದಾಗ, ಬಗೆಬಗೆಯ ಸಿಗರೇಟ್ಗಳ ಒಂದು ಪೆಟ್ಟಿಗೆಯನ್ನೇ ತಂದುಕೊಟ್ಟಿದ್ದರು. ಒಂದೇ ತಿಂಗಳಲ್ಲಿ ಇದನ್ನೆಲ್ಲಾ ಸೇದು ಮುಗಿಸಿದ್ದೆ. ಆ ಬಳಿಕ ಇಷ್ಟು ಸಿಗರೇಟು ಸೇದು ಬಿಟ್ಟೆನಲ್ಲ. ನಾನು ಬದುಕುತ್ತೇನೆಯೇ ಎಂಬ ಆತಂಕ ಮನೆ ಮಾಡಿತು.

ಕೊನೆಗೆ ಇನ್ನು ಮುಂದೆ ಸಿಗರೇಟು ಸೇವನೆ ಮಾಡಕೊಡದು ಎಂದು 1987ರ ಆಗಸ್ಟ್ 17ರಂದು ದೃಢ ನಿರ್ಧಾರ ಕೈಗೊಂಡೆ. ಅಂದಿನಿಂದ ಸಿಗರೇಟು ವಾಸನೆ ಕಂಡರೂ ಆಗಲ್ಲ. ಮಾಂಸಾಹಾರ ಸೇವನೆ ಮಾಡಿದಾಗ ಮಾತ್ರ ಬೀಡಾ ತಿನ್ನುತ್ತೇನೆ ಎನ್ನುತ್ತಾ ತಮ್ಮ ಹಾಸ್ಯ ಮಿಶ್ರಿತ ಭಾಷಣದಲ್ಲಿ ದೃಢ ಸಂಕಲ್ಪವಿದ್ದರೆ ದುರಭ್ಯಾಸ ಬಿಡಲು ಸಾಧ್ಯವೆಂಬ ಸಂದೇಶವನ್ನೂ ರವಾನಿಸಿದರು.

Translate »