ದಸರಾ ಗಜ, ಅಶ್ವಪಡೆಗೆ ಸಿಡಿಮದ್ದು ಶಬ್ದ ಸಹಿಸುವ 2ನೇ ಹಂತದ ತಾಲೀಮು
ಮೈಸೂರು

ದಸರಾ ಗಜ, ಅಶ್ವಪಡೆಗೆ ಸಿಡಿಮದ್ದು ಶಬ್ದ ಸಹಿಸುವ 2ನೇ ಹಂತದ ತಾಲೀಮು

October 1, 2018

ಮೈಸೂರು: ನಾಡ ಹಬ್ಬ ದಸರಾ ಮಹೋತ್ಸದಲ್ಲಿ ಪಾಲ್ಗೊಳ್ಳಲಿರುವ ಗಜಪಡೆ ಹಾಗೂ ಅಶ್ವಪಡೆಗೆ ಭಾನುವಾರ ಅರಮನೆಯ ವರಾಹ ಗೇಟ್ ಬಳಿಯಿರುವ ವಾಹನ ನಿಲುಗಡೆಯ ಸ್ಥಳದಲ್ಲಿ ಎರಡನೆ ಹಂತದ ಸಿಡಿಮದ್ದು ಸಿಡಿಸುವ ತಾಲೀಮು ಯಶಸ್ವಿಯಾಗಿ ನಡೆಯಿತು.

ಜಂಬೂ ಸವಾರಿ ಹಾಗೂ ಬನ್ನಿಮಂಟ ಪದ ಪಂಜಿನ ಕವಾಯತ್ ವೇಳೆ ವಿಜಯದ ಸಂಕೇತವಾಗಿ 21 ಸುತ್ತು ಕುಶಾಲತೋಪು ಸಿಡಿಸುವ ವಾಡಿಕೆಯಿರುವ ಹಿನ್ನೆಲೆಯಲ್ಲಿ ಜಂಬೂಸವಾರಿ ಮೆರವಣಿಗೆಯಲ್ಲಿ ಜನ ಸಂದಣಿಯ ನಡುವೆ ಸಾಗಲಿರುವ ಆನೆ ಹಾಗೂ ಕುದುರೆಗಳು ಕುಶಾಲ ತೋಪಿನ ಶಬ್ದಕ್ಕೆ ಹೆದರದಂತೆ ಸಿದ್ಧಗೊಳಿಸುವುದಕ್ಕಾಗಿ ಸಿಡಿ ಮದ್ದಿನ ತಾಲೀಮು ನಡೆಸಲಾಗುತ್ತದೆ.

ಈ ಸಾಲಿನ ಮೊದಲ ಸಿಡಿಮದ್ದು ಸಿಡಿಸುವ ತಾಲೀಮು ಸೆ.27ರಂದು ಮಧ್ಯಾಹ್ನ ನಡೆಸಲಾಗಿತ್ತು. ಇಂದು ನಡೆಸಿದ ಎರಡನೇ ತಾಲೀಮಿನಲ್ಲಿ ಆನೆ ಹಾಗೂ ಕುದುರೆಗಳ ವರ್ತನೆಯಲ್ಲಿ ಸುಧಾರಣೆ ಕಂಡು ಬಂದವು. ಪಿರಂಗಿದಳದ 30 ಮಂದಿ ಸಿಎಆರ್ ಪೊಲೀ ಸರು 5 ಫಿರಂಗಿಗಳ ಮೂಲಕ 4 ಸುತ್ತಿನಲ್ಲಿ 21 ಸಿಡಿಮದ್ದನ್ನು ಸಿಡಿಸುವ ಮೂಲಕ ಗಜ ಪಡೆ ಹಾಗೂ ಅಶ್ವಾರೋಹಿ ಪಡೆಗೆ ಶಬ್ದದ ತಾಲೀಮು ನೀಡಿದರು. ಸಿಡಿಮದ್ದು ಸಿಡಿಸಿ ಆನೆಗಳಿಗೆ ತಾಲೀಮು ನೀಡುವುದಕ್ಕಾಗಿ ವರಾಹ ಗೇಟ್ ಬಳಿಯಿರುವ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲುಗಡೆಯನ್ನು ನಿರ್ಬಂ ದಿಸಲಾಗಿತ್ತು.

ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಅರ್ಜುನ ನೇತೃತ್ವದ 12 ಆನೆಗಳು ಹಾಗೂ ಅಶ್ವಾರೋಹಿ ದಳದ 22 ಕುದುರೆಗಳನ್ನು ಸಾಲಾಗಿ ನಿಲ್ಲಿಸಿ ಬೆಳಗ್ಗೆ 11.15ಕ್ಕೆ ತಾಲೀಮು ಆರಂಭಿಸಲಾಯಿತು. ಮೊದಲ ತಾಲೀಮು ಆಗಿದ್ದರಿಂದ ಮೂರ್ನಾಲ್ಕು ಆನೆಗಳು ಸಿಡಿಮದ್ದಿನ ಶಬ್ದಕ್ಕೆ ಬೆದರಿದವು. ಆ ನಂತರ ನಿಯಂತ್ರಣಕ್ಕೆ ಬಂದವು. 22 ಕುದುರೆಗಳಲ್ಲಿಯೂ ಹಲವು ಕುದುರೆ ಗಳು ಸಿಡಿಮದ್ದಿನ ಶಬ್ದಕ್ಕೆ ಹೆದರಿ ನಂತರ ಸಮಾಧಾನಗೊಂಡವು. ಆನೆಗಳು ಹಾಗೂ ಕುದುರೆಗಳಿಗಾಗಿ ನಡೆಸಿದ ಸಿಡಿಮದ್ದಿನ ತಾಲೀಮನ್ನು ವೀಕ್ಷಿಸುವುದಕ್ಕೆ ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್, ಡಿಸಿಎಫ್ ಸಿದ್ರಾಮಪ್ಪ ಚಳ್ಕಾಪುರೆ, ಡಿಸಿಪಿಗಳಾದ ಬಿ.ವಿ.ಕಿತ್ತೂರ್, ಡಾ.ವಿಷ್ಣುವರ್ಧನ್, ಡಾ.ವಿಕ್ರಮ್ ಅಮ್ಟೆ, ಎಸಿಪಿ ಸುರೇಶ್, ಆರ್‍ಎಫ್‍ಒ ಅನನ್ಯಕುಮಾರ್, ಪಶುವೈದ್ಯ ಡಾ.ಡಿ.ಎನ್.ನಾಗರಾಜು, ಅರಣ್ಯ ಸಿಬ್ಬಂದಿ ಗಳಾದ ಕುಮಾರ್, ರವಿಕುಮಾರ್, ಅಕ್ರಮ್ ಪಾಶ, ರಂಗರಾಜು ಸೇರಿದಂತೆ ಇನ್ನಿತರರು ಆಗಮಿಸಿ, ಆನೆಗಳು ಹಾಗೂ ಕುದುರೆಗಳ ಚಲನವಲನವನ್ನು ವೀಕ್ಷಿಸಿದರು.

ಸುಧಾರಿಸಿವೆ: ಮೊದಲ ಸಿಡಿಮದ್ದು ಸಿಡಿ ಸುವ ತಾಲೀಮಿನ ವೇಳೆ ದಸರಾ ಆನೆ ಗಳಾದ ಚೈತ್ರ, ಪ್ರಶಾಂತ, ದ್ರೋಣ, ಧನಂಜಯ, ಗೋಪಿ ಆನೆಗಳು ತೀವ್ರ ಬೆದರಿದ್ದವು. ದಸರೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಇಂದು ನಡೆಸಿದ ಎರಡನೇ ತಾಲೀಮಿನಲ್ಲಿ ಎರಡು ಕೆಜಿಯಷ್ಟು ಗನ್ ಪೌಡರ್ ನಿಂದ ತಯಾರಿಸಿದ್ದ ಸಿಡಿಮದ್ದನ್ನು ಬಳಸಲಾಯಿತು. ಕಳೆದ ತಾಲೀಮಿನಲ್ಲಿ ಒಂದು ಕೆಜಿ ತೂಕದ ಮದ್ದನ್ನು ಬಳಸಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಶಬ್ದದ ಪ್ರಮಾಣ ಹೆಚ್ಚಾಗಿತ್ತು. ಅಲ್ಲದೆ, ಪಿರಂಗಿಗಳಿಗೆ ಕೆಲವೇ ಮೀಟರ್ ದೂರದಲ್ಲಿ ಆನೆಗಳನ್ನು ನಿಲ್ಲಿಸಲಾಗಿತ್ತು. ಆದರೂ ಮೊದಲ ತಾಲೀಮಿನಲ್ಲಿ ಬೆದರಿದ್ದ ಚೈತ್ರ, ದ್ರೋಣ, ಧನಂಜಯ, ಪ್ರಶಾಂತ ಆನೆಗಳ ವರ್ತನೆಯಲ್ಲಿ ಇಂದು ಸುಧಾರಣೆ ಕಂಡು ಬಂದಿತು. ಇಂದು ನಡೆದ ತಾಲೀಮಿನ ಆರಂಭದಲ್ಲಿ ಮೊದಲ ಸಿಡಿಮದ್ದು ಸಿಡಿಯುತ್ತಿದ್ದಂತೆಯೇ ಚೈತ್ರ ಆನೆ ಹಿಮ್ಮುಖವಾಗಿ ನಿಂತುಕೊಂಡು ಬೇರೆಡೆಗೆ ಹೋಗುವ ಪ್ರಯತ್ನ ಮಾಡಿತು. ಅದನ್ನು ಇತರೆ ಆನೆಗಳ ಮಧ್ಯೆ ನಿಲ್ಲಿಸಿ ನಿಯಂತ್ರಿಸ ಲಾಯಿತು. ನಂತರ ದ್ರೋಣನೂ ಒಮ್ಮೆ ಹಿಮ್ಮುಖವಾಗಿ ನಿಂತು ಸಿಡಿಮದ್ದಿನ ಶಬ್ದ ಆಲಿಸಲು ನಿರಾಕರಿಸಿದನು.

ಮತ್ತೊಂದು ಬದಿಯಲ್ಲಿದ್ದ ಇದೇ ಮೊದಲ ಬಾರಿಗೆ ದಸರೆಯಲ್ಲಿ ಪಾಲ್ಗೊಳ್ಳಲು ಬಂದಿರುವ ಧನಂಜಯ ಆನೆಯು ಶಬ್ದಕ್ಕೆ ಹೆದರಿತು. ಅಲ್ಲದೆ ತಾಲೀಮು ಮುಗಿಯುವವರೆಗೂ ತಲೆ ತಗ್ಗಿಸಿ ನಿಲ್ಲುವ ಮೂಲಕ ಸಿಡಿಮದ್ದಿನ ಶಬ್ದಕ್ಕೆ ಒಗ್ಗಿ ಕೊಳ್ಳುವ ಪ್ರಯತ್ನ ಮಾಡಿತು.

Translate »