ದೇವಾಲಯಗಳ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಲು ಡಿಸಿ ಸೂಚನೆ
ಚಾಮರಾಜನಗರ

ದೇವಾಲಯಗಳ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಲು ಡಿಸಿ ಸೂಚನೆ

October 24, 2020

ಚಾಮರಾಜನಗರ, ಅ.23-ಜಿಲ್ಲೆಯ ಪ್ರಸಿದ್ಧ ದೇವಾಲಯಗಳ ಬಾಕಿ ಅಭಿವೃದ್ಧಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಧಾರ್ಮಿಕ ಪರಿಷತ್ತು ರಚನೆಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಯಳಂದೂರು ತಾಲೂಕಿನ ಬಿಳಿಗಿರಿರಂಗನಾಥಸ್ವಾಮಿ ದೇವಾಲಯದ ಬ್ರಹ್ಮರಥ ನಿರ್ಮಾಣ ಹಾಗೂ ಬಿಳಿಗಿರಿ ಭವನ ವಸತಿ ಗೃಹ ಕಾಮಗಾರಿಯನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು. ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರದ ರಂಗನಾಥಸ್ವಾಮಿ ಮತ್ತು ಸಮೂಹ ದೇವಾಲಯಗಳ ಅಭಿವೃದ್ಧಿ ಹಾಗೂ ವಸತಿ ಗೃಹಗಳ ನಿರ್ಮಾಣ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಮುಜರಾಯಿ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ನಗರದ ಚಾಮರಾಜೇಶ್ವರ ದೇವಾಲಯದ ಬ್ರಹ್ಮರಥ ಹಾಗೂ ರಥ ನಿಲುಗಡೆ ಕೊಠಡಿಯ ಕಾಮಗಾರಿಯನ್ನು ವೇಗಗೊಳಿಸಿ. ವಿಳಂಬಕ್ಕೆ ಅವಕಾಶ ಸಲ್ಲದು. ಏಪ್ರಿಲ್ ಅಂತ್ಯದೊಳಗೆ ಈ ಎಲ್ಲಾ ಕೆಲಸ ಮುಗಿಸಬೇಕು. ಜಿಲ್ಲೆಯಲ್ಲಿ ಮುಜರಾಯಿ ಇಲಾಖೆಗೆ ಒಳಪಡುವಂತಹ ಶತಮಾನ ಕಂಡ 185, ಖಾಸಗಿ 563 ದೇವಾಲಯಗಳನ್ನು ಅಭಿವೃದ್ಧಿಪಡಿಸುವ ಸಲುವಾಗಿ ಈಗಾಗಲೇ ಸೂಚಿಸಿರುವಂತೆ ತುರ್ತಾಗಿ ಪ್ರಸ್ತಾವನೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಗುಂಡ್ಲುಪೇಟೆ ತಾಲೂಕಿನ ಕಣ್ಣೇಗಾಲ ಗ್ರಾಮದ ಹಿಮವದ್ ಗೋಪಾಲಸ್ವಾಮಿ ದೇವಾಲಯದಲ್ಲಿ ಭಕ್ತಾದಿಗಳಿಗೆ ಮೂಲ ಸೌಕರ್ಯ ಹಾಗೂ ದೇವಾಲಯದ ಅಭಿವೃದ್ಧಿಯ ಬಗ್ಗೆ ಅಧಿಕಾರಿಗಳು ಪರೀಶೀಲಿಸಬೇಕು. ಕೊಳ್ಳೇಗಾಲ ಪಟ್ಟಣದಲ್ಲಿ ಮರಳೇಶ್ವರಸ್ವಾಮಿ ದೇವಾಲಯದಲ್ಲಿರುವ ಅಂಗಡಿ ಮಳಿಗೆಗಳ ಬಾಕಿ ಬಾಡಿಗೆ ಬಾಬ್ತನ್ನು ಪಡೆದು ದೇವಾಲಯದ ಖಾತೆÀಗೆ ಜಮಾ ಮಾಡಬೇಕು. ಸದರಿ ಅಂಗಡಿ ಮಳಿಗೆಗಳಿಗೆ ಹೊಸದಾಗಿ ಬಾಡಿಗೆ ನಿಗದಿಪಡಿಸಲು ಶೀಘ್ರವಾಗಿ ಟೆಂಡರ್ ಕರೆಯುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ ಸಲಹೆ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್.ಆನಂದ್, ಕೊಳ್ಳೇಗಾಲ ಉಪವಿಭಾಗಾಧಿಕಾರಿ ಡಾ.ಗಿರೀಶ್ ದಿಲೀಪ್ ಬಡೋಲೆ, ಲೋಕೋಪಯೋಗಿ ಎಂಜಿನಿಯರ್ ಸುರೇಂದ್ರ, ತಹಸೀಲ್ದಾರ್ ಚಿದಾನಂದ ಗುರುಸ್ವಾಮಿ, ನಂಜುಂಡಯ್ಯ, ಸುದರ್ಶನ್, ಬಿಳಿಗಿರಿರಂಗನಾಥಸ್ವಾಮಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಸತೀಶ್ ಹಾಗೂ ಇತರರು ಸಭೆಯಲ್ಲಿದ್ದರು.

Translate »