ಮೈಸೂರು, ಅ.22(ಎಂಟಿವೈ)- ಕೊರೊನಾ ಹಿನ್ನೆಲೆಯಲ್ಲಿ ಸರಳ, ಸಾಂಪ್ರದಾಯಿಕ ಆಚರಣೆಗೆ ಸೀಮಿತಗೊಂಡಿರುವ ಪ್ರಸಕ್ತ ಸಾಲಿನ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯ ಪೂರ್ಣ ತಾಲೀಮು ಗುರು ವಾರ ಅರಮನೆ ಆವರಣದಲ್ಲಿ ನಡೆಯಿತು.
ಚಿನ್ನದ ಅಂಬಾರಿ ಹೊರುವ ಅಭಿಮನ್ಯು, ಕುಮ್ಕಿ ಆನೆಗಳಾದ ಕಾವೇರಿ ಮತ್ತು ವಿಜಯ ಜತೆ ಗಾಂಭಿರ್ಯ ವಾಗಿ ಹೆಜ್ಜೆ ಹಾಕಿತು. ಆ ಮೂಲಕ ಜಂಬೂ ಸವಾರಿಗೆ ತಾನು ಸಜ್ಜಾಗಿರುವ ಸಂದೇಶ ನೀಡಿತು. ಇದರೊಂದಿಗೆ 2 ತುಕಡಿಗಳಲ್ಲಿ ಎಸಿಪಿ ನಾಗರಾಜು ನೇತೃತ್ವದಲ್ಲಿ 30 ಕುದುರೆಗಳು ಪಾಲ್ಗೊಂಡಿದ್ದವು. ಪೊಲೀಸ್ ಬ್ಯಾಂಡ್ ವಾದನದ ಹಿಮ್ಮೇಳದೊಂ ದಿಗೆ ದಸರಾ ಆನೆ, ಅಶ್ವ್ವಾರೋಹಿ ದಳದ ಕುದುರೆ ಗಳು ಮೆರವಣಿಗೆ ತಾಲೀಮು ನಡೆಸಿದವು. ಇಂದಿನ ತಾಲೀಮು ಮೊದಲನೆಯದಾದ್ದರಿಂದ ಅಭಿಮನ್ಯು ವಿಗೆ ಭಾರ ಹೊರಿಸಿರಲಿಲ್ಲ.
ಸೆಲ್ಯೂಟ್: ಜಂಬೂಸವಾರಿ ದಿನ ಗಣ್ಯರು ಅಂಬಾರಿಗೆ ಪುಷ್ಪಾರ್ಚನೆ ಮಾಡುವ ಸ್ಥಳದಲ್ಲಿ ಹಾಕಿದ್ದ ವೇದಿಕೆಯಲ್ಲಿ ಚೆನ್ನಪಟ್ಟಣದ ಪೊಲೀಸ್ ತರಬೇತಿ ಶಾಲೆಯ ಎಸ್‍ಪಿ ಶೈಲೇಂದ್ರ, ಅರಮನೆ ಭದ್ರತಾಪಡೆ ಎಸಿಪಿ ಚಂದ್ರಶೇಖರ್, ಪಶುವೈದ್ಯ ಡಾ.ಡಿ.ಎನ್.ನಾಗರಾಜು ಅಂಬಾರಿ ಆನೆ ಅಭಿಮನ್ಯುವಿನ ಮೇಲೆ ಪುಷ್ಪಾರ್ಚನೆ ತಾಲೀಮು ನಡೆಸಿದರು. ಈ ವೇಳೆ ಪೊಲೀಸ್ ಬ್ಯಾಂಡ್ ರಾಷ್ಟ್ರಗೀತೆ ನುಡಿಸಲಾಯಿತು. ಗಜ ಪಡೆ ಸೊಂಡಿಲೆತ್ತಿ ಸೆಲ್ಯೂಟ್ ಹೊಡೆದವು. ಈ ಸಂದರ್ಭ ಅರಮನೆ ಭದ್ರತಾ ಮಂಡಳಿ ಇನ್ಸ್‍ಪೆಕ್ಟರ್‍ಗಳಾದ ಆನಂದ್ ಮತ್ತು ಗಂಗಾಧರ್ ನೇತೃತ್ವದಲ್ಲಿ ಸಮವಸ್ತ್ರದಲ್ಲಿದ್ದ ಪೊಲೀಸ್ ಪಡೆ ಗೌರವ ವಂದನೆ ಸಮರ್ಪಿಸಿತÀು. ಶುಕ್ರವಾರವೂ ತಾಲೀಮು ನಡೆಯಲಿದೆ. ಶನಿವಾರ ಬೆಳಗ್ಗೆ ಮರದ ಅಂಬಾರಿಯಲ್ಲಿ 750 ಕೆಜಿ ಭಾರ ಹೊರಿಸಿ ಅಂತಿಮ ತಾಲೀಮು ನಡೆಸಲಾಗುತ್ತದೆ. ಅ.25ರಂದು ಆಯುಧ ಪೂಜೆ ಇರುವುದರಿಂದ ಗಜಪಡೆಗೆ ವಿಶ್ರಾಂತಿ. ಪೌಷ್ಟಿಕ ಆಹಾರ ನೀಡಿ ಆನೆಗಳನ್ನು ಮಾರನೇ ದಿನದ ಜಂಬೂಸವಾರಿಗೆ ಸಿದ್ಧಗೊಳಿಸಲಾಗುತ್ತದೆ.