ಬ್ಲೇಡ್ ಕಂಪನಿಗಳಿಗೆ ಕಡಿವಾಣ ಹಾಕಲು ಹೊಸ ಕಾಯ್ದೆ
ಮೈಸೂರು

ಬ್ಲೇಡ್ ಕಂಪನಿಗಳಿಗೆ ಕಡಿವಾಣ ಹಾಕಲು ಹೊಸ ಕಾಯ್ದೆ

October 23, 2020

ಬೆಂಗಳೂರು,ಅ.22(ಕೆಎಂಶಿ)-ಹೆಚ್ಚಿನ ಬಡ್ಡಿ ಆಸೆ ತೋರಿಸಿ, ಸಾರ್ವ ಜನಿಕರಿಗೆ ವಂಚಿಸುವ ಕಂಪನಿ ಅಥವಾ ಸಂಸ್ಥೆಗಳಿಗೆ ಕಡಿವಾಣ ಹಾಕಲು ಹೊಸ ಕಾಯ್ದೆ ಜಾರಿಗೆ ತರಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಂಡಿದ್ದು, ಬಡ್ಡಿ ಹಾಗೂ ಲಾಭ ನೀಡುವ ಆಸೆ ಹುಟ್ಟಿಸಿ, ಜನರನ್ನು ವಂಚಿ ಸುವ ಕಂಪನಿಗಳು ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿವೆ. ಬಡ್ಡಿಯ ಆಸೆಗಾಗಿ ಸಾರ್ವಜನಿಕರು ತಮ್ಮಲ್ಲಿರುವ ಹಣವನ್ನು ಹೂಡಿ, ನಂತರ ಕಂಪನಿಗಳಿಂದ ವಂಚಿತರಾಗುತ್ತಿದ್ದಾರೆ. ಇದಕ್ಕೆ ಕೊನೆಗಾಣಿಸಲು ಸಂಪುಟ ಸಭೆಯಲ್ಲಿ ಸವಿಸ್ತಾರವಾಗಿ ಚರ್ಚೆ ನಡೆದು, ಸಾರ್ವಜನಿಕ ರಿಂದ ಠೇವಣಿ ಸಂಗ್ರಹಿಸುವ ಯೋಜನೆಯನ್ನು ನಿಷೇಧಿಸಿ, ಹೊಸ ನಿಯಮಗಳನ್ನು ರೂಪಿಸಲು ಸಭೆ ತೀರ್ಮಾನಿಸಿದೆ.

ಹೊಸ ನಿಯಮಗಳನ್ನು ರೂಪಿಸುವ ಉದ್ದೇಶದ ಕರ್ನಾಟಕ ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ನಿಯಮಗಳು 2020ಕ್ಕೆ ಇಂದು ನಡೆದ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಖಾಸಗಿ ಸಂಸ್ಥೆಗಳು ಠೇವಣಿ ಸಂಗ್ರಹಿಸಿ ಸಾರ್ವಜನಿಕರನ್ನು ವಂಚಿಸುವು ದನ್ನು ತಡೆಗಟ್ಟುವ ಬಗ್ಗೆ ಇದೇ ವೇಳೆ ಗಂಭೀರ ಚರ್ಚೆ ನಡೆಸಲಾಯಿತು. ಇತ್ತೀಚೆಗೆ ಐಎಂಎ ಸಾರ್ವಜನಿಕರಿಂದ ಠೇವಣಿ ಸಂಗ್ರಹಿಸಿ ಬಹುಕೋಟಿ ರೂ. ವಂಚನೆ ಮಾಡಿದ ಆರೋಪ ಬೆಳಕಿಗೆ ಬಂದಿತ್ತು. ಇದರಿಂದ ಸಾವಿರಾರು ಕುಟುಂಬಗಳು ವಂಚನೆಗೆ ಒಳಗಾಗಿದ್ದವು. ಇದೇ ರೀತಿ ಹಲವು ಕಂಪನಿಗಳು ಹೆಚ್ಚಿನ ಬಡ್ಡಿ ನೀಡುವ ಆಸೆ ತೋರಿಸಿ ಸಾರ್ವಜನಿಕರನ್ನು ವಂಚಿಸಿದ್ದ ಆರೋಪಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಹೊಸ ಕಾಯ್ದೆಯನ್ನು ತರಲು ಸಂಪುಟ ಒಪ್ಪಿಗೆ ನೀಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಮುಂಬರುವ ಅಧಿವೇಶನದಲ್ಲಿ ವಿಧೇಯಕವನ್ನು ಮಂಡಿಸಿ ಕಾಯ್ದೆ ತರಲು ಸಂಪುಟ ಸಮ್ಮತಿಸಿದೆ. ರೈತರಿಂದ ಹಾಗೂ ಪ್ರತಿಪಕ್ಷಗಳಿಂದ ತೀವ್ರ ವಿರೋಧಕ್ಕೆ ಒಳಗಾಗಿದ್ದ 2020ರ ಕರ್ನಾಟಕ ಭೂ ಸುಧಾ ರಣೆಗಳ ತಿದ್ದುಪಡಿ ವಿಧೇಯಕಕ್ಕೂ ಸಂಪುಟ ಸಭೆ ಅನುಮೋದನೆ ನೀಡಿದೆ. ಭೂ ಸುಧಾರಣೆಗಳ ತಿದ್ದುಪಡಿ ವಿಧೇಯಕವನ್ನು ಪ್ರತಿಪಕ್ಷ ಗಳು ವಿಧಾನಮಂಡಲದ ಅಧಿವೇಶನದಲ್ಲಿ ತೀವ್ರವಾಗಿ ವಿರೋಧಿ ಸಿದ್ದವು. ಇದರಿಂದ ಪರಿಷತ್ತಿನಲ್ಲಿ ಅಂಗೀಕಾರ ಪಡೆಯಲು ಸಾಧ್ಯ ವಾಗಲಿಲ್ಲ. ಮುಂಬರುವ ಅಧಿವೇಶನದವರೆಗೂ ಕಾಯ್ದೆಯನ್ನು ಉಳಿಸಿಕೊಳ್ಳುವ ಸಲುವಾಗಿ ಮತ್ತೆ ಸುಗ್ರೀವಾಜ್ಞೆ ಜಾರಿಗೊಳಿಸಲು ಸಭೆ ಸಮ್ಮತಿಸಿದೆ. ಕೇಂದ್ರೀಯ ಪ್ಲಾಸ್ಟಿಕ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆಯ ಅತ್ಯಾಧುನಿಕ ಪಾಲಿಮರ್ ವಿನ್ಯಾಸ ಮತ್ತು ಅಭಿವೃದ್ಧಿ ಸಂಶೋಧನಾ ಪ್ರಯೋಗಾಲಯವನ್ನು ಬೆಂಗಳೂರಿನಲ್ಲಿ ಸ್ಥಾಪಿಸಲು ಇದರ ಕಟ್ಟಡ ನಿರ್ಮಾಣಕ್ಕೆ 19.04 ಕೋಟಿ ರೂ.ಗಳನ್ನು ನೀಡಿದೆ. ಪಶ್ಚಿಮ ವಾಹಿನಿ ಯೋಜನೆಯಡಿ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿಳಿಯೂರು ಗ್ರಾಮದ ಬಳಿ 46.70 ಕೋಟಿ ರೂ. ವೆಚ್ಚದಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸಲು ಅನುಮೋದನೆ ನೀಡಲಾಗಿದೆ. ರಾಷ್ಟ್ರೀಯ ಚಂಡಮಾರುತ ಅಪಾಯ ಉಪಶಮನ ಯೋಜನೆಯಡಿಯಲ್ಲಿ ಕರಾವಳಿಯ ಮೂರು ಜಿಲ್ಲೆಗಳಿಗೆ ಹವಾಮಾನ ಮುನ್ಸೂಚನೆ ಮತ್ತು ಪ್ರಸರಣೆ ಪದ್ಧತಿಯನ್ನು 26.92 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಅನುಮತಿ ನೀಡಲಾಗಿದೆ. ಕರ್ನಾಟಕ ರಾಜ್ಯ ನಾಗರಿಕ ಸೇವಾ (ನಡತೆ)ನಿಯಮಗಳು-2020ಕ್ಕೆ ಅನುಮೋದನೆ ನೀಡಲಾಗಿದೆ. ಕರ್ನಾಟಕ ನಾಗರಿಕ ಸೇವಾ (ಶೀಘ್ರಲಿಪಿಗಾರರ ಮತ್ತು ಬೆರಳಚ್ಚುಗಾರರ ಹುದ್ದೆಗಳ ನೇಮಕಾತಿ)ತಿದ್ದುಪಡಿ ನಿಯಮಗಳ -2020, ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಹಾಗೂ ಮೇಲ್ಮನವಿ) ತಿದ್ದುಪಡಿ ನಿಯಮಗಳು-2020ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಅದೇ ರೀತಿ, ಸಚಿವಾಲಯದ ನಿವೃತ್ತ ಆಪ್ತ ಕಾರ್ಯದರ್ಶಿ ಜಿ.ರವಿ ಅವರನ್ನು ರಾಜ್ಯಪಾಲರ ಸಚಿವಾಲಯದ ಆಪ್ತ ಕಾರ್ಯದರ್ಶಿ ಹುದ್ದೆಗೆ 2020, ಏ.2ರಿಂದ 2020 ಜೂ. 6ರವರೆಗೆ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗಿರುವ ಕ್ರಮವನ್ನು ಸ್ಥಿರೀಕರಿಸಲಾಗಿದೆ.

 

 

Translate »