ಯಳಂದೂರು ತಾಲೂಕು ಕಚೇರಿಗೆ ಡಿಸಿ ದಿಢೀರ್ ಭೇಟಿ: ಪರಿಶೀಲನೆ
ಚಾಮರಾಜನಗರ

ಯಳಂದೂರು ತಾಲೂಕು ಕಚೇರಿಗೆ ಡಿಸಿ ದಿಢೀರ್ ಭೇಟಿ: ಪರಿಶೀಲನೆ

February 29, 2020

ಯಳಂದೂರು,ಫೆ.28-ಇಲ್ಲಿನ ತಾಲೂಕು ಕಚೇರಿ ಸೇರಿದಂತೆ ಇತರೆ ಕಚೇರಿಗಳಿಗೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಶುಕ್ರವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ರವಿ ಅಲ್ಲಿನ ವ್ಯವಸ್ಥೆಗಳನ್ನು ವೀಕ್ಷಿಸಿದರು. ನಂತರ ಪಡಸಾಲೆಗೆ ಭೇಟಿ ಕೊಟ್ಟು ನಾಗರಿಕರಿಗೆ ಕಲ್ಪಿಸಿರುವ ಸೌಲಭ್ಯಗಳನ್ನು ಪರಿಶೀಲಿಸಿ ಪಡಸಾಲೆಯಲ್ಲಿ ಕೈಗೊಳ್ಳಬೇಕಿರುವ ಆಧುನೀಕರಣ ವ್ಯವಸ್ಥೆಗೆ ಅಗತ್ಯವಿರುವ ಅಂದಾಜು ವೆಚ್ಚವನ್ನು ತಯಾರಿಸಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸೌಲಭ್ಯ ಬಯಸಿ ಬರುವ ಸಾರ್ವಜನಿಕರಿಗೆ ಮೂಲಭೂತವಾಗಿ ಕುಡಿಯುವ ನೀರು, ಆಸನಗಳು, ಶೌಚಾಲಯ ಇನ್ನಿತರ ಅವಶ್ಯಕ ವ್ಯವಸ್ಥೆಗಳನ್ನು ಒದಗಿಸಲು ಅಗತ್ಯ ಏರ್ಪಾಡು ಮಾಡುವಂತೆ ನಿರ್ದೇಶನ ನೀಡಿದರು. ಕಚೇರಿಗೆ ಬಂದಿದ್ದ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದ ಜಿಲ್ಲಾಧಿಕಾರಿಯವರು ಶೀಘ್ರವಾಗಿ ಕೆಲಸ ಕಾರ್ಯಗಳನ್ನು ನಿರ್ವಹಿಸಿ ಅರ್ಜಿ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಗೂ ಭೇಟಿ ನೀಡಿ ಪರಿಶೀಲಿಸಿದ ಅವರು, ಉಪನೋಂದಣಾಧಿಕಾರಿ ಕಚೇರಿಗೂ ತೆರಳಿ ಅಲ್ಲಿನ ವ್ಯವಸ್ಥೆಗಳನ್ನು ವೀಕ್ಷಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಸೂಚನೆಗಳನ್ನು ನೀಡಿದರು.

ಕಚೇರಿಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕು. ಅನುಪಯುಕ್ತ ವಸ್ತುಗಳನ್ನು ಬೇರ್ಪಡಿಬೇಕು. ಉತ್ತಮ ಸೌಲಭ್ಯವನ್ನು ನಾಗರಿಕರಿಗೆ ಒದಗಿಸಬೇಕು. ಬೇಸಿಗೆ ಸಮೀಪಿಸಿರುವ ಹಿನ್ನಲೆಯಲ್ಲಿ ನಾಗರಿಕರಿಗೆ ಒದಗಿಸಬೇಕಿರುವ ಸೌಕರ್ಯಗಳನ್ನು ಸಮರ್ಪಕ ವಾಗಿ ತಲುಪಿಸಲು ಮುಂದಾಗಬೇಕು ಎಂದು ತಿಳಿಸಿದರು.ಈ ವೇಳೆ ತಹಶೀಲ್ದಾರ್ ಜೆ.ಮಹೇಶ್, ಉಪ ತಹಶೀಲ್ದಾರ್ ನಂಜಯ್ಯ ಇತರೆ ಅಧಿಕಾರಿಗಳಿದ್ದರು.

Translate »