ಇಂದಿನಿಂದ ದಕ್ಷಿಣಕಾಶಿಯಲ್ಲಿ ಅದ್ಧೂರಿ ಅಕ್ಷರ ಜಾತ್ರೆ 17ನೇ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆ ಪೂರ್ಣ
ಮೈಸೂರು

ಇಂದಿನಿಂದ ದಕ್ಷಿಣಕಾಶಿಯಲ್ಲಿ ಅದ್ಧೂರಿ ಅಕ್ಷರ ಜಾತ್ರೆ 17ನೇ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆ ಪೂರ್ಣ

February 29, 2020

ನಂಜನಗೂಡು, ಫೆ.18(ರವಿ)-ಶನಿವಾರ(ಫೆ.29) ಹಾಗೂ ಭಾನುವಾರ(ಮಾ.1) ನಡೆಯುವ 17ನೇ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಸಾಹಿತ್ಯಾಸಕ್ತರನ್ನು ಸ್ವಾಗತಿಸಲು ದಕ್ಷಿಣಕಾಶಿ, ಗರಳಪುರಿ ಕ್ಷೇತ್ರ ಸಜ್ಜಾಗಿದೆ.

1994, 2013 ನಂತರ ಮೂರನೇ ಬಾರಿಗೆ 17ನೇ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಆತಿಥ್ಯವಹಿಸುತ್ತಿರುವ ನಂಜನಗೂಡು, ಕನ್ನಡದ ಕಂಪು ಬೀರಲು ಸಜ್ಜುಗೊಳ್ಳುತ್ತಿದೆ. 17ನೇ ಜಿಲ್ಲಾ ಸಮ್ಮೇಳನಾಧ್ಯಕ್ಷರಾಗಿ ನಂಜನಗೂಡಿನವರೇ ಆದ ಸಾಹಿತಿ ಟಿ.ಎಸ್.ರಾಜಪ್ಪ ಆಯ್ಕೆಗೊಂಡಿರುವುದು ಮತ್ತೊಂದು ವಿಶೇಷ. ಸಮ್ಮೇಳನವನ್ನು ರಾಷ್ಟ್ರಕವಿ ಕುವೆಂಪು ಸುಪುತ್ರಿ, ಲೇಖಕಿ ತಾರಿಣಿ ಚಿದಾನಂದಗೌಡ ಉದ್ಘಾಟಿಸುವರು.

ಸಮ್ಮೇಳನದ ಯಶಸ್ವಿಗಾಗಿ ಟೊಂಕಕಟ್ಟಿ ನಿಂತಿರುವ ಸಂಸದ ವಿ.ಶ್ರೀನಿವಾಸಪ್ರಸಾದ್ ಅಧ್ಯಕ್ಷತೆಯಲ್ಲಿ ಈಗಾಗಲೇ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ರೂಪು ರೇಷೆ ಸಿದ್ಧಪಡಿಸುವ ಮೂಲಕ ಇಲಾಖಾವಾರು ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ಸ್ವಾಗತ ಸಮಿತಿ ಅಧ್ಯಕ್ಷರೂ ಆಗಿರುವ ಶಾಸಕ ಬಿ.ಹರ್ಷವರ್ಧನ್ ನೇತೃತ್ವದಲ್ಲಿ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನುಡಿ ಜಾತ್ರೆಗೆ ಆಗಮಿಸುವ ಸಾವಿರಾರು ಜನರಿಗೆ ಊಟೋಪಚಾರ, ವಸತಿ ವ್ಯವಸ್ಥೆ ಕಲ್ಪಿಸುವಲ್ಲಿ ಕನ್ನಡ ಸಾಹಿತ್ಯ ಪರಿಷತ್ ವಿವಿಧ ಉಪಸಮಿತಿಗಳನ್ನು ನೇಮಕ ಮಾಡಿಕೊಂಡು ಸಿದ್ಧತೆ ಕೈಗೊಂಡಿದೆ.

ಸಿಂಗಾರಗೊಂಡ ನಂ.ಗೂಡು: ಸಮ್ಮೇಳನಾಧ್ಯಕ್ಷರೊಂದಿಗೆ ಕಲಾತಂಡಗಳ ಮೆರವಣಿಗೆ ಸಾಗುವ ಮಾರ್ಗದಲ್ಲಿ ಕೆಂಪು, ಹಳದಿ ಬಣ್ಣದ ಬಂಟಿಂಗ್ಸ್, ತಿಳಿರು-ತೋರಣ ಕಟ್ಟಿದ್ದು, ನಗರದ ಅಂದ ಹೆಚ್ಚಿಸಲಾಗಿವೆ. ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಸಂಕೀರ್ಣ, ಸರ್ಕಾರಿ ಕಟ್ಟಡ, ಪ್ರಮುಖ ವೃತ್ತಗಳು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ.

ಪ್ರಚಾರ ರಥ ಸಂಚಾರ: ಇನ್ನು ಸಮ್ಮೇಳನಕ್ಕೆ ಜನಾಕರ್ಷಣೆ ಹೆಚ್ಚಿಸುವ ನಿಟ್ಟಿನಲ್ಲಿ ಸಂಸದ ವಿ.ಶ್ರೀನಿವಾಸಪ್ರಸಾದ್ ಪ್ರಚಾರ ರಥಕ್ಕೆ ಬುಧವಾರ ಚಾಲನೆ ನೀಡಿದ್ದು, ತಾಲೂಕಿನ ಪ್ರಮುಖ ಗ್ರಾಮಗಳಲ್ಲಿ ಸಂಚರಿಸುವ ಪ್ರಚಾರ ರಥ ಸಮ್ಮೇಳನದ ಬಗ್ಗೆ ಅರಿವು ಮೂಡಿಸಿದೆ.

ಸಮ್ಮೇಳನಕ್ಕೆ ವೇದಿಕೆಗಳು ಸಜ್ಜು: ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಕಲಾಮಂದಿರಕ್ಕೆ ನಂಜನಗೂಡು ಶ್ರೀಕಂಠಶಾಸ್ತ್ರಿ ಮಹಾಮಂಟಪ, ಮುಖ್ಯ ವೇದಿಕೆಗೆ ಹಿರಿಯ ಸಾಹಿತಿ ಮುಳ್ಳೂರ ನಾಗರಾಜ ಹಾಗೂ ಮಹಾದ್ವಾರಕ್ಕೆ ಕಳಲೆ ನಂಜರಾಜ ಹೆಸರು ನಾಮಕರಣ ಮಾಡಲಾಗಿದೆ.

ಇನ್ನು ಸಮ್ಮೇಳನದ ಅಂಗವಾಗಿ ಚಿತ್ರಕಲಾ ಪ್ರದರ್ಶನ, ಪುಸ್ತಕ ಪ್ರದರ್ಶನ ಮತ್ತು ಮಾರಾಟ, ಸಾಂಸ್ಕøತಿಕ ಕಾರ್ಯಕ್ರಮಗಳು, ಜನಪದ ಗಾಯನ ಸೇರಿದಂತೆ ಹಲವು ಬಗೆಯ ಕಾರ್ಯಕ್ರಮಗಳು ಸಮ್ಮೇಳನದಲ್ಲಿ ಮೇಳೈಸಲಿವೆ.

ವಿಚಾರ ಗೋಷ್ಠಿಗಳು: ಇನ್ನು ಸಮ್ಮೇಳನದಲ್ಲಿ ಪ್ರಸ್ತುತ ಕಾಲಮಾನದಲ್ಲಿ ದೃಶ್ಯ ಮಾಧ್ಯಮಗಳ ಸಾಮಾಜಿಕ ಜವಾಬ್ದಾರಿ, ನಂಜನಗೂಡು ತಾಲೂಕು ದರ್ಶನ, ಕೃಷಿ-ನೀರಾವರಿ ಸವಾಲು, ದಲಿತ ಸಾಹಿತ್ಯದ ಆಶಯ, ಮಹಿಳೆಯರ ಸಾಮಾಜಿಕ ಸವಾಲು ಸೇರಿದಂತೆ ನಾನಾ ಆಯಾಮಗಳಲ್ಲಿ ವಿಚಾರಗೋಷ್ಠಿಗೆ ತೆರೆದುಕೊಂಡಿರುವ 17ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಪ್ರಚಲಿತ ವಿದ್ಯಮಾನಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನಕ್ಕೆ ಮುಂದಾಗಿದೆ.

ಮೂಲ ಸೌಕರ್ಯಕ್ಕೆ ಆದ್ಯತೆ: ಸಮ್ಮೇಳನಕ್ಕೆ ಆಗಮಿಸುವವರಿಗೆ ದೇವಾಲಯದ ದಾಸೋಹ ಭವನದಲ್ಲಿ ಊಟೋಪಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಗಣ್ಯರಿಗಾಗಿ ದೇವಾಲಯದ ಸಂಕೀರ್ಣದಲ್ಲಿರುವ ವಸತಿಗೃಹಗಳಲ್ಲಿ ವಾಸ್ತವ್ಯಕ್ಕೆ ಅನುವು ಮಾಡಲಾಗಿದೆ.
ಒಟ್ಟಾರೇ ಅಕ್ಷರ ಜಾತ್ರೆಗೆ ನಂಜನಗೂಡು ನವವಧುವಿನಂತೆ ಸಿಂಗಾರಗೊಂಡಿದ್ದು. ಸಾಹಿತ್ಯಾಕ್ಷರನ್ನು ಕೈಬೀಸಿ ಕರೆಯುತ್ತಿದೆ.

Translate »