ಶಿಕ್ಷಣ ಸಚಿವರ ಪಚ್ಚೆದೊಡ್ಡಿ ಶಾಲಾ ವಾಸ್ತವ್ಯ ಫಲಶೃತಿ: ಕಾಡಂಚಿನ ಗ್ರಾಮಸ್ಥರ ಹಲವು ಬೇಡಿಕೆಗಳ ಈಡೇರಿಕೆ
ಮೈಸೂರು

ಶಿಕ್ಷಣ ಸಚಿವರ ಪಚ್ಚೆದೊಡ್ಡಿ ಶಾಲಾ ವಾಸ್ತವ್ಯ ಫಲಶೃತಿ: ಕಾಡಂಚಿನ ಗ್ರಾಮಸ್ಥರ ಹಲವು ಬೇಡಿಕೆಗಳ ಈಡೇರಿಕೆ

February 29, 2020

ಹನೂರು,ಫೆ.28(ಸೋಮ)-ತಾಲೂಕಿನ ಕಾಡಂಚಿನ ಗ್ರಾಮ ಪಚ್ಚೆದೊಡ್ಡಿಯಲ್ಲಿ ಫೆ.10ರಂದು ಪ್ರಾಥಮಿಕ, ಪ್ರೌಢಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಶಾಲಾ ವಾಸ್ತವ್ಯ ಕೈಗೊಂಡಿದ್ದ ಸಂದರ್ಭ ಗ್ರಾಮಸ್ಥರು ಮುಂದಿಟ್ಟಿದ್ದ ಹಲವು ಬೇಡಿಕೆಗಳನ್ನು ಸಚಿವರು ಈಡೇರಿಸಿದ್ದಾರೆ.

ಕಾಡಂಚಿನ ಪಚ್ಚೆದೊಡ್ಡಿ ಗ್ರಾಮದಿಂದ 6 ರಿಂದ 10ನೇ ತರಗತಿ ವರೆಗಿನ ಮಕ್ಕಳು ಪ್ರತಿದಿನ ಕಾಡಿನಲ್ಲಿ 10 ಕಿಲೋ ಮೀ.ನಷ್ಟು ನಡೆದುಕೊಂಡೇ ಶಾಲೆಗೆ ಹೋಗಿ ಬರಬೇಕಿರುವುದರಿಂದ ವಾಹ ನದ ವ್ಯವಸ್ಥೆ ಮಾಡುವಂತೆ ಗ್ರಾಮಸ್ಥರು ಕೋರಿದ್ದರು. ಇದಕ್ಕೆ ಸ್ಪಂದಿಸಿದ ಜಿಲ್ಲಾ ಉಸ್ತುವಾರಿ ಸಚಿವರು ಶಾಲಾ ಮಕ್ಕಳಿಗೆ ವಾಹನ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.

ಈ ಹಿನ್ನೆಲೆಯಲ್ಲಿ ಮಕ್ಕಳು ಶಾಲೆಗೆ ಹೋಗಿ ಬರಲು ಮಲೆ ಮಹದೇಶ್ವರ ವನ್ಯಜೀವಿ ಧಾಮದ ಡಿಸಿಎಫ್ ಏಡುಕುಂಡಲು ಇಂದಿನಿಂದಲೇ (ಫೆ.27) ಪ್ರತಿದಿನ ಬೆಳಿಗ್ಗೆ 7 ಗಂಟೆ, ಸಂಜೆ 4.30 ಹಾಗೂ 5.30ಕ್ಕೆ ತಾತ್ಕಲಿಕ ವಾಹನ ವ್ಯವಸ್ಥೆ ಮಾಡಿದ್ದಾರೆ. ಮುಂದಿನ ತಿಂಗಳಿಂದ ಮಕ್ಕಳನ್ನು ಶಾಲೆಗೆ ಕರೆದೊಯ್ಯಲು ಅರಣ್ಯ ಇಲಾಖೆಯ 16 ಆಸನದ ಜೀಪನ್ನು ಒದಗಿಸಲಾಗುವುದು ಎಂದು ತಿಳಿದು ಬಂದಿದೆ.

ತಾಲೂಕಿನ ಪಚ್ಚೆದೊಡ್ಡಿ ಮತ್ತು ಕಾಂಚಳ್ಳಿ ಗ್ರಾಮದ ನಡುವಿನ ರಸ್ತೆ ತುಂಬಾ ಹಾಳಾಗಿದ್ದು, ಸಂಚಾರಕ್ಕೆ ಯೋಗ್ಯವಾಗಿಲ್ಲ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದು ಗ್ರಾಮಗಳ ಜನರು ಅಳಲು ತೋಡಿಕೊಂಡಿದ್ದರು. ಇದಕ್ಕೆ ಸ್ಪಂದನೆ ಸಿಕ್ಕಿದ್ದು ಪಚ್ಚೆದೊಡ್ಡಿ ಮತ್ತು ಕಾಂಚಳ್ಳಿ ಗ್ರಾಮಗಳ ನಡುವಿನ ರಸ್ತೆ ದುರಸ್ತಿ ಕಾರ್ಯ ಹಾಗೂ ಇಕ್ಕೆಲೆಗಳ ಗಿಡಗಂಟೆಗಳನ್ನು ತೆರವು ಮಾಡುವ ಕೆಲಸ ಪ್ರಗತಿಯಲ್ಲಿದೆ. ಕೆಲವೇ ದಿನಗಳಲ್ಲಿ ರಸ್ತೆಯು ಸಂಚಾರಕ್ಕೆ ಯೋಗ್ಯವಾಗಲಿದೆ. ಪಚ್ಚೆದೊಡ್ಡಿ, ಕಾಂಚಳ್ಳಿ ಗ್ರಾಮಸ್ಥರು ಪಡಿತರ ತರಲು ದೂರದ ನ್ಯಾಯಬೆಲೆ ಅಂಗಡಿಗಳಿಗೆ ಹೋಗಬೇಕಿದೆ. ಕೆಲಸ, ಕೂಲಿ ಬಿಟ್ಟು ಹೋಗಿ ಬರಲು ತೊಂದರೆಯಾಗುತ್ತಿದೆ. ಹೀಗಾಗಿ ತಮ್ಮ ಗ್ರಾಮದಲ್ಲಿಯೇ ನ್ಯಾಯಬೆಲೆ ಅಂಗಡಿ ಮಂಜೂರು ಮಾಡುವಂತೆ ಕೋರಿದ್ದರು. ಈ ಮನವಿಗೆ ಸ್ಪಂದಿಸಿರುವ ಹಿನ್ನೆಲೆಯಲ್ಲಿ ಪಚ್ಚೆದೊಡ್ಡಿ ಕಾಂಚಳ್ಳಿಯಲ್ಲಿಯೇ ಪಡಿತರ ಪಡೆಯಲು ಅನುಕೂಲ ಕಲ್ಪಿಸಿ ಆಹಾರ ನಾಗರಿಕ ಪೂರೈಕೆ ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಆದೇಶ ಹೊರಡಿಸಿದೆ.

ಇದೇ ರೀತಿ ಕಾಡಂಚಿನ ಗ್ರಾಮಗಳ ಜನರ ಕಲ್ಯಾಣಕ್ಕೆ ಅನುಕೂಲ ವಾಗುವ ಕೆಲಸಗಳನ್ನು ಮುಂದೆಯೂ ಆಸ್ಥೆ ವಹಿಸಿ ಕೈಗೆತ್ತಿಕೊಂಡು ಜನರಿಗೆ ಅನುಕೂಲ ಕಲ್ಪಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್‍ಕುಮಾರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕಾಡಂಚಿನ ಜನರು ಶಾಲಾ ವಾಸ್ತವ್ಯದ ವೇಳೆ ಮಾಡಿರುವ ಮನವಿಗಳಿಗೆ ತುರ್ತಾಗಿ ಸ್ಪಂದಿಸಿದ ಜಿಲ್ಲೆಯ ಅಧಿಕಾರಿಗಳಿಗೆ ಉಸ್ತುವಾರಿ ಸಚಿವರು ಅಭಿನಂದಿಸಿದ್ದಾರೆ.

Translate »