ಕೊರೊನಾ ಶಂಕಿತರ ಮಾಹಿತಿ ದಾಖಲಿಸದ ಖಾಸಗಿ ಆಸ್ಪತ್ರೆಗೆ ಡಿಸಿ ಕಡೇ ಎಚ್ಚರಿಕೆ
ಮೈಸೂರು

ಕೊರೊನಾ ಶಂಕಿತರ ಮಾಹಿತಿ ದಾಖಲಿಸದ ಖಾಸಗಿ ಆಸ್ಪತ್ರೆಗೆ ಡಿಸಿ ಕಡೇ ಎಚ್ಚರಿಕೆ

June 30, 2020

ಮೈಸೂರು, ಜೂ.29(ಎಸ್‍ಪಿಎನ್)-ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ SARI, ILI& COVID-19 ಶಂಕಿತರ ಬಗ್ಗೆ ಆನ್‍ಲೈನ್ ಮೂಲಕ ಮಾಹಿತಿ ದಾಖಲಿಸದ ಖಾಸಗಿ ಆಸ್ಪತ್ರೆಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಸೋಮವಾರ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ.

ಮೈಸೂರು ನಗರದಲ್ಲಿ ಕೊರೊನಾ ಸೋಂಕು ದಿನೇದಿನೆ ಉಲ್ಭಣ ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ (ಆಲೋಪತಿ, ಆಯುಷ್, ಲ್ಯಾಬ್‍ಗಳು, ದಂತ ವೈದ್ಯರು, ಹಾಗೂ ಎಲ್ಲಾ ತಜ್ಞ ವೈದ್ಯರು) SARI, ILI& COVID-19 ಶಂಕಿತರ ವರದಿಗಳನ್ನು https://kpme.karnataka.tech/index.php/login ಆನ್‍ಲೈನ್ ಮೂಲಕ ಪ್ರತಿದಿನ ದಾಖಲು ಮಾಡಲು ಸಂಬಂಧಿಸಿದ ಖಾಸಗಿ ಆಸ್ಪತ್ರೆಗಳಿಗೆ ಈಗಾಗಲೇ ಹಲವು ಬಾರಿ ದೂರವಾಣಿ ಹಾಗೂ ಇ-ಮೇಲ್ ಮೂಲಕ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಆದಾಗ್ಯೂ ಖಾಸಗಿ ಆಸ್ಪತ್ರೆಗಳಿಂದ SARI, ILI& COVID-19 ಶಂಕಿತರ ದೈನಂದಿನ ವರದಿಯನ್ನು ದಾಖಲು ಮಾಡುತ್ತಿಲ್ಲ. ಕಳೆದ ನಾಲ್ಕೈದು ದಿನಗಳ ಹಿಂದೆ ಮೃತಪಟ್ಟ ಪ್ರಕರಣದಲ್ಲಿ ತಡವಾಗಿ ಕೊರೊನಾ ಇರುವುದು ದೃಢಪಟ್ಟಿದೆ. ಮತ್ತೊಂದು ಪ್ರಕರಣದಲ್ಲಿ ಕೊರೊನಾನಿಂದ ಮೃತಪಟ್ಟಿದ್ದರೂ ಇದರ ಬಗ್ಗೆ ಮಾಹಿತಿ ನೀಡಿಲ್ಲ ಎಂದು ತಿಳಿಸಿದ್ದಾರೆ. ಆದ್ದರಿಂದ ಖಾಸಗಿ ಆಸ್ಪತ್ರೆಗಳು ಕೋವಿಡ್-19 ವರದಿಗಳನ್ನು ಪ್ರತಿನಿತ್ಯ ಆನ್‍ಲೈನ್ ಮೂಲಕ ದಾಖಲಿಸುವುದು ಕಡ್ಡಾಯ. ಜಿಲ್ಲೆಯಲ್ಲಿ ಕೊರೊನಾ ಮಾಹಿತಿ ಲಭ್ಯವಾಗದಿದ್ದರೆ, ನಿಯಂ ತ್ರಣಕ್ಕೆ ಸಿಗದಷ್ಟು ಉಲ್ಭಣಗೊಳ್ಳುತ್ತದೆ. ಹಾಗಾಗಿ ಕೋವಿಡ್-19 ಶಂಕಿತರ ವರದಿ ದಾಖಲಿ ಸಲು ಇದು ಕೊನೆಯ ಎಚ್ಚರಿಕೆಯಾಗಿದ್ದು, ಜಿಲ್ಲಾಡಳಿತದ ಆದೇಶ ಉಲ್ಲಂಘಿಸುವ ಆಸ್ಪತ್ರೆಗಳ ವಿರುದ್ಧ ಕೆಪಿಎಂಇಎ ಕಾಯ್ದೆಯ ಪ್ರಕಾರ ಮುಂದಿನ ಆದೇಶದವರೆಗೆ ನೋಂದಣಿ ರದ್ದುಗೊಳಿಸಲಾಗುವುದು ಎಂದು ಡಿಸಿ ಅಭಿರಾಂ ಜಿ.ಶಂಕರ್ ತಿಳಿಸಿದ್ದಾರೆ.