ಕೋಟೆ ಅರಮನೆ ಕಾಮಗಾರಿ ವೀಕ್ಷಿಸಿದ ಡಿಸಿ
ಕೊಡಗು

ಕೋಟೆ ಅರಮನೆ ಕಾಮಗಾರಿ ವೀಕ್ಷಿಸಿದ ಡಿಸಿ

July 17, 2021

ಮಡಿಕೇರಿ, ಜು.16- ನಗರದ ಪ್ರತಿಷ್ಠಿತ ಅರಮನೆ ನವೀಕರಣ ಕಾಮಗಾರಿ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಉಪ ವಿಭಾಗಾಧಿಕಾರಿ ಈಶ್ವರ ಕುಮಾರ್ ಖಂಡು, ವಿರೂಪಾಕ್ಷಯ್ಯ, ಎಸ್.ಮಹೇಶ್ ಇತರರು ಶುಕ್ರವಾರ ಭೇಟಿ ನೀಡಿ ವೀಕ್ಷಿಸಿದರು.

ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿರುವುದಕ್ಕೆ ತೀವ್ರ ಅತೃಪ್ತಿ ವ್ಯಕ್ತವಾಯಿತು. ಸರ್ಕಾರ 9.75 ಕೋಟಿ ರೂ. ಬಿಡುಗಡೆ ಮಾಡಿದೆ. ಇದರಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಕೋಟೆ ನವೀಕರಣ ಮಾಡಲು ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ ಎಂದು ವಸ್ತು ಸಂಗ್ರಹಾಲಯದ ಅಧಿಕಾರಿ ಮಾಹಿತಿ ನೀಡಿದರು. ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಕೋಟೆ ನವೀಕರಣ ಕಾಮಗಾರಿಯನ್ನು ತ್ವರಿತವಾಗಿ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ವಿಳಂಬ ಅನುಸರಿಸಬಾರದು ಎಂದು ಅವರು ತಿಳಿಸಿದರು.

ಮಡಿಕೇರಿ ಕೋಟೆ ಅಭಿವೃದ್ದಿಗೆ ಸಂಬಂಧಿಸಿದಂತೆ ರಾಜ್ಯ ಉಚ್ಛ ನ್ಯಾಯಾಲಯದ ಆದೇಶದಂತೆ ಕೋಟೆ ಅಭಿವೃದ್ದಿ ಕಾಮಗಾರಿ, ಮಳೆಗಾಲದಲ್ಲಿ ಕೈಗೊಂಡಿರುವ ಮುಂಜಾಗೃತ ಕ್ರಮದ ಬಗ್ಗೆ ತಕ್ಷಣವೇ ಅರ್ಜಿದಾರರ ಸಮ್ಮುಖದಲ್ಲಿ ಪರಿಶೀಲನೆ ನಡೆಸಿ ವರದಿ ನೀಡುವಂತೆ ನ್ಯಾಯಾಲಯದ ಸೂಚನೆಯ ಹಿನ್ನಲೆಯಲ್ಲಿ ಅರ್ಜಿದಾರರಾದ ವಿರೂ ಪಾಕ್ಷಯ್ಯ ಅವರು ಶುಕ್ರವಾರ ಜಿಲ್ಲಾಧಿಕಾರಿಗಳೊಂದಿಗೆ ಕೋಟೆಯ ಪರಿಶೀಲನೆ ನಡೆಸಿದರು. ಉಚ್ಛ ನ್ಯಾಯಾಲಯದಿಂದ ಕೋಟೆ ಕಾಮಗಾರಿಗಾಗಿ 10 ಕೋಟಿ ರೂ.ಬಿಡುಗಡೆ ಮಾಡಲಾಗಿದೆ. ಅದರನ್ವಯ ಜಿಲ್ಲಾಡಳಿತ ಅನುದಾನವನ್ನು ಹೇಗೆ ಸಮರ್ಪಕವಾಗಿ ಬಳಸಿಕೊಳ್ಳುತ್ತಾ ಬಂದಿದೆ ಎಂಬುದರ ಮಾಹಿತಿಯನ್ನು ಪಡೆದರು.

ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಮಾತನಾಡಿ, ಒಟ್ಟು ಮೊತ್ತದಲ್ಲಿ 5 ಕೋಟಿ ರೂ.ಗಳ ಕಾಮಗಾರಿಯನ್ನು ಆರಂಭಿಸಲಾಗಿದೆ. ಉಳಿದ ಕಾಮಗಾರಿ ಮುಂದಿನ ದಿನಗಳಲ್ಲಿ ತ್ವರಿತಗತಿಯಲ್ಲಿ ಪ್ರಾರಂಭಿಸಲು ಜಿಲ್ಲಾಡಳಿತದಿಂದ ಆದೇಶ ನೀಡುವುದಾಗಿ ಮಾಹಿತಿಯನ್ನು ನೀಡಿದರು. ನಂತರ ಉಪ ವಿಭಾಗಾಧಿಕಾರಿಗಳ ಸಮ್ಮುಖದಲ್ಲಿ ಅರ್ಜಿದಾರರಾದ ವಿರೂಪಾಕ್ಷಯ್ಯ ಕೋಟೆಯ ಸುತ್ತ ಮುತ್ತಲಿನ ಮತ್ತು ಒಳಾಂಗಣದ ಕಟ್ಟಡದ ದುರಸ್ತಿ ಕಾರ್ಯ, ಕಾಮಗಾರಿಯನ್ನು ವೀಕ್ಷಿಸಿದರು.

ಉಪ ವಿಭಾಗಾಧಿಕಾರಿ ಈಶ್ವರ್ ಕುಮಾರ್ ಖಂಡು ಅವರು ಕೋಟೆಯ ಸುತ್ತಲು ಪರಿಶೀಲಿಸಿ, ಅಭಿವೃದ್ಧಿ ಕಾಮಗಾರಿ ತ್ವರಿತ ಗತಿಯಲ್ಲಿ ಜರುಗಬೇಕು ಎಂದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಹಾಗೂ ಜಿಲ್ಲಾಡಳಿತದಿಂದ ಮುಂದಿನ ದಿನಗಳಲ್ಲಿ ಕೋಟೆಯ ಕಾಮಗಾರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಅವರು ಹೇಳಿದರು. ಕೋಟೆ ವೀಕ್ಷಣೆಯಲ್ಲಿ ಪ್ರಾಚೀನ ಇಲಾಖೆಯ ಅಧಿಕಾರಿಗಳಾದ ಚಂದ್ರಕಾಂತ್, ಶ್ರೀಗುರುಬಾಗಿ ಮತ್ತಿತರರು ಇದ್ದರು. ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಸ್.ಮಹೇಶ್, ಕೊಡಗು ಜಿಲ್ಲಾ ವೀರಶೈವ ಸಂಘದ ಅಧ್ಯಕ್ಷ ಶಿವಪ್ಪ, ಕಾರ್ಯದರ್ಶಿ ಶಂಭಾ ಶಿವಮೂರ್ತಿ, ಕುಶಾಲನಗರ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹದೇವಪ್ಪ, ಪ್ರಮುಖರಾದ ಉದಯಕುಮಾರ್, ಪ್ರಸನ್ನ, ದಿನೇಶ್, ಇತರರು ಇದ್ದರು.

Translate »