ಮರ ತೆರವು, ವಿದ್ಯುತ್ ತಂತಿ ಮರ ಜೋಡನೆ ಕಾರ್ಯ ಬಿರುಸು
ಕೊಡಗು

ಮರ ತೆರವು, ವಿದ್ಯುತ್ ತಂತಿ ಮರ ಜೋಡನೆ ಕಾರ್ಯ ಬಿರುಸು

July 17, 2021

ಮಡಿಕೇರಿ, ಜು.16- ಕೊಡಗು ಜಿಲ್ಲೆಯಾ ದ್ಯಂತ ಶುಕ್ರವಾರ ಮಳೆ ಬಿಡುವು ನೀಡಿದ್ದು ಕಂಡು ಬಂತು. ನದಿಗಳಲ್ಲೂ ಕೂಡ ನೀರಿನ ಪ್ರಮಾಣ ತುಸು ಇಳಿಕೆ ಕಾಣುತ್ತಿದ್ದು ಭಾರೀ ಪ್ರವಾಹ ತಲೆದೋರುವ ಸಾಧ್ಯತೆಯಿಂದ ಭೀತಿಗೆ ಒಳಗಾಗಿದ್ದ ನದಿ ತಟದ ನಿವಾಸಿಗಳು ನಿಟ್ಟುಸಿರು ಬಿಡುವಂತಾಗಿದೆ.
ಭಾಗಮಂಡಲದ ತ್ರಿವೇಣಿ ಸಂಗಮದಲ್ಲೂ ಗಣನೀಯ ಪ್ರಮಾಣದಲ್ಲಿ ನೀರು ಇಳಿಕೆ ಕಂಡಿದೆ. ಇತ್ತ ಬಲಮುರಿ ಕೆಳ ಸೇತುವೆ ಮುಳುಗಡೆಯಾಗಿದ್ದು, ಇದೇ ರೀತಿ ಮಳೆ ಬಿಡುವು ನೀಡಿದರೆ ಕೆಳ ಸೇತುವೆಯ 2 ದಿನದಲ್ಲಿ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಅಂದಾಜಿಸಲಾಗಿದೆ. ಮಳೆಯ ಬಿಡುವಿನ ಮಧ್ಯೆ ಮುರಿದು ಬಿದ್ದ ಮರಗಳ ತೆರವಿನ ಕಾರ್ಯ ಮತ್ತು ವಿದ್ಯುತ್ ಕಂಬ ಹಾಗೂ ತಂತಿಗಳ ಮರು ಜೋಡಣಾ ಕಾರ್ಯ ಜಿಲ್ಲೆಯಾ ದ್ಯಂತ ಭರದಿಂದ ಸಾಗಿದ್ದು ಕಂಡು ಬಂತು. ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮೀಣ ಭಾಗಗಳಲ್ಲಿ ಮುರಿದು ಬಿದ್ದ ಮರಗಳನ್ನು ತೆರವು ಮಾಡುವ ಮೂಲಕ ರಸ್ತೆ ವ್ಯವಸ್ಥೆ ಸುಗಮಗೊಳಿಸಿದರು. ಇನ್ನು ಮರ ಬಿದ್ದ ಪರಿಣಾಮ ಮುರಿದು ಹೋಗಿದ್ದ ವಿದ್ಯುತ್ ಕಂಬ ತುಂಡಾದ ವಿದ್ಯುತ್ ತಂತಿಗಳನ್ನು ಯಂತ್ರೋಪಕರಣಗಳನ್ನು ಬಳಸಿಕೊಂಡು ಮರು ಪೂರೈಕೆಗೆ ಕ್ರಮ ಕೈಗೊಂಡಿದ್ದಾರೆ.

ನದಿ ಪ್ರವಾಹ-ಆಶ್ರಯ: ಕಳೆದ ಒಂದು ವಾರದಿಂದ ಸುರಿಯು ತ್ತಿದ್ದ ಮಹಾಮಳೆಯಿಂದ ಪಯಸ್ವಿನಿ ನದಿಯಲ್ಲಿ ಪ್ರವಾಹ ಏರ್ಪಟ್ಟ ಕಾರಣ ಕೊಯನಾಡು ಭಾಗದ ನದಿ ತೀರದ ನಿವಾಸಿಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಸ್ಥಳೀಯ ಸರ್ಕಾರಿ ಶಾಲೆ ಯಲ್ಲಿ ಕಾಳಜಿ ಕೇಂದ್ರವನ್ನು ತೆರೆಯಲಾಗಿದ್ದು, ಅಧಿಕಾರಿಗಳು ಭೇಟಿ ನೀಡಿ ಮೂಲ ಸೌಲಭ್ಯ ಒದಗಿಸಿದ್ದಾರೆ. ಈಗ ಮಳೆ ಕೊಂಚ ಕಡಿಮೆಯಾಗಿರುವುದರಿಂದ ಇಲ್ಲಿನ ನಿವಾಸಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಗುರುವಾರ ರಾತ್ರಿ ಎರಡು ಮನೆಗಳನ್ನು ನದಿ ಪ್ರವಾಹ ನೀರು ಆವರಿಸಿದ್ದ ಹಿನ್ನೆಲೆಯಲ್ಲಿ 6 ಕುಟುಂಬಗಳನ್ನು ಮುಂಜಾಗೃತಾ ಕ್ರಮವಾಗಿ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು.

ಮರಗಳ ತೆರವು: ಮದೆನಾಡು, ಜೋಡು ಪಾಲ, ಕೊಯನಾಡು ಭಾರೀ ಮಳೆ ಸುರಿದಿದ್ದ ಹಿನ್ನೆಲೆಯಲ್ಲಿ ಪಯಸ್ವಿನಿ ನದಿಯಲ್ಲಿ ಮುರಿದು ಬಿದ್ದ ಮರಗಳು ಕೊಚ್ಚಿ ಬಂದಿದ್ದವು. ಈ ಬೃಹತ್ ಮರಗಳು ಕೊಯನಾಡುವಿನಲ್ಲಿ ನಿರ್ಮಾಣ ಹಂತದಲ್ಲಿರುವ ಕಿರುಕಟ್ಟೆ ಭಾಗದಲ್ಲಿ ರಾಶಿಯಾಗಿದ್ದವು. ಪರಿಣಾಮ ನದಿ ನೀರಿನಲ್ಲಿ ಏರಿಕೆಯಾಗಿತ್ತಲ್ಲದೇ, ಹಿನ್ನೀರಿನಿಂದ ನದಿ ದಿಕ್ಕು ಬದಲಿಸಿ ಹರಿದು ಪ್ರವಾಹ ಸೃಷ್ಟಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರವಾಹದಿಂದ ಕೊಚ್ಚಿ ಬಂದಿದ್ದ ಮರಗಳನ್ನು ಶುಕ್ರವಾರ ಹಿಟಾಚಿ ಯಂತ್ರಗಳನ್ನು ಬಳಸಿ ನದಿಯಿಂದ ತೆರವುಗೊಳಿಸಲಾಯಿತು.

ಗ್ರಾಮಸ್ಥರ ವಿರೋಧದ ನಡುವೆಯೂ ಕಿರುಕಟ್ಟೆಯನ್ನು ನಿರ್ಮಿಸಲಾಗಿದ್ದು, ಇದರಿಂದ ಮಳೆಗಾಲದಲ್ಲಿ ಪ್ರವಾಹ ಏರ್ಪಟ್ಟು ಅಕ್ಕಪಕ್ಕದ ಮನೆಗಳಿಗೆ ಅಪಾಯ ಎದುರಾಗುವ ಮುನ್ಸೂಚನೆಯನ್ನೂ ಗ್ರಾಮಸ್ಥರು ಮೊದಲೇ ಜಿಲ್ಲಾಡಳಿತಕ್ಕೆ ನೀಡಿದ್ದರು. ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಮರಗಳನ್ನು ತೆರವುಗೊಳಿಸಲು ಕ್ರಮ ಕೈಗೊಂಡರು.

Translate »