ಕೊರೊನಾ ಸೋಂಕಿತರ ಜೀವ ಉಳಿಸಲು ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹ
ಮೈಸೂರು

ಕೊರೊನಾ ಸೋಂಕಿತರ ಜೀವ ಉಳಿಸಲು ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹ

April 24, 2021

ಮೈಸೂರು, ಏ.23(ಆರ್‍ಕೆಬಿ)- ಹೆಚ್ಚುತ್ತಿ ರುವ ಕೊರೊನಾ ಸೋಂಕು ತಡೆಗಟ್ಟುವ ಜೊತೆಗೆ ಸೋಂಕಿನಿಂದ ರೋಗಿಗಳ ಜೀವ ಉಳಿಸಲು ಸರ್ಕಾರ ಕೂಡಲೇ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಬೇಕು. ರೋಗಿ ಗಳ ಜೀವ ಉಳಿಸಲು ಸಮರೋಪಾದಿ ಯಲ್ಲಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಇಂದಿಲ್ಲಿ ಸರ್ಕಾರವನ್ನು ಆಗ್ರಹಿಸಿದರು.

ಮೈಸೂರು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ಸಲುವಾಗಿ ಖಾಲಿ ಇರುವ ಅಪಾರ್ಟ್ ಮೆಂಟ್‍ಗಳು, ಸರ್ಕಾರಿ ಜಾಗಗಳನ್ನು ಸರ್ಕಾರ ಸೂಕ್ತ ರೀತಿಯಲ್ಲಿ ಬಳಸಿಕೊಳ್ಳ ಬೇಕು ಎಂದು ಒತ್ತಾಯಿಸಿದರು.

ಆಡಳಿತ ನಡೆಸುತ್ತಿರುವವರು ಮನು ಷ್ಯರೇ?: ಕೊರೊನಾ ಸೋಂಕಿಗೆ ಬಲಿ ಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ಇದನ್ನು ನೋಡಿದರೆ ದೇಶದಲ್ಲಿ ಆಡಳಿತ ವಿದೆಯೇ? ಆಡಳಿತವಿದ್ದರೆ ಅದನ್ನು ಮನುಷ್ಯರು ನಡೆಸುತ್ತಿದ್ದಾರೆಯೇ? ಎಂಬ ಅನುಮಾನ ವ್ಯಕ್ತಪಡಿಸಿದರು.

ಆಡಳಿತ ನಡೆಸುವವರಿಂದ ಕೊರೊನಾ ಸೋಂಕಿತರ ಜೀವ ಉಳಿಸಲು ಸಾಧ್ಯವಿಲ್ಲ ಎಂಬುದು ಮನವರಿಕೆಯಾಗಿದ್ದು, ಕನಿಷ್ಟ ಅವರ ಶವಸಂಸ್ಕಾರವನ್ನು ಗೌರವಯುತ ವಾಗಿ ನಡೆಸಲು ಅವಕಾಶ ಮಾಡಿ ಕೊಡ ಬೇಕು ಎಂದು ಬಡಗಲಪುರ ನಾಗೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಹೈಕೋರ್ಟ್‍ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ: ಮನುಷ್ಯರು ಮಾತ್ರವಲ್ಲ, ಪ್ರಾಣಿ, ಪಕ್ಷಿಗಳು, ನೆಲ, ಜಲ ಎಲ್ಲವನ್ನೂ ಸಂರಕ್ಷಿಸುವ ಗುರುತರ ಜವಾಬ್ದಾರಿ ಪ್ರಭು ತ್ವದ ಮೇಲಿದೆ. ಆದ್ದರಿಂದ ಕೋವಿಡ್ ಪೀಡಿತರ ಸಾವಿನ ವಿರುದ್ಧ ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಹಾಗೂ ಅಧಿಕಾರಿಗಳನ್ನು ಪಾರ್ಟಿ ಮಾಡಿ ಹೈಕೋರ್ಟ್‍ನಲ್ಲಿ ಸಾರ್ವ ಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ರೈತ ಸಂಘ ನಿರ್ಧರಿಸಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ರೈತಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ತಾಲೂಕು ಅಧ್ಯಕ್ಷ ಪಿ. ಮರಂಕಯ್ಯ, ಮುಖಂಡ ಪ್ರಸನ್ನ ಎನ್. ಗೌಡ ಇನ್ನಿತರರು ಉಪಸ್ಥಿತರಿದ್ದರು. ಪ್ರಧಾನಮಂತ್ರಿ ಪರಿಹಾರ ನಿಧಿಗೆ ಎಷ್ಟು ಹಣ ಬಂದಿದೆ? ಆ ನಿಧಿಯಲ್ಲಿ ರಾಜ್ಯಗಳಿಗೆ ಎಷ್ಟು ಹಣ ಹಂಚಲಾಗಿದೆ ಎಂಬ ಮಾಹಿತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರದ ತಮ್ಮ `ಮನ್ ಕಿ ಬಾತ್’ನಲ್ಲಿ ಸ್ಪಷ್ಪಪಡಿಸಬೇಕು. ರೈತರು ಸೇರಿದಂತೆ ಪ್ರತಿದಿನ ದುಡಿದು ಜೀವನ ನಡೆಸುವ ಎಲ್ಲಾ ಕುಟುಂಬಗಳಿಗೆ ಕನಿಷ್ಟ 10 ಸಾವಿರ ರೂ. ಮಾಸಿಕ ಸಹಾಯಧನ ನೀಡಬೇಕು. ದರ ಕುಸಿತವಾಗಿರುವ ಎಲ್ಲ ತರಕಾರಿಗಳನ್ನು ಸರ್ಕಾರ ಖರೀದಿಸಿ, ಎಲ್ಲರಿಗೂ ಉಚಿತ ಲಸಿಕೆ ನೀಡಬೇಕು.
– ಬಡಗಲಪುರ ನಾಗೇಂದ್ರ, ರಾಜ್ಯಾಧ್ಯಕ್ಷ, ರೈತಸಂಘ

Translate »