ಯುವ ಕಾಂಗ್ರೆಸ್‍ನಿಂದ ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ
ಮೈಸೂರು

ಯುವ ಕಾಂಗ್ರೆಸ್‍ನಿಂದ ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ

June 7, 2021

ಮೈಸೂರು,ಜೂ.6(ಪಿಎಂ)- ಮೈಸೂರು ಜಿಲ್ಲಾ ಗ್ರಾಮಾಂತರ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಕೋವಿಡ್ ಲಾಕ್‍ಡೌನ್ ಹಿನ್ನೆಲೆ 30 ಬಡ ಕುಟುಂಬ ಗಳಿಗೆ ದಿನಸಿ ಕಿಟ್‍ಗಳನ್ನು ವಿತರಣೆ ಮಾಡಲಾಯಿತು.

ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ದಿನಸಿ ಕಿಟ್‍ಗಳನ್ನು ವಿತರಣೆ ಮಾಡಿದರು. ಬಳಿಕ ಮಾತನಾಡಿದ ಅವರು, ಕೋವಿಡ್ ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಮೈಸೂರು ಜಿಲ್ಲೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಸಕ್ರಿಯವಾಗಿ ತೊಡಗಿಸಿಕೊಂಡು ಜನತೆಗೆ ಸಾಧ್ಯ ವಾದ ಎಲ್ಲಾ ಸಹಾಯ ಮಾಡಬೇಕೆಂದು ಕೋರಿದರು.

ರಾಜ್ಯದಲ್ಲಿ ಯುವ ಕಾಂಗ್ರೆಸ್‍ನಿಂದ ಕಳೆದ ಒಂದು ತಿಂಗಳಲ್ಲಿ 55 ಸಾವಿರ ಐಸೋಲೇಷನ್ ಕಿಟ್‍ಗಳನ್ನು ಉಚಿತವಾಗಿ ಹಂಚಿಕೆ ಮಾಡಲಾಗಿದೆ. ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ರಾಜಕಾರಣವನ್ನು ಬದಿಗೊತ್ತಿ ಜನತೆಗೆ ಸ್ಪಂದಿಸುತ್ತಿದೆ. ಆದರೆ ಕೋವಿಡ್ ನಿಯಂತ್ರಣದಲ್ಲಿ ರಾಜ್ಯ ಮತ್ತು ರಾಷ್ಟ್ರದಲ್ಲಿ ಬಿಜೆಪಿ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ ಎಂದು ಆರೋಪಿಸಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ನೇತೃತ್ವ ದಲ್ಲಿ ಕಾಂಗ್ರೆಸ್ ಜನತೆಗೆ ಸಾಧ್ಯವಿರುವ ಸಹಾಯ ಮಾಡುತ್ತಿದೆ. ಆದರೆ ಬಿಜೆಪಿ ಕಾರ್ಯಕರ್ತರು ಮನೆ ಯಲ್ಲಿ ಕೂತಿದ್ದಾರೆ. ಮಂತ್ರಿಗಳು, ಬಿಜೆಪಿ ಶಾಸಕರ ನಡುವೆ ಸಮನ್ವಯತೆ ಇಲ್ಲದೆ, ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಗಳ ಸ್ಥಾನದಿಂದ ಇಳಿಯುವ ತೆರೆಮರೆ ಆಟವೂ ನಡೆಯುತ್ತಿದೆ. ಇವರಿಗೆ ಕೋವಿಡ್ ನಿಂದ ಸಂಕಷ್ಟದಲ್ಲಿರುವ ಜನತೆಗೆ ನೆರವಾಗುವ ಕಳಕಳಿ ಇಲ್ಲ ಎಂದು ದೂರಿದರು.

ರಾಷ್ಟ್ರೀಯ ಯುವ ಕಾಂಗ್ರೆಸ್‍ನ ಬಿ.ವಿ.ಶ್ರೀನಿವಾಸ್ ಅವರ ಸೂಚನೆಯಂತೆ ಯೂತ್ ಕಾಂಗ್ರೆಸ್ ಕಾರ್ಯ ಕರ್ತರು ಪ್ರತಿಯೊಂದು ರಾಜ್ಯದಲ್ಲಿ ಜನತೆಗೆ ನೆರವಾ ಗುವ ನಿಟ್ಟಿನಲ್ಲಿ ಕ್ರಿಯಾಶೀಲವಾಗಿದ್ದಾರೆ. ತಮ್ಮ ಸೇವಾ ಮನೋಭಾವದಿಂದ ಬಿ.ವಿ.ಶ್ರೀನಿವಾಸ್ ಅವರು `ಆಕ್ಸಿಜನ್ ಮ್ಯಾನ್ ಆಫ್ ಇಂಡಿಯಾ’ ಎಂದು ಹೆಸರಾಗಿದ್ದಾರೆ ಎಂದರು.

ಅಕ್ಕಿ 5 ಕೆಜಿ, ರಾಗಿಹಿಟ್ಟು 2 ಕೆಜಿ, ಗೋಧಿಹಿಟ್ಟು 1 ಕೆಜಿ, ಅಡುಗೆ ಎಣ್ಣೆ 400 ಎಂಲ್ ಸೇರಿದಂತೆ ಇನ್ನಿತರ ದಿನಸಿ ಒಳಗೊಂಡ ಕಿಟ್‍ಗಳನ್ನು ವಿತರಣೆ ಮಾಡಲಾಯಿತು. ಇದಕ್ಕೂ ಮುನ್ನ ಡಿ.ದೇವರಾಜ ಅರಸು ಅವರ 39ನೇ ಪುಣ್ಯಸ್ಮರಣೆ ಅಂಗವಾಗಿ ದೇವರಾಜ ಅರಸು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಮಾಜಿ ಶಾಸಕ ಎಂ.ಕೆ.ಸೋಮ ಶೇಖರ್, ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್, ಮೈಸೂರು ಜಿಲ್ಲಾ ಗ್ರಾಮಾಂತರ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡೋನಾಲ್ಡ್ ಎಫ್.ನಿರ್ಮಾಣಿಕ್ ಮತ್ತಿತರರು ಹಾಜರಿದ್ದರು.

Translate »