ಹೈಕಮಾಂಡ್ ಬಯಸಿದರೆ  ರಾಜೀನಾಮೆ
News

ಹೈಕಮಾಂಡ್ ಬಯಸಿದರೆ ರಾಜೀನಾಮೆ

June 7, 2021

ಬೆಂಗಳೂರು, ಜೂ.6- ಹೈಕಮಾಂಡ್ ಸೂಚಿಸಿದರೆ ರಾಜೀನಾಮೆ ನೀಡಲು ಸಿದ್ಧವಿರುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ. ಇದರೊಂ ದಿಗೆ ರಾಜ್ಯದ ನಾಯಕತ್ವ ಬದಲಾವಣೆಗೆ ಚಾಲನೆ ದೊರೆ ತಿದೆ ಎಂಬ ಮಾಧ್ಯಮ ವರದಿಗೆ ಪುಷ್ಟಿ ಸಿಕ್ಕಂತಾಗಿದೆ.
ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಮುಖ್ಯ ಮಂತ್ರಿಗಳು, ನನ್ನ ಮೇಲೆ ಹೈಕಮಾಂಡ್ ವಿಶ್ವಾಸವಿಟ್ಟಿದೆ. ವರಿಷ್ಠರು ವಿಶ್ವಾಸವಿಟ್ಟು ಎಷ್ಟು ದಿನದವರೆಗೆ ಮುಂದುವರೆ ಯಲು ಹೇಳುತ್ತಾರೋ ಅಷ್ಟು ದಿನದವರೆಗೆ ಮುಂದು ವರೆಯುತ್ತೇನೆ. ಅವರು ಸೂಚಿಸಿದ ತಕ್ಷಣ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುತ್ತೇನೆ. ಇದರಲ್ಲಿ ನನಗೆ ಯಾವುದೇ ರೀತಿಯ ಗೊಂದಲವಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು. ವರಿಷ್ಠರು ನೀಡಿರುವ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಶಕ್ತಿ ಮೀರಿ ಕೆಲಸ ಮಾಡುತ್ತಿದ್ದೇನೆ. ಅವರು ಸೂಚಿಸಿದ ತಕ್ಷಣ ಸಿಎಂ ಸ್ಥಾನದಿಂದ ಕೆಳಗಿಳಿದು ರಾಜ್ಯದ ಜನತೆ ಮತ್ತು ಪಕ್ಷದ ಒಳಿತಿಗಾಗಿ ಕೆಲಸ ಮಾಡುತ್ತೇನೆ ಎಂದರು. ಮುಖ್ಯಮಂತ್ರಿ ಸ್ಥಾನಕ್ಕೆ ನನಗೆ ಪರ್ಯಾಯವಾಗಿ ಯಾರೂ ಇಲ್ಲ ಎನ್ನುವುದನ್ನು ನಾನು ಒಪ್ಪುವುದಿಲ್ಲ. ರಾಜ್ಯ ಮತ್ತು ದೇಶದಲ್ಲಿ ಪರ್ಯಾಯ ನಾಯಕರು ಇದ್ದೇ ಇರುತ್ತಾರೆ. ಆಯಾ ಕಾಲಕ್ಕೆ ತಕ್ಕಂತೆ ನಾಯಕರು ಸಿಗುತ್ತಾರೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಸ್ಥಾನಕ್ಕೆ ಬಿಜೆಪಿ ಯಲ್ಲಿ ಪರ್ಯಾಯ ನಾಯಕರಿದ್ದಾರೆ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡರು.
15 ದಿನದ ಹಿಂದೆಯೇ…: ನಾಯಕತ್ವ ಬದಲಾವಣೆ ವಿಷಯದಲ್ಲಿ ಪಕ್ಷದ ತೀರ್ಮಾನಕ್ಕೆ ಬದ್ಧರಾಗಿ ಸಿಎಂ ಸ್ಥಾನದಿಂದ ಕೆಳಗಿಳಿಯಲು ಕಳೆದ ಕೆಲ ದಿನಗಳ ಹಿಂದಿನಿಂದಲೇ ಯಡಿಯೂರಪ್ಪ ಮಾನಸಿಕವಾಗಿ ಸಿದ್ಧವಾಗಿದ್ದರು. ಜುಲೈ 26ಕ್ಕೆ ಈ ಅವಧಿಯಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ 2 ವರ್ಷ ಪೂರ್ಣಗೊಳಿಸಲಿದ್ದಾರೆ. ಅದರೊಳಗೆ ತಮ್ಮ ಅಧಿಕಾರವನ್ನು ಬೇರೆಯವರಿಗೆ ಬಿಟ್ಟುಕೊಡಲು ಅವರು ಸಿದ್ಧರಾಗಿದ್ದಾರೆ.

ಕಳೆದ ತಿಂಗಳು (ಮೇ) ಕೊನೇ ವಾರದಲ್ಲಿ ಮುಖ್ಯಮಂತ್ರಿಗಳು ಆರ್‍ಎಸ್‍ಎಸ್ ರಾಷ್ಟ್ರೀಯ ಹಿರಿಯ ಸಂಚಾಲಕ ಮುಕುಂದ ಜಿ. ಅವರನ್ನು ಭೇಟಿ ಮಾಡಿ ತಮ್ಮನ್ನು ಅಧಿಕಾರದಲ್ಲಿ ಮುಂದುವರೆಸುವ ಇಲ್ಲವೇ ಬಿಡುವ ಪಕ್ಷದ ನಿರ್ಧಾರಕ್ಕೆ ಅಚಲನಾಗಿರುತ್ತೇನೆ ಎಂದು ಸ್ಪಷ್ಟಪಡಿಸಿದ್ದರು. ಈ ವೇಳೆ ಮುಖ್ಯಮಂತ್ರಿಗಳ ಜೊತೆ ಮಾತನಾಡಿದ ಮುಕುಂದ ಜಿ. ಅವರು, ವಯೋಮಿತಿ ಮೀರಿದರೂ ಪಕ್ಷದ ನಿಯಮಾವಳಿ ಬದಿಗೊತ್ತಿ ವಿಶೇಷ ಪ್ರಕರಣ ಎಂದು ಪರಿಗಣಿಸಿ ನಿಮ್ಮನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಗಿದೆ ಎಂಬುದನ್ನು ಯಡಿಯೂರಪ್ಪನವರ ಗಮನಕ್ಕೆ ತಂದಿದ್ದರು.

ಪಕ್ಷ ನಿಮಗೆ ನೀಡಿದ್ದ ಅವಧಿ ಮುಗಿಯುತ್ತಾ ಬಂದಿದೆ. ಪಕ್ಷದ ಆದೇಶಕ್ಕೆ ತಲೆ ಬಾಗಿ ಗೌರವಯುತದಿಂದ ನಿರ್ಗಮಿಸಿ. ನಿಮ್ಮನ್ನು ಪಕ್ಷ ಗೌರವಯುತವಾಗಿಯೇ ನಡೆಸಿಕೊಳ್ಳುತ್ತದೆ. ಯಾವುದೇ ಷರತ್ತುಗಳನ್ನು ಮುಂದಿಡಬೇಡಿ. ನಿಮ್ಮ ಮಕ್ಕಳಿಗೂ ಪಕ್ಷದಲ್ಲಿ ಉಜ್ವಲ ಭವಿಷ್ಯವಿದೆ ಎಂದು ತಿಳಿಸಿದ್ದರು. ಮುಕುಂದ ಜಿ. ಅವರ ಮಾತಿಗೆ ಮನ್ನಣೆ ನೀಡಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ನಂತರ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಜಿ. ಅವರನ್ನು ಭೇಟಿ ಮಾಡಿ ಇದೇ ವಿಚಾರವಾಗಿ ಮುಖ್ಯಮಂತ್ರಿಗಳು ಚರ್ಚಿಸಿದ್ದರು.
ಬಿಜೆಪಿಯ ಕೆಲ ಶಾಸಕರು ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡಿ ಬಂದಿದ್ದರು. ಅಲ್ಲದೇ ಸಿಎಂ ಬದಲಾವಣೆಗಾಗಿ ಕೆಲ ಶಾಸಕರು ಸಹಿ ಸಂಗ್ರಹದಲ್ಲೂ ತೊಡಗಿದ್ದರು. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ದೆಹಲಿಗೆ ತೆರಳಿ ಮೂರು ದಿನಗಳ ಕಾಲ ವಾಸ್ತವ್ಯ ಹೂಡಿ ವರಿಷ್ಠರನ್ನು ಭೇಟಿ ಮಾಡಿ ವಾಪಸ್ಸಾದ ಬೆನ್ನಲ್ಲೇ ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಿದ್ಧ ಎಂದು ಘೋಷಿಸಿರುವುದು ಸಂಚಲನವನ್ನುಂಟು ಮಾಡಿದೆ.

ಯಡಿಯೂರಪ್ಪ ಪುತ್ರ ವಿಜಯೇಂದ್ರ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡಿ, ನಾಯಕತ್ವ ಬದಲಾವಣೆ ವಿಚಾರದಲ್ಲಿ ತೊಡಗಿಕೊಂಡಿರುವ ಶಾಸಕರಿಗೆ ತಕ್ಕ ಶಾಸ್ತಿ ಮಾಡಲು ಯತ್ನಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿತ್ತಾದರೂ, ಬಿಜೆಪಿ ಹಿರಿಯ ಶಾಸಕರೂ ಆದ ಬಸನಗೌಡ ಪಾಟೀಲ್ ಯತ್ನಾಳ್ ಅವರು ವಿಜಯೇಂದ್ರ ಅವರ ದೆಹಲಿ ಭೇಟಿ ಬಗ್ಗೆ ತಮ್ಮದೇ ಆದ ಧಾಟಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಮ್ಯಾರಿಸಸ್‍ನಲ್ಲಿ ಯಡಿ ಯೂರಪ್ಪ ಕುಟುಂಬದವರು ಮಾಡಿರುವ ಆಸ್ತಿ ಸಂಬಂಧ ಇಡಿ ಅಧಿಕಾರಿಗಳು ವಿವರಣೆ ಕೇಳುವ ಸಲುವಾಗಿ ವಿಜಯೇಂದ್ರ ಅವರಿಗೆ ಬುಲಾವ್ ನೀಡಿದ್ದರು. ಈ ವಿಚಾರಕ್ಕಾಗಿ ಅವರು ದೆಹಲಿಯಲ್ಲಿ 3 ದಿನ ಇದ್ದರೇ ಹೊರತು ನಾಯಕತ್ವ ಬದಲಾವಣೆ ಸಂಬಂಧ ವಿಜಯೇಂದ್ರ ಅವರಿಂದ ಮಾಹಿತಿ ಪಡೆಯುವ ಅಗತ್ಯತೆ ವರಿಷ್ಠರಿಗೆ ಇಲ್ಲ ಎಂದಿದ್ದಾರೆ.

Translate »