ಕಬ್ಬಿನ ಎಫ್‍ಆರ್‍ಪಿ ದರ ಹೆಚ್ಚಳಕ್ಕೆ ಆಗ್ರಹಿಸಿ  ಅ.5ರಂದು ವಿಧಾನಸೌಧಕ್ಕೆ ಮುತ್ತಿಗೆ
ಮೈಸೂರು

ಕಬ್ಬಿನ ಎಫ್‍ಆರ್‍ಪಿ ದರ ಹೆಚ್ಚಳಕ್ಕೆ ಆಗ್ರಹಿಸಿ ಅ.5ರಂದು ವಿಧಾನಸೌಧಕ್ಕೆ ಮುತ್ತಿಗೆ

October 1, 2021

ಮೈಸೂರು,ಸೆ.30(ಪಿಎಂ)- ಎರಡು ವರ್ಷಗಳಿಂದ ಕಬ್ಬಿನ ಎಫ್‍ಆರ್‍ಪಿ (ನ್ಯಾಯೋಚಿತ ಮತ್ತು ಕನಿಷ್ಠ ಬೆಂಬಲ ಬೆಲೆ) ದರ ನಿಗದಿ ಮಾಡದ ಕೇಂದ್ರ ಸರ್ಕಾರ, ಇದೀಗ 2021 -22ನೇ ಸಾಲಿಗೆ ಕೇವಲ 5 ರೂ. ಹೆಚ್ಚಿಸಿ, ಕ್ವಿಂಟಾಲ್‍ಗೆ 290 ರೂ. ದರ ನಿಗದಿಗೊಳಿಸಿದ್ದು, ಪುನರ್ ಪರಿಶೀಲಿಸಿ, ಕ್ವಿಂಟಾಲ್‍ಗೆ ಕನಿಷ್ಠ 350 ರೂ. ದರ ನಿಗದಿಗೆ ಒತ್ತಾಯಿಸಿದರೂ ಪ್ರಯೋಜನ ವಾಗಿಲ್ಲ. ಹೀಗಾಗಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಅ.5ರಂದು ವಿಧಾನಸೌಧ ಮುತ್ತಿಗೆ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಕುರು ಬೂರು ಶಾಂತಕುಮಾರ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳ ಹಿಂದೆ ಕ್ವಿಂಟಾಲ್ ಕಬ್ಬಿಗೆ 285 ರೂ. ಎಫ್‍ಆರ್‍ಪಿ ದರ ನಿಗದಿ ಮಾಡಲಾಗಿತ್ತು. ಈಗ ಕೇವಲ 5 ರೂ. ಹೆಚ್ಚಿಸಲಾಗಿದೆ. ಇದರ ಪುನರ್ ಪರಿಶೀಲನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಪತ್ರ ಮುಖೇನ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಈ ಹಿನ್ನೆಲೆ ಯಲ್ಲಿ ವಿಧಾನಸೌಧ ಮುತ್ತಿಗೆ ಚಳವಳಿ ಹಮ್ಮಿಕೊಳ್ಳ ಲಾಗಿದ್ದು, ಕಬ್ಬು ಬೆಳೆಗಾರರ ಇನ್ನಿತರ ಬೇಡಿಕೆಗಳನ್ನು ಈಡೇರಿಸಲೂ ಚಳವಳಿಯಲ್ಲಿ ಆಗ್ರಹಿಸಲಾಗುವುದು ಎಂದರು.

ಕೃಷಿ ಇಲಾಖೆ ಟನ್ ಕಬ್ಬು ಬೆಳೆಯಲು 3,200 ರೂ. ವೆಚ್ಚ ವಾಗುತ್ತದೆ ಎಂದು ಅಂದಾಜಿಸಿದೆ. ಆದರೆ ಸರ್ಕಾರ ಇದನ್ನು ಗಣನೆಗೆ ತೆಗೆದುಕೊಳ್ಳದೇ ಎಫ್‍ಆರ್‍ಪಿ ದರ ನಿಗದಿ ಮಾಡಿದೆ. ಆ ಮೂಲಕ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆಯಾಗಿ ಕಬ್ಬಿನ ಎಫ್‍ಆರ್‍ಪಿ ದರ ನಿಗದಿ ಮಾಡಿದ್ದು, ಇದು ಸರಿಯಲ್ಲ. ರೈತರ ಉತ್ಪಾದನಾ ವೆಚ್ಚದಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಗೊಬ್ಬರ, ಬೀಜದ ಬೆಲೆ ಹೆಚ್ಚಳದ ಜೊತೆಗೆ ಸಾಗಾಣಿಕೆ-ಕಟಾವು ವೆಚ್ಚವೂ ಅಧಿಕವಾಗಿದೆ. ಇಂತಹ ಸಂದರ್ಭದಲ್ಲಿ ಕ್ವಿಂಟಾಲ್‍ಗೆ ಕೇವಲ 5 ರೂ. ಹೆಚ್ಚಳ ಮಾಡಿರುವುದು ಸರಿಯಲ್ಲ ಎಂದು ಅಸಮಾ ಧಾನ ವ್ಯಕ್ತಪಡಿಸಿದರು.
ಕಬ್ಬು ಬೆಳೆಗಾರರನ್ನು ನಿರಂತರ ಶೋಷಣೆ ಮಾಡಲಾಗು ತ್ತಿದೆ. ಸಕ್ಕರೆ ಇಳುವರಿ, ಕಬ್ಬಿನ ತೂಕದಲ್ಲಿ ಮೋಸವಾಗುತ್ತಿ ದ್ದರೆ, ಕಬ್ಬಿನ ಹಣ ಪಾವತಿಯಲ್ಲೂ ವಿಳಂಬ ಮಾಡಲಾಗು ತ್ತಿದೆ. ಕೇಂದ್ರ ಸರ್ಕಾರ ರೈತರ ಆದಾಯವನ್ನು 2022ಕ್ಕೆ ದ್ವಿಗುಣ ಮಾಡುತ್ತೇವೆ ಎಂದು ಘೋಷಣೆ ಮಾಡಿದೆ. ಆದರೆ 2022ಕ್ಕೆ ಕೇವಲ ಮೂರು ತಿಂಗಳು ಮಾತ್ರ ಉಳಿದಿದ್ದು, ರೈತರ ಆದಾಯ ದ್ವಿಗುಣ ಮಾಡುವುದಿರಲಿ, ಉತ್ಪಾದನಾ ವೆಚ್ಚದಷ್ಟಾದರೂ ಬೆಳೆಗಳಿಗೆ ದರ ನಿಗದಿ ಮಾಡುತ್ತಿಲ್ಲ. ಹೀಗಾದರೆ ರೈತರ ಆದಾಯ ದ್ವಿಗುಣ ಗೊಳ್ಳಲು ಸಾಧ್ಯವೇ? ಎಂದು ಪ್ರಶ್ನಿಸಿದರು.

ಕಬ್ಬು ಬೆಳೆಗಾರರಿಗೆ ಕಬ್ಬಿನಿಂದ ಬರುವ ಎಥನಾಲ್ ಹಾಗೂ ಸಹ ಉತ್ಪನ್ನಗಳ ಲಾಭವನ್ನೂ ಹಂಚಿಕೆ ಮಾಡ ಬೇಕು. ಈ ಸಂಬಂಧ ಕಾನೂನು ರೂಪಿಸಬೇಕು. ಕಬ್ಬು ಬೆಳೆಯನ್ನು ಫಸಲ್ ವಿಮಾ ಯೋಜನೆ ವ್ಯಾಪ್ತಿಗೆ ತರ ಬೇಕು. ಈ ಸಂಬಂಧ ಹಲವು ಬಾರಿ ಮನವಿ ಮಾಡಿದರೂ ಪ್ರಯೋ ಜನವಾಗಿಲ್ಲ. ಬೆಳಗಾವಿ, ಬಾಗಲಕೋಟೆ, ಬಿಜಾ ಪುರ ಮತ್ತು ಗುಲ್ಬರ್ಗ ಜಿಲ್ಲೆಗಳಲ್ಲಿ ಪ್ರವಾಹದಿಂದ ಪ್ರತಿ ವರ್ಷ ಒಂದೂವರೆಯಿಂದ 2 ಲಕ್ಷ ಎಕರೆ ಕಬ್ಬು ಹಾನಿಗೆ ಒಳಗಾಗುತ್ತಿದೆ. ಈ ನಷ್ಟಕ್ಕೆ ಪರಿಹಾರವೇ ಸಿಗುತ್ತಿಲ್ಲ. ಹಾಗಾಗಿ ಕಬ್ಬನ್ನು ಫಸಲ್ ವಿಮಾ ಯೋಜನೆ ವ್ಯಾಪ್ತಿಗೆ ತರಬೇಕು ಎಂದು ಆಗ್ರಹಿಸಿದರು. ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕುಗಳಲ್ಲಿ ರೈತರು 2 ಲಕ್ಷ ರೂ.ವರೆಗೆ ಕೃಷಿ ಸಾಲ ಪಡೆಯಲು ಯಾವುದೇ ಜಮೀನು ಭದ್ರತೆ ಅಡಮಾನ ನೋಂದಣಿ ಅಗತ್ಯವಿಲ್ಲ ಎಂಬ ಆರ್‍ಬಿಐ ನಿಯಮ ಇದ್ದರೂ 50 ಸಾವಿರ ರೂ. ಸಾಲಕ್ಕೂ ಅಡಮಾನ ನೋಂದಣಿಗೆ ಒತ್ತಾಯಿಸಲಾಗುತ್ತಿತ್ತು. ಈ ಸಂಬಂಧ ನಿನ್ನೆ ನಡೆದ ಲೀಡ್ ಬ್ಯಾಂಕ್ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಆರ್‍ಬಿಐ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು. ಸಂಘದ ಪದಾಧಿ ಕಾರಿಗಳಾದ ಅತ್ತಹಳ್ಳಿ ದೇವರಾಜ್, ಪಿ.ಸೋಮಶೇಖರ್, ಹಳ್ಳಿಕೆರೆಹುಂಡಿ ಭಾಗ್ಯರಾಜ್, ಬರಡನಪುರ ನಾಗರಾಜ್, ದೇವೇಂದ್ರ ಕುಮಾರ್ ಮತ್ತಿತರರು ಗೋಷ್ಠಿಯಲ್ಲಿದ್ದರು.

Translate »