ಮೈಸೂರು ಜಿಲ್ಲಾ ಕೊರಮ ಸಮಾಜದಿಂದ ಪ್ರತಿಭಟನೆ
ಮೈಸೂರು

ಮೈಸೂರು ಜಿಲ್ಲಾ ಕೊರಮ ಸಮಾಜದಿಂದ ಪ್ರತಿಭಟನೆ

October 1, 2021

ಮೈಸೂರು,ಸೆ.30(ಪಿಎಂ)- ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ತೊಂಡಾಳು ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ವಿಶಾಲಾಕ್ಷಿ (ಕೊರಮ ಸಮು ದಾಯ) ಎಂಬ ಮಹಿಳೆ ಮೇಲೆ ಕ್ಷುಲ್ಲಕ ಕಾರಣಕ್ಕೆ ಅನ್ಯ ಕೋಮಿನವರು (ಸವರ್ಣೀ ಯರು) ಹಲ್ಲೆ ನಡೆಸಿ ದೌರ್ಜನ್ಯ ನಡೆಸಿ ದ್ದಾರೆ ಎಂದು ಆರೋಪಿಸಿ ಹಾಗೂ ಹಲ್ಲೆ ನಡೆಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಒತ್ತಾಯಿಸಿ ಮೈಸೂರು ಜಿಲ್ಲಾ ಕೊರಮ ಸಮಾಜದ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಆ.8 ರಂದು ತೊಂಡಾಳು ಗ್ರಾಮದಲ್ಲಿ ಕೊರಮ ಸಮುದಾಯದ ವಿಶಾಲಾಕ್ಷಿ ಎಂಬುವರ ಮೇಲೆ ಅನ್ಯ ಸಮುದಾಯದ ಕುಟುಂಬ ವೊಂದು ಕ್ಷುಲ್ಲಕ ಕಾರಣಕ್ಕೆ ತೀವ್ರವಾಗಿ ಹಲ್ಲೆ ನಡೆಸಿದೆ. ವಿಶಾಲಾಕ್ಷಿಯವರ ಪಕ್ಕದ ಮನೆಯ ಅಂಗನವಾಡಿ ಶಿಕ್ಷಕಿ ಭಾಗ್ಯಮ್ಮ ಮತ್ತು ಅವರ ಕುಟುಂಬದವರು ಹಲ್ಲೆ ನಡೆಸಿ ದ್ದಾರೆ. ಭಾಗ್ಯಮ್ಮರ ಮನೆ ವಿದ್ಯುತ್ ಸಂಪರ್ಕ ಸಂಬಂಧ ದುರಸ್ತಿ ವೇಳೆ ವಿಶಾಲಾಕ್ಷಿಯವರ ಮನೆಯ ವಿದ್ಯುತ್ ಸಂಪರ್ಕಕ್ಕೆ ಅಡಚಣೆ ಆಗಿದೆ. ಹೀಗಾಗಿ ವಿಶಾಲಾಕ್ಷಿಯವರು ತಮ್ಮ ಮನೆ ವಿದ್ಯುತ್ ಸಂಪರ್ಕಕ್ಕೆ ತೊಂದರೆ ಆಗದಂತೆ ಕೆಲಸ ಮಾಡಬೇಕೆಂದು ಕೋರಿದ್ದ ಸಣ್ಣ ವಿಚಾರಕ್ಕೆ ಭಾಗ್ಯಮ್ಮ ಮತ್ತು ಅವರ ಕುಟುಂಬದವರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದರು.
ವಿಶಾಲಾಕ್ಷಿ ತಮ್ಮ ತಾಯಿ ಪುಟ್ಟಮ್ಮ ಅವ ರೊಂದಿಗೆ ವಾಸವಾಗಿದ್ದು, ಹಲ್ಲೆಗೊಳಗಾಗಿ ಪ್ರಜ್ಞಾಹೀನವಾಗಿ ಬಿದ್ದಿದ್ದ ಮಗಳನ್ನು ಕಂಡು ಪುಟ್ಟಮ್ಮ ಚೀರಾಡುತ್ತಿದ್ದರು. ಇದನ್ನು ಕಂಡು ರಸ್ತೆಯಲ್ಲಿ ಓಡಾಡುತ್ತಿದ್ದವರು ವಿಶಾಲಾಕ್ಷಿ ಯವರನ್ನು ಹುಣಸೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಗಂಡ-ಮಕ್ಕಳಿಲ್ಲದ ವಿಶಾ ಲಾಕ್ಷಿ ಹೇಳಿಕೆಯನ್ನು ಪೊಲೀಸರು ಪಡೆದು ತಮಗೆ ತೋಚಿದಂತೆ ಪ್ರಕರಣ ದಾಖ ಲಿಸಿ, ಕಟ್ಟುನಿಟ್ಟಿನ ಸೆಕ್ಷನ್‍ಗಳನ್ನು ಹಾಕದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದೂರಿದರು.

ವಿಶಾಲಾಕ್ಷಿಯವರಿಗೆ 5 ಲಕ್ಷ ರೂ. ಪರಿಹಾರ ನೀಡಬೇಕು. ಜೊತೆಗೆ 2 ಎಕರೆ ಕೃಷಿ ಭೂಮಿಯನ್ನು ಜಿಲ್ಲಾಡಳಿತ ತಕ್ಷ ಣವೇ ಒದಗಿಸಬೇಕು. ವಿಶಾಲಾಕ್ಷಿಯವರ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಜಾತಿ ನಿಂದನೆಯನ್ನೂ ಮಾಡಲಾಗಿದೆ ಎಂದು ಆರೋಪಿಸಿದರು. ವಿಶಾಲಾಕ್ಷಿ ಮತ್ತು ಅವರ ತಾಯಿ ಪುಟ್ಟಮ್ಮ, ಸಮುದಾಯದ ಮುಖಂಡರಾದ ಮೋಹನ್‍ರಾಜ್, ಬಾಲರಾಜ್, ಮುತ್ತುರಾಜ್, ಶಿವರಾಜ್, ಅಶೋಕ್, ಮುಕುಂದಣ್ಣ ಸೇರಿದಂತೆ ಸಮುದಾಯದ ಹಲವರು ಪ್ರತಿಭಟನೆ ಯಲ್ಲಿ ಪಾಲ್ಗೊಂಡಿದ್ದರು.

Translate »