ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕರ್ನಾಟಕ ರಾಜ್ಯ ದಸಂಸ ಪ್ರತಿಭಟನೆ
ಮೈಸೂರು

ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕರ್ನಾಟಕ ರಾಜ್ಯ ದಸಂಸ ಪ್ರತಿಭಟನೆ

October 1, 2021

ಮೈಸೂರು,ಸೆ.30(ಪಿಎಂ)-ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಮತ್ತು ಬಿಜೆಪಿ ಸರ್ಕಾರಗಳು ಲೂಟಿಕೋರ ನೀತಿ ಅನುಸರಿಸುತ್ತಿವೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ದಸಂಸ-ಡಾ.ಡಿ.ಜಿ.ಸಾಗರ್ ಬಣ) ಮೈಸೂರು ಜಿಲ್ಲಾ ಘಟಕದ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಮೈಸೂರು ಡಿಸಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಇಡೀ ದೇಶದ ಜನತೆ ಕೋವಿಡ್ 2ನೇ ಅಲೆಯ ಅನಾರೋಗ್ಯ ಮತ್ತು ನಿರುದ್ಯೋಗ ಸೇರಿದಂತೆ ಅನೇಕ ರೀತಿಯ ಸಂಕಷ್ಟಕ್ಕೆ ಸಿಲುಕಿರುವಾಗ ಅವರಿಗೆ ನೆರವಾಗಬೇಕಾದ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳು, ಅಗತ್ಯ ವಸ್ತುಗಳ ಬೆಲೆ ಏರಿಕೆ ಮೂಲಕ ಲೂಟಿ ಮಾಡಲು ಮುಂದಾಗಿವೆ ಎಂದು ಆರೋಪಿಸಿದರು.

ಕೃಷಿ ವಿರೋಧಿ ಕಾಯ್ದೆಗಳು ಹಾಗೂ ಕಾರ್ಮಿಕ ವಿರೋಧಿ ಸಂಹಿತೆಗಳನ್ನು ಜಾರಿಗೊಳಿಸಿ ಶ್ರಮಿಕ ವರ್ಗದ ಶೋಷಣೆಗೆ ಈ ಸರ್ಕಾರಗಳು ಮುಂದಾಗಿವೆ. ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಖಾಸಗೀಕರಣಗೊಳಿಸಿ ಜನ ಸಾಮಾನ್ಯರ ಮೇಲೆ ಹೊರೆ ಹಾಕಲು ಹೊರಟಿದೆ. ಇಷ್ಟು ಸಾಲದೆಂಬಂತೆ ಅಗತ್ಯ ವಸ್ತುಗಳ ಬೆಲೆಯನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿ, ಕ್ರೌರ್ಯ ಮೆರೆಯಲಾಗಿದೆ ಎಂದು ಕಿಡಿಕಾರಿದರು. ಸಂಘಟನೆ ಜಿಲ್ಲಾ ಸಂಚಾಲಕ ಮಲ್ಲೇಶ್, ಜಿಲ್ಲಾ ಸಂಘಟನಾ ಸಂಚಾಲಕ ಸುರೇಶ್ , ಸಂಘಟನೆ ಮುಖಂಡರಾದ ಗೋವಿಂದರಾಜು, ದೇವರಾಜ್, ಪುಟ್ಟಮಾದು ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »